ಆರ್ ಎಫ್ ಒ ಮೇಲೆ ದಾಳಿ ನಡೆಸಿದ ಹುಲಿಯ ಸುಳಿವೇ ಇಲ್ಲ

ಮೈಸೂರು. ಜುಲೈ.14: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಕಳ್ಳೀಪುರ ಗ್ರಾಮದ ಜಮೀನಿನಲ್ಲಿ ಆರ್ ಎಫ್ ಓ ಮೇಲೆ ದಾಳಿ ನಡೆಸಿದ ಹುಲಿ ಸೆರೆಗೆ ಕೂಂಬಿಂಗ್ ಕಾರ್ಯಾಚರಣೆಯು ಕಳೆದ ಹತ್ತು ದಿನಗಳಿಂದ ನಡೆಯುತ್ತಿದ್ದು, ಹುಲಿ ಮಾತ್ರ ಇನ್ನೂ ಪತ್ತೆಯಾಗಿಲ್ಲ.
ಜು.1ರಂದು ಗೋಪಾಲಸ್ವಾಮಿ ಬೆಟ್ಟ ವಲಯಾರಣ್ಯಾಧಿಕಾರಿ ರಾಘವೇಂದ್ರ ಅಗಸೆ ಅವರ ಮೇಲೆ ಹುಲಿ ದಾಳಿ ನಡೆಸಿ ಗಾಯಗೊಳಿಸಿದ್ದ ಹಿನ್ನೆಲೆಯಲ್ಲಿ ಜು.3ರಿಂದ ಬಂಡೀಪುರದ ರಾಂಪುರ ಸಾಕಾನೆ ಶಿಬಿರದ ಮೂರು ಆನೆಗಳು, ಡ್ರೋಣ್ ಕ್ಯಾಮೆರಾಗಳ ನೆರವಿನಿಂದ 25 ಅರಣ್ಯ ಸಿಬ್ಬಂದಿ ಕೂಂಬಿಂಗ್ ನಡೆಸುತ್ತಿದ್ದಾರೆ. ಅಲ್ಲದೆ ಹುಲಿ ಸಂಚರಿಸುತ್ತಿದ್ದ ಹೆಜ್ಜೆ ಗುರುತುಗಳ ಆಧಾರದ ಮೇಲೆ ಬೋನು ಅಳವಡಿಸಿ ಹಂದಿಯ ಮಾಂಸ ಇರಿಸಿದ್ದರೂ ಅಲ್ಲಿಗೆ ಹುಲಿ ಬಂದಿಲ್ಲ.
ಜು.7ರಂದು ಕಲಿಗೌಡನಹಳ್ಳಿಯ ಸುರೇಶ್ ಎಂಬುವರ ಜಮೀನಿನಲ್ಲಿ ಮೇಯುತ್ತಿದ್ದ ಹಸುವನ್ನು ಹುಲಿ ಕೊಂದು ಹಾಕಿತ್ತು. ಒಂದು ತಿಂಗಳಿನಲ್ಲಿ ಹುಲಿ ನಾಲ್ಕು ಜಾನುವಾರುಗಳನ್ನು ಕೊಂದಿದ್ದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಅರಣ್ಯ ಇಲಾಖೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಹಿನ್ನೆಲೆ ಅಲ್ಲಿಯೂ ಬೋನು ಅಳವಡಿಸಿ ಕೂಂಬಿಂಗ್ ನಡೆಸಲಾಗುತ್ತಿದೆ. ಜತೆಗೆ ಹುಂಡೀಪುರ ಸಮೀಪ ಮೂರು ಬೋನುಗಳನ್ನು ಅಳವಡಿಸಲಾಗಿದೆ.
ನಾಲ್ಕು ತಿಂಗಳಿನಿಂದ ಹುಂಡೀಪುರ ಸಮೀಪ ಸುಳಿದಾಡುತ್ತಿರುವ ಹುಲಿ ಇತ್ತೀಚೆಗೆ ಮರಿ ಹಾಕಿದ್ದು, ತನ್ನ ಎರಡು ಮರಿಗಳ ಜತೆ ಸಂಚರಿಸುತ್ತಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಬೋನು ಅಳವಡಿಸಿದ್ದರೂ ಹುಲಿ ಬೀಳುತ್ತಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದು, ಜು.8ರ ರಾತ್ರಿ ಗ್ರಾಮದ ರವಿ ಎಂಬುವರ ಜಮೀನಿನ ಬಳಿ ಭಾರಿ ಗಾತ್ರದ ಗಂಡು ಹುಲಿ ಸಂಚರಿಸಿದ್ದು ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿಸಿದೆ.
ಇಲ್ಲಿಯೂ ಕೂಂಬಿಂಗ್ ನಡೆಸಲು ಅರಣ್ಯ ಇಲಾಖೆ ನಿರ್ಧರಿಸಿದ್ದು, 6 ಕ್ಯಾಮರಾಗಳನ್ನು ಅಳವಡಿಸಿದೆ. ಈ ಪ್ರದೇಶದಲ್ಲಿ ಮೂರು ಬೋನುಗಳನ್ನು ಇರಿಸಿದ್ದರೂ ಹುಲಿ ಹತ್ತಿರ ಸುಳಿಯುತ್ತಿಲ್ಲ. ಆದ್ದರಿಂದ ಕೂಂಬಿಂಗ್ ನಡೆಸಲು ಸಿದ್ಧತೆ ನಡೆಸಲಾಗಿದೆ ಎಂದು ಹುಲಿ ಯೋಜನೆಯ ನಿರ್ದೇಶಕ ಟಿ.ಬಾಲಚಂದ್ರ ಹೇಳಿದ್ದಾರೆ. ಇನ್ನೊಂದೆಡೆ ಅರಣ್ಯ ಇಲಾಖೆ ಈವರೆಗೆ ಬಳಸುತ್ತಿದ್ದ ಬೋನಿನಿಂದ ವನ್ಯಜೀವಿಗಳು ತಪ್ಪಿಸಿಕೊಳ್ಳಲು ನಡೆಸುವ ಪ್ರಯತ್ನದಲ್ಲಿ ಕಾಲುಗಳಿಗೆ ತೀವ್ರ ಪೆಟ್ಟಾಗಿ ಗಾಯಗೊಳ್ಳುತ್ತಿದ್ದವು. ಅರಣ್ಯ ಇಲಾಖೆ ತಲಾ ಒಂದು ಲಕ್ಷ ರೂಪಾಯಿ ವೆಚ್ಚದಲ್ಲಿ, ವನ್ಯಜೀವಿ ಗಾಯಗೊಳ್ಳದಂತೆ ವಿಶೇಷವಾಗಿ ನಿರ್ಮಿಸಿದ 3 ಬೋನುಗಳನ್ನು ತಮಿಳುನಾಡಿನಿಂದ ತರಿಸಿಕೊಂಡಿದೆ.
ಹುಲಿ ಸೆರೆ ಸಿಗುವ ತನಕ ಈ ವ್ಯಾಪ್ತಿಯ ಜನಕ್ಕೆ ನೆಮ್ಮದಿ ಇಲ್ಲದಂತಾಗಿದೆ. ಈ ಕುರಿತಂತೆ ಎಸಿಎಫ್ ಎಂ.ಎಸ್. ರವಿಕುಮಾರ್ ಮಾತನಾಡಿ, ಬಂಡೀಪುರ ಅಭಯಾರಣ್ಯದ ವ್ಯಾಪ್ತಿಯ ಕಳ್ಳಿಪುರದಲ್ಲಿ ಹುಲಿ ಅರಣ್ಯ ಇಲಾಖೆಯ ಆರ್ ಎಫ್ ಒ ಮೇಲೆ ದಾಳಿ ನಡೆಸಿದ್ದು, ಸಾಕಾನೆಗಳ ಮೂಲಕ ಹುಲಿಯ ಚಲನ ವಲನದ ಬಗ್ಗೆ ಪರಿಶೀಲನೆ ಮಾಡಲಾಗಿದೆ. ಹುಲಿಯನ್ನು ಸೆರೆ ಹಿಡಿಯುವ ಸಲುವಾಗಿ ಬೋನಿಟ್ಟು ಕಾಯುತ್ತಿರುವುದಾಗಿ ತಿಳಿಸಿದ್ದಾರೆ.
ಹೊಸ ಮಾದರಿ ಬೋನಿಗೆ ಫೈಬರ್ ಅಳವಡಿಕೆ
ಅರಣ್ಯ ಇಲಾಖೆ ಹಳೆಯ ಮಾದರಿಗಿಂತ ಸ್ವಲ್ಪ ವಿಭಿನ್ನವಾದ ಮೂರು ನೂತನ ಬೋನುಗಳನ್ನು ತಮಿಳುನಾಡಿನಿಂದ ತರಿಸಿದೆ.
ಹಳೆಯ ಬೋನುಗಳು ಅತಿಯಾದ ಭಾರವಾಗಿದ್ದರಿಂದ ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸುವುದು ಪ್ರಯಾಸವಾಗಿತ್ತು. ಅಲ್ಲದೆ ಸೆರೆಯಾದ ವನ್ಯಜೀವಿಗಳು ಬೋನಿನಿಂದ ಹೊರಬರುವ ಪ್ರಯತ್ನದಲ್ಲಿ ಕಬ್ಬಿಣದ ಸರಳುಗಳನ್ನು ಕಚ್ಚುವುದು ಹಾಗೂ ಕಾಲುಗಳಿಂದ ಬಡಿಯುತ್ತಿದ್ದರಿಂದ ತೀವ್ರ ಗಾಯಗಳಾಗುತ್ತಿದ್ದವು. ನೂತನ ಬೋನುಗಳಲ್ಲಿ ಬಲಿ ಪ್ರಾಣಿ ಹೊರಗೆ ಕಾಣುವಂತಿದ್ದು ವನ್ಯಜೀವಿಯು ಬೋನಿಗೆ ಬೀಳುವ ಸಂಭವ ಹೆಚ್ಚಾಗಿದೆ.
ಫೈಬರ್ ಅಳವಡಿಸಿದ್ದರಿಂದ ಕಚ್ಚಲು ಸಾಧ್ಯವಾಗುವುದಿಲ್ಲ. ಹಗುರವಾದ ಈ ಬೋನುಗಳಿಗೆ ಗಾಲಿ ಅಳವಡಿಸಿದ್ದರಿಂದ ಸುಲಭವಾಗಿ ಸಾಗಣೆ ಮಾಡಲು ಸಾಧ್ಯವಾಗುತ್ತದೆ ಎಂದು ಬಂಡೀಪುರ ಉಪವಿಭಾಗದ ಎಸಿಎಫ್ ಎಂ.ಎಸ್.ರವಿಕುಮಾರ್ ತಿಳಿಸಿದ್ದಾರೆ.
ಕಾಡು ಪ್ರಾಣಿಗಳ ಬೇಟೆ:
ಬಂಡೀಪುರ ಹುಲಿಯೋಜನೆಯ ಕುಂದಕೆರೆ ಹಾಗೂ ಗೋಪಾಲಸ್ವಾಮಿಬೆಟ್ಟ ವಲಯಗಳಿಗೆ ಭಾರೀ ಪ್ರಮಾಣದ ಬೆಂಕಿ ಬಿದ್ದ ಸಂದರ್ಭದಲ್ಲಿ ಅಲ್ಲಿಂದ ಹೊರಬಂದ ಹುಲಿಗಳು ಸಮೀಪದ ಬೆಟ್ಟಗುಡ್ಡಗಳಲ್ಲಿ ನೆಲೆಕಂಡುಕೊಂಡಿವೆ. ಜಮೀನುಗಳಲ್ಲಿ ಹಾಗೂ ಗುಡ್ಡಗಳಲ್ಲಿ ನೆಲೆಸಿದ್ದ ಕಾಡುಹಂದಿಗಳನ್ನು ಬೇಟೆಯಾಡುತ್ತ ಆಗಾಗ ರೈತರ ಜಾನುವಾರುಗಳನ್ನೂ ಕೊಲ್ಲುತ್ತಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.
ರೈತರು ಜೀವವುಳಿದರೆ ಸಾಕೆಂಬ ಭಾವನೆಯಿಂದ ರಾತ್ರಿ ವೇಳೆ ತಮ್ಮ ಜಮೀನಿಗೆ ಹೋಗುವುದನ್ನೇ ಬಿಡುತ್ತಿದ್ದಾರೆ. ಯಾವುದೇ ಬೇಟೆ ದೊರಕದ ಸಂದರ್ಭದಲ್ಲಿ ಮನುಷ್ಯರ ಮೇಲೆ ಬಿದ್ದರೆ ಗತಿ ಏನು ಎಂಬುದು ಸಾರ್ವಜನಿಕರ ಭೀತಿಗೆ ಕಾರಣವಾಗಿದೆ.

Leave a Comment