ಆರ್‌ಡಿಎ ಮಾದರಿ ಆಡಳಿತ ವಿಶ್ವಾಸ – ಪಾಪಾರೆಡ್ಡಿ

40 ವರ್ಷ ನಂತರ ಮುನ್ನೂರುಕಾಪು ಸಮಾಜಕ್ಕೆ ಅಧ್ಯಕ್ಷ ಸ್ಥಾನ
ರಾಯಚೂರು.ಜೂ.15- ನಗರದಲ್ಲಿ ರಾಜಕೀಯವಾಗಿ ಅತ್ಯಂತ ಪ್ರಾಬಲ್ಯ ಹೊಂದಿದ ಮುನ್ನೂರುಕಾಪು ಸಮಾಜಕ್ಕೆ ಕಳೆದ 40 ವರ್ಷಗಳಿಂದ ದೊರೆಯದ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಈಗ ಶಾಸಕ ಡಾ.ಶಿವರಾಜ ಪಾಟೀಲ್ ಅವರಿಂದ ದೊರೆತಿದ್ದು, ಅತ್ಯಂತ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಈ ಜವಾಬ್ದಾರಿ ನಿರ್ವಹಿಸಿ, ನಗರಕ್ಕೆ ಪ್ರಾಧಿಕಾರದಲ್ಲಿ ಮಾದರಿ ಆಡಳಿತ ನೀಡುವ ನಂಬಿಕೆ ಮಾಜಿ ಶಾಸಕ ಎ.ಪಾಪಾರೆಡ್ಡಿ ಅವರು ವ್ಯಕ್ತಪಡಿಸಿದರು.
ಇಂದು ಯಾಪಚೆಟ್ಟು ಗೋಪಾಲರೆಡ್ಡಿ ಅವರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಅಧಿಕಾರ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಸ್ವೀಕರಿಸಿದ ನಂತರ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡುತ್ತಾ, ಈ ಹಿಂದೆ 10 ವರ್ಷ ಟೌನ್ ಪ್ಲಾನ್ ಹಾಗೂ ನಂತರದ 30 ವರ್ಷಗಳ ಕಾಲ ನಗರಾಭಿವೃದ್ಧಿ ಪ್ರಾಧಿಕಾರದ ಅವಧಿಯಲ್ಲಿ ಅನೇಕ ಸಲ ಮುನ್ನೂರುಕಾಪು ಸಮಾಜದ ಮುಖಂಡರು ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಯತ್ನಿಸಿದರೂ, ಈ ಅವಕಾಶ ದೊರೆತಿರಲಿಲ್ಲ.
1990 ರಲ್ಲಿ ದೊಡ್ಡ ಅಯ್ಯಾಳಪ್ಪ ಅವರು ಅಧ್ಯಕ್ಷ ಸ್ಥಾನಕ್ಕೆ ಬಿರುಸಿನ ಪ್ರಯತ್ನ ನಡೆಸಿದ್ದರೂ, ನಂತರ ಜನತಾ ದಳ ಅವಧಿಯಲ್ಲಿ ಜಿ.ಬಸವರಾಜ ರೆಡ್ಡಿ, ಕಾಂಗ್ರೆಸ್ ಅವಧಿಯಲ್ಲಿ ವಿ.ಕೃಷ್ಣಮೂರ್ತಿ, ಜಿ.ಬಸವರಾಜ ರೆಡ್ಡಿ, ವಿ.ಲಕ್ಷ್ಮೀರೆಡ್ಡಿ ಇವರು ಅಧ್ಯಕ್ಷ ಸ್ಥಾನಕ್ಕೆ ಪ್ರಯತ್ನಿಸಿದ್ದರು. ಆದರೆ, ಈ ಸಂದರ್ಭದಲ್ಲಿ ಈ ಅವಕಾಶ ಮುನ್ನೂರುಕಾಪು ಸಮಾಜಕ್ಕೆ ವಂಚಿತಗೊಂಡಿತ್ತು. ನಾನು ಶಾಸಕನಾಗಿದ್ದ ಅವಧಿಯಲ್ಲಿ ಅಧ್ಯಕ್ಷ ಸ್ಥಾನ ನೀಡುವ ಅವಕಾಶಗಳಿದ್ದರೂ, ಸಮಾಜದಿಂದ ನಾನೇ ಶಾಸಕನಾಗಿರುವ ಕಾರಣಕ್ಕೆ ಆ ಸಂದರ್ಭದಲ್ಲಿ ಆರ್ಯವೈಶ್ಯರು ಮತ್ತು ಬ್ರಾಹ್ಮಣ ಸಮಾಜ ಹಾಗೂ ಹಿಂದುಳಿದ ವರ್ಗದವರಿಗೆ ಅಧ್ಯಕ್ಷ ಸ್ಥಾನದ ಅವಕಾಶ ನೀಡುವ ಅನಿವಾರ್ಯತೆ ಇತ್ತು.
ಆದರೆ, ಈಗ ಡಾ.ಶಿವರಾಜ ಪಾಟೀಲ್ ಶಾಸಕತ್ವದ ಅವಧಿಯಲ್ಲಿ ಮುನ್ನೂರುಕಾಪು ಸಮಾಜದಲ್ಲಿ ಯಾಪಚೆಟ್ಟು ಗೋಪಾಲರೆಡ್ಡಿ ಅವರಿಗೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಒಲಿದು ಬಂದಿದೆ. 40 ವರ್ಷಗಳ ನಂತರ ದೊರೆತ ಈ ಅವಕಾಶ ಸಮರ್ಥವಾಗಿ ಬಳಸಿಕೊಂಡು ಜವಾಬ್ದಾರಿ ಅಧ್ಯಕ್ಷರ ಮೇಲೆ ಹಾಗೂ ಸಮಾಜದ ಮೇಲಿದೆ. ಮುನ್ನೂರುಕಾಪು ಸಮಾಜ ರಾಜಕೀಯವಾಗಿ ಅತ್ಯಂತ ಪ್ರಬಲ ಸಮುದಾಯವಾಗಿದ್ದು, ಹೊಸ ಯೋಜನೆ ಅನುಷ್ಠಾನ ಮೂಲಕ ಇತಿಹಾಸ ಬರೆದ ಘಟನೆ ನಮ್ಮ ಮುಂದೆ ಇವೆ.
ಈ ಹಿಂದೆ ಎಪಿಎಂಸಿ ಅಧ್ಯಕ್ಷರಾಗಿದ್ದ ಗುಲ್ದಾಸ್ ತಿಮ್ಮಾರೆಡ್ಡಿ ಅವರು ತಮ್ಮ ಆಡಳಿತ ಅವಧಿಯಲ್ಲಿ ಎಪಿಎಂಸಿ ವ್ಯಾಪ್ತಿಯಲ್ಲಿ ಕ್ರಾಂತಿಕಾರಕ ನಿರ್ಧಾರಗಳ ಮೂಲಕ ರಾಜ್ಯದಲ್ಲಿಯೇ ಹೆಸರು ಮಾಡಿದ್ದರು. ನಂತರ ನಗರಸಭೆಗೆ ನಮ್ಮ ಸಮುದಾಯದ ಹಿರಿಯರಾದ ಈಶ್ವರಪ್ಪ ಅವರು ಅಧ್ಯಕ್ಷರಾಗಿ ಮಹತ್ವದ ಯೋಜನೆಗಳನ್ನು ಜಾರಿಗೊಳಿಸಿದರು. 1972 ರಲ್ಲಿ ವಿ.ರಾಜಣ್ಣ ಅಧ್ಯಕ್ಷರಾಗಿ ಅಧಿಕಾರ ನಿರ್ವಹಿಸಿದ್ದರು. 1990ರಲ್ಲಿ ನಾನು ನಗರಸಭೆ ಅಧ್ಯಕ್ಷನಾಗಿದ್ದ ಅವಧಿಯಲ್ಲಿ ರಸ್ತೆ ಅಗಲೀಕರಣ ಮೂಲಕ ರಾಜ್ಯದಲ್ಲಿಯೇ ಮಾದರಿ ಕಾರ್ಯ ಕೈಗೊಳ್ಳಲಾಗಿತ್ತು.
ಆದರೆ, ಅಗಲೀಕರಣದಲ್ಲಿ ಆಸ್ತಿ ಕಳೆದುಕೊಂಡವರಿಗೆ ಪರಿಹಾರವೂ ನೀ‌ಡಿದ ಇತಿಹಾಸ ಮುನ್ನೂರುಕಾಪು ಸಮಾಜದ ಆಡಳಿತಕ್ಕೆ ಸಲ್ಲುತ್ತದೆ. ಚುನಾವಣೆ ಸಂದರ್ಭದಲ್ಲಿ ಡಾ.ಶಿವರಾಜ ಪಾಟೀಲ್ ಅವರು, ಮುನ್ನೂರುಕಾಪು ಸಮಾಜಕ್ಕೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ನೀಡುವ ಭರವಸೆ ನೀಡಿದ್ದರು. ಈ ಭರವಸೆಯಂತೆ ಅವರು, ಈಗ ಸಮಾಜದ ಗೋಪಾಲರೆಡ್ಡಿ ಅವರಿಗೆ ಅಧಿಕಾರ ನೀಡಿರುವುದು ಅತ್ಯಂತ ಸ್ವಾಗತಾರ್ಹವಾಗಿದೆ. ಸಮಾಜ ಇವರ ಕಾರ್ಯಕ್ಕೆ ಸದಾ ಬೆಂಬಲಿಸುತ್ತದೆಂದರು.
ಈ ಸಂದರ್ಭದಲ್ಲಿ ಸಂಸದ ರಾಜಾ ಅಮರೇಶ್ವರ ನಾಯಕ ಅವರು ಮಾತನಾಡುತ್ತಾ, ಕೇಂದ್ರ ಮತ್ತು ರಾಜ್ಯಗಳಲ್ಲಿ ಬಿಜೆಪಿಯ ಸರ್ಕಾರವಿದ್ದು, ನಗರಾಭಿವೃದ್ಧಿಯ ಪ್ರಾಧಿಕಾರದ ಅಭಿವೃದ್ಧಿಗೆ ಅಗತ್ಯವಾದ ಎಲ್ಲಾ ನೆರವು ನೀಡುವುದಾಗಿ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಶಾಸಕ ಡಾ.ಶಿವರಾಜ ಪಾಟೀಲ್ ಅವರು ಮಾತನಾಡುತ್ತಾ, ಚುನಾವಣೆ ಸಂದರ್ಭದಲ್ಲಿ ಮುನ್ನೂರುಕಾಪು ಸಮಾಜಕ್ಕೆ ಅಧ್ಯಕ್ಷ ಸ್ಥಾನ ನೀಡುವ ಭರವಸೆ ನೀಡಲಾಗಿತ್ತು.
ಮಾಜಿ ಶಾಸಕ ಎ.ಪಾಪಾರೆಡ್ಡಿ ಅವರಿಗೆ ಈ ಬಗ್ಗೆ ವಾಗ್ದಾನ ಮಾಡಿದ್ದೆ. ಈಗ ಈ ಮಾತನ್ನು ಉಳಿಸಿಕೊಂಡಿದ್ದೇನೆ. ಈ ಹಿಂದೆ ಎ.ಪಾಪಾರೆಡ್ಡಿ ಅವರು ಶಾಸಕರಾಗಿದ್ದ ಅವಧಿಯಲ್ಲಿ ಆರ್ಯವೈಶ್ಯ , ಬ್ರಾಹ್ಮಣ, ಹಿಂದುಳಿದ ಸಮಾಜದವರಿಗೆ ಅಧಿಕಾರ ದೊರೆತಿತ್ತು. ಆದರೆ, ಮುನ್ನೂರುಕಾಪು ಸಮಾಜದಲ್ಲಿ ಮಾತ್ರ ಅವಕಾಶ ದೊರೆತಿರಲಿಲ್ಲ. ಈಗ ಈ ಅವಕಾಶ ಒದಗಿಸಲಾಗಿದ್ದು, ಸಮರ್ಥವಾಗಿ ಕಾರ್ಯ ನಿರ್ವಹಿಸುವಂತೆ ಸೂಚಿಸಿದರು.

Share

Leave a Comment