ಆರ್ಯ, ಮೇಘನಾ ರಾಜ್ ಅಭಿನಯದ ‘ಒಂಟಿ’ ಜುಲೈ 5 ರಂದು ತೆರೆಗೆ

ಬೆಂಗಳೂರು, ಜು 1-  ಟ್ರೇಲರ್ ಮೂಲಕ ಜಾಲತಾಣಗಳಲ್ಲಿ ಸಾಕಷ್ಟು ಗಮನ ಸೆಳೆದಿರುವ ಆರ್ಯ, ಮೇಘನಾ ರಾಜ್ ಅಭಿನಯದ ‘ಒಂಟಿ’ ಚಿತ್ರ ಜುಲೈ 5 ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ

‘ಆರಡಿ ಹೈಟು ನಿಂತ್ರೆ ಫೈಟು’ ಎಂಬ ಕ್ಯಾಚಿ ಟ್ಯಾಗ್ ಲೈನ್ ಹೊಂದಿರುವ ಚಿತ್ರವನ್ನು ಶ್ರೀ ವಿಜಯ್ ನಿರ್ದೇಶಿಸಿದ್ದು, ಕ್ಲಾಸ್ ಹಾಗೂ ಮಾಸ್ ವಲಯದ ಪ್ರೇಕ್ಷಕರಿಬ್ಬರನ್ನೂ ಸೆಳೆಯುವಂತಹ ಲವ್ ಕಮ್ ಥ್ರಿಲ್ಲರ್ ಚಿತ್ರ ಎಂದು ನಾಯಕ ನಟ ಆರ್ಯ ತಿಳಿಸಿದ್ದಾರೆ

ಮೇಘನಾ ರಾಜ್ ಕಾಲೇಜು ಕನ್ಯೆಯಾಗಿ ಕಾಣಿಸಿಕೊಂಡಿದ್ದು, ಡೈನಮಿಕ್ ಹೀರೋ ದೇವರಾಜ್, ಶರತ್ ಲೋಹಿತಾಶ್ವ, ಗಿರಿಜಾ ಲೋಕೇಶ್, ಪವನ್ ಮೊದಲಾದವರ ತಾರಾಗಣವಿದೆ.

“ಹಾಸ್ಯ ಪಾತ್ರಗಳಲ್ಲಿ ನಟಿಸುವ ನಾನು ‘ಒಂಟಿ’ಯಲ್ಲಿ ಕಾಮಿಡಿಯ ಜೊತೆಗೆ ಗಂಭೀರ ಹಾಗೂ ಭಾವನಾತ್ಮಕ ಪಾತ್ರದಲ್ಲಿ ಕಾಣಿಸಿಕೊಂಡಿರುವೆ.  ಈ ಪಾತ್ರ ನನ್ನ ಮಟ್ಟಿಗೆ ಸವಾಲಾಗಿತ್ತು” ಎಂದು ಪವನ್ ಹೇಳಿಕೊಂಡಿದ್ದಾರೆ.

“ಪರಿಸ್ಥಿತಿ ಮನುಷ್ಯನನ್ನು ಹೇಗೆ ರಾಮ ಅಥವಾ ರಾವಣನನ್ನಾಗಿಸುತ್ತದೆ ಎಂಬ ಅಂಶವನ್ನು ಚಿತ್ರದಲ್ಲಿ ಅಳವಡಿಸಿಕೊಳ್ಳಲಾಗಿದೆ” ಎಂದು ನಿರ್ದೇಶಕ ಶ್ರೀ ವಿಜಯ್ ತಿಳಿಸಿದ್ದು, ಜುಲೈ 5ರಂದು ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬಂದು ವೀಕ್ಷಿಸಿ ಹರಸುವಂತೆ ಮನವಿ ಮಾಡಿದ್ದಾರೆ

Leave a Comment