ಆರ್ಥಿಕ ಸುವ್ಯವಸ್ಥೆಗೆ ನೋಟು ಅಮಾನ್ಯೀಕರಣ : ಜೇಟ್ಲಿ ಸ್ಪಷ್ಟನೆ

ನವದೆಹಲಿ, ನ. ೮- ದೇಶದ ಆರ್ಥಿಕ ಪರಿಸ್ಥಿತಿಯನ್ನು ಸರಿ ದಾರಿಗೆ ತರಲು ನೋಟು ಅಮಾನ್ಯೀಕರಣ ತೀರ್ಮಾನ ಕೈಗೊಳ್ಳಲಾಗಿತ್ತೇ ಹೊರತು ನಗದು ಹಣವನ್ನು ಮುಟ್ಟುಗೋಲು ಹಾಕಿಕೊಳ್ಳುವ ಉದ್ದೇಶ ಈ ತೀರ್ಮಾನದ ಹಿಂದೆ ಇರಲಿಲ್ಲ ಎಂದು ಕೇಂದ್ರದ ಹಣಕಾಸು ಸಚಿವ ಅರುಣ್ ಜೇಟ್ಲಿ ಸ್ಪಷ್ಟಪಡಿಸಿದ್ದಾರೆ.

ದೇಶದಲ್ಲಿ ಗರಿಷ್ಠ ಮುಖಬೆಲೆಯ 500 ಮತ್ತು 1000 ರೂ. ನೋಟುಗಳ ಅಮಾನ್ಯೀಕರಣ ತೀರ್ಮಾನವಾಗಿ 2 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನೋಟು ಅಮಾನ್ಯೀಕರಣದ ಉದ್ದೇಶವನ್ನು ಸಮರ್ಥಿಸಿಕೊಂಡಿರುವ ಅವರು, ದೇಶದ ಆರ್ಥಿಕ ಸ್ಥಿತಿಯನ್ನು ಸರಿದಾರಿಗೆ ತರಲು ಈ ಅಮಾನ್ಯೀಕರಣ ಅಗತ್ಯವಿತ್ತು ಎಂದು ಪ್ರತಿಪಾದಿಸಿದರು.

ಈ ಅಮಾನ್ಯೀಕರಣದ ಉದ್ದೇಶ ಯಾವುದೇ ನಗದು ಹಣವನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿರಲಿಲ್ಲ ಎಂದು ಅವರು ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ.

ನೋಟು ಅಮಾನ್ಯೀಕರಣದ ಬಗ್ಗೆ ಕಟು ಟೀಕೆಗಳು ವ್ಯಕ್ತವಾಗಿರುವುದಕ್ಕೆ ಟೀಕಿಸಿರುವ ಅವರು, ಬ್ಯಾಂಕುಗಳಲ್ಲಿ ಜಮಾ ಆದ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳುವ ಉದ್ದೇಶದಿಂದ ನೋಟು ಅಮಾನ್ಯೀಕರಣ ಮಾಡಿಲ್ಲ. ದೇಶದಲ್ಲಿ ಆರ್ಥಿಕ ಸ್ಥಿತಿಯನ್ನು ಸರಿದಾರಿಗೆ ತಂದು ತೆರಿಗೆಗೆ ಒಲಪಡುವವರು ತೆರಿಗೆಗಳನ್ನು ಸಕಾಲದಲ್ಲಿ ಸರಿಯಾಗಿ ಪಾವತಿ ಮಾಡುವ ಉದ್ದೇಶದಿಂದ   ನೋಟು ಅಮಾನ್ಯೀಕರಣ ತೀರ್ಮಾನವನ್ನು ಕೈಗೊಳ್ಳಲಾಯಿತು ಎಂದವರು ಬ್ಲಾಗ್‌ನಲ್ಲಿ ವಿವರಿಸಿದ್ದಾರೆ.

ದೇಶ ನಗದು ವ್ಯವಹಾರದಿಂದ ಡಿಜಿಟಲ್ ವ್ಯವಹಾರಗಳತ್ತ ಹೋಗಲು ನೋಟು ಅಮಾನ್ಯೀಕರಣ ಅಗತ್ಯವಿತ್ತು. ಈ ನೋಟು ಅಮಾನ್ಯೀಕರಣದಿಂದ ಹೆಚ್ಚಿನ ಜನ ತೆರಿಗೆ ವ್ಯಾಪ್ತಿಗೆ ಬರಲು ಸಾಧ್ಯವಾಯಿತು ಎಂದು ಅವರು ನೋಟು ಅಮಾನ್ಯೀಕರಣವನ್ನು ಸಮರ್ಥಿಸಿಕೊಂಡು ಕೇಂದ್ರ ಸರ್ಕಾರದ ಹಲವು ಉತ್ತಮ ತೀರ್ಮಾನಗಳಲ್ಲಿ ನೋಟು ಅಮಾನ್ಯೀಕರಣವವು ಒಂದು ಎಂದು ಬ್ಲಾಗ್‌ನಲ್ಲಿ ಹೇಳಿಕೊಂಡಿದ್ದಾರೆ.

ಆರ್‌ಬಿಐನ ವರದಿಗಳಂತೆ ನವೆಂಬರ್ -2016ಕ್ಕೂ ಮೊದಲು ಚಲಾವಣೆಯಲ್ಲಿದ್ದ 500 ರೂ. ಮತ್ತು 1000 ರೂ. ಮುಖಬೆಲೆಯ 15.41 ಲಕ್ಷ ಕೋಟಿ ಮೊತ್ತದ ಪೈಕಿ ನೋಟು ಅಮಾನ್ಯೀಕರಣದ ನಂತರ 15.31 ಲಕ್ಷ ಮೊತ್ತದ ನೋಟುಗಳು ಬ್ಯಾಂಕುಗಳಿಗೆ ವಾಪಸ್ಸಾಗಿವೆ ಎಂದು ಅವರು ಹೇಳಿದ್ದಾರೆ.

ಕೇಂದ್ರ ಸರ್ಕಾರ ಮೊದಲು ಭಾರತದ ಹೊರಗಿರುವ ಕಪ್ಪು ಹಣವನ್ನು ಗುರಿಯಾಗಿಸಿ ಆ ಹಣವನ್ನು ವಾಪಸ್ ತರುವ ತೀರ್ಮಾನ ಮಾಡಿತ್ತು. ಅದರಂತೆ ಕಪ್ಪುಹಣ ಹೊಂದಿರುವವರು ದಂಡ ಪಾವತಿಸಿ ದೇಶಕ್ಕೆ ಹಣ ವಾಪಸ್ ತರುವಂತೆ ಸೂಚನೆ ನೀಡಲಾಗಿತ್ತು. ಈ ಸೂಚನೆಯನ್ನು ಪಾಲಿಸಲು ವಿಫಲರಾದವರ ವಿರುದ್ಧ ಕಪ್ಪು ಹಣ ಕಾಯ್ದೆಯಡಿ ಕ್ರಮಕೈಗೊಳ್ಳಲಾಗುವುದು. ವಿದೇಶದಲ್ಲಿ ಕಪ್ಪು ಹಣ ಹೊಂದಿರುವ ಖಾತೆಗಳ ಬಗ್ಗೆ ಸರ್ಕಾರಕ್ಕೆ ಸಂಪೂರ್ಣ ಮಾಹಿತಿಗಳು ಲಭ್ಯವಾಗಿವೆ. ಕಪ್ಪು ಹಣ ಹೊಂದಿರುವವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದರು.

ಎರಡು ವರ್ಷದ ಹಿಂದೆ ಕೈಗೊಳ್ಳಲಾದ ನೋಟು ಅಮಾನ್ಯೀಕರಣ ತೀರ್ಮಾನವನ್ನು ಕೇಂದ್ರ ಹಮಕಾಸು ಸಚಿವ ಅರುಣ್ ಜೇಟ್ಲಿ ಸಮರ್ಥಿಸಿಕೊಂಡಿದ್ದರೂ ವಿಪಕ್ಷಗಳು ದೇಶಾದ್ಯಂತ ನೋಟು ಅಮಾನ್ಯೀಕರಣದ ವಿರುದ್ಧ ಕರಾಳ ದಿನಾಚರಣೆ ಆಚರಿಸುತ್ತಿದ್ದು, ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೋಟು ಅಮಾನ್ಯೀಕರಣದ ಉದ್ದೇಶ ಈಗಲೂ ರಹಸ್ಯವಾಗಿಯೇ ಉಳಿದಿದೆ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರಮೋದಿ ಸರ್ಕಾರದ ನೋಟು ಅಮಾನ್ಯೀಕರಣ ಸ್ವಾರ್ಥ ಹಿತಾಸಕ್ತಿಯಿಂದ ಕೂಡಿದ್ದು, ಇದು ದೇಶದ ಆರ್ಥಿಕತೆಗೆ ಆದ ದೊಡ್ಡ ಗಾಯ ಎಂದು ಬಣ್ಣಿಸಿದ್ದಾರೆ.

ನೋಟು ಅಮಾನ್ಯೀಕರಣ ಆಗಿ ಎರಡು ವರ್ಷವಾದರೂ ಅಮಾನ್ಯೀಕರಣದ ಕಾರಣಗಳು ರಹಸ್ಯವಾಗಿಯೇ ಉಳಿದಿವೆ. ದೇಶವನ್ನು ಪ್ರಪಾತಕ್ಕೆ ತಳ್ಳಿದ ಅಮಾನ್ಯೀಕರಣದ ಉದ್ದೇಶವೇ ಅರ್ಥವಾಗಿಲ್ಲ ಎಂದವರು ಟೀಕಿಸಿದರು.

ಮಮತಾ ಟೀಕೆ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಹ ನೋಟು ಅಮಾನ್ಯೀಕರಣ ಒಂದು ದೊಡ್ಡ ದುರಂತ ಎಂದು ಬಣ್ಣಿಸಿದ್ದಾರೆ. ನೋಟು ಅಮಾನ್ಯೀಕರಣವನ್ನು ಪ್ರಕಟಿಸಿದ ನ. 8, 2016 ದೇಶದ ಕರಾಳ ದಿನ ಎಂದು ಅವರು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

ನೋಟು ಅಮಾನ್ಯೀಕರಣವಾಗಿ ಎರಡು ವರ್ಷ ಪೂರೈಸಿರುವ ಸಂದರ್ಭದಲ್ಲಿ ದೇಶದ ಆರ್ಥಿಕ ಪರಿಸ್ಥಿತಿಯನ್ನು ಗಮನಿಸಿದರೆ ಇದು ಕರಾಳ ದಿನ. ದೇಶಕ್ಕೆ ಆದ ದೊಡ್ಡ ಅವಘಡ ಎಂಬುದನ್ನು ಎಲ್ಲ ಆರ್ಥಿಕ ತಜ್ಞರು, ಸಾಮಾನ್ಯ ಜನ ಪ್ರತಿಯೊಬ್ಬರೂ ಒಪ್ಪಿಕೊಳ್ಳಿತ್ತಾರೆ ಎಂದು ಮಮತಾ ಬ್ಯಾನರ್ಜಿ ಟ್ವಿಟ್‌ನಲ್ಲಿ ತಿಳಿಸಿದ್ದಾರೆ.

Leave a Comment