ಆರ್ಥಿಕ ಪುನಶ್ಚೇತನ ಕೇಂದ್ರದ ಸಪ್ತ ಸೂತ್ರ: ಸಾಲ ಪಡೆಯಲು ರಾಜ್ಯಗಳಿಗೆ ಹೆಚ್ಚಿನ ಅಧಿಕಾರ ಪಿಎಂ-ಇ ವಿದ್ಯಾ ಯೋಜನೆ ಜಾರಿ

ನವದೆಹಲಿ, ಮೇ ೧೭- ಕೊರೊನಾ ತಡೆಗೆ ಲಾಕ್‌ಡೌನ್ ಜಾರಿಯಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಆರ್ಥಿಕತೆಗೆ ಪುನಶ್ಚೇತನ ನೀಡಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಸಪ್ತ ಸೂತ್ರಗಳನ್ನು ಪ್ರಕಟಿಸಿದ್ದಾರೆ.
ದೇಶದ ಆರ್ಥಿಕ ಸ್ಥಿತಿಯನ್ನು ಬಲವರ್ಧನೆ ಮಾಡಲು ಮನ್‌ರೇಗಾ, ಆರೋಗ್ಯ, ಶಿಕ್ಷಣ, ಉದ್ಯಮ, ಉದ್ಯಮ ಸರಳೀಕರಣ, ಸಾರ್ವಜನಿಕ ವಲಯದ ನೀತಿಗಳು, ರಾಜ್ಯಗಳಿಗೆ ಅನುದಾನ ಮತ್ತು ಸಂಪನ್ಮೂಲಗಳನ್ನು ಒಳಗೊಂಡ 7 ಸೂತ್ರಗಳನ್ನು ಅವರು ಪ್ರಕಟಿಸಿದ್ದಾರೆ.

ಪ್ರಧಾನಿ ಮೋದಿ ಅವರು ಈಗಾಗಲೇ ಘೋಷಣೆ ಮಾಡಿರುವ 20 ಲಕ್ಷ ಕೋಟಿ ರೂ. ಪ್ಯಾಕೇಜ್‌ನ ಕೊನೆಯ ಹಂತದ ಪ್ಯಾಕೇಜ್ ವಿವರಗಳನ್ನು ದೆಹಲಿಯಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ನಿರ್ಮಲಾ ಸೀತಾರಾಮನ್ ಅಂಕಿ ಅಂಶಗಳ ಸಮೇತ ನೀಡಿದರು.

ಈ ಸಂದರ್ಭದಲ್ಲಿ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಉಪಸ್ಥಿತರಿದ್ದರು.
ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಸುವ ಮಹತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆ (ಮನ್‌ರೇಗಾ) ಅನುಷ್ಠಾನಕ್ಕೆ 40 ಸಾವಿರ ಕೋಟಿ ರೂ. ಹೆಚ್ಚುವರಿ ಅನುದಾನ ಒದಗಿಸಲಾಗುವುದು ಎಂದು ಅವರು ತಿಳಿಸಿದರು.

ವಲಸೆ ಕಾರ್ಮಿಕರು ತಮ್ಮ ತಮ್ಮ ತವರುಗಳಿಗೆ ತೆರಳಿರುವುದರಿಂದ ಅವರಿಗೆ ಉದ್ಯೋಗಾವಕಾಶ ಕಲ್ಪಿಸಲು ಈ ಮೊತ್ತವನ್ನು ಬಿಡುಗಡೆ ಮಾಡಲಾಗುವುದು ಎಂದು ಅವರು ತಿಳಿಸಿದರು.

ಆರೋಗ್ಯ ಕ್ಷೇತ್ರದಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆಗಳು ಮತ್ತು ಪ್ರಯೋಗಾಲಯಗಳನ್ನು ತೆರೆಯಲಾಗುವುದು. ಸಾಂಕ್ರಾಮಿಕ ರೋಗ ತಡೆಗೆ ಬ್ಲಾಕ್ ಮಟ್ಟದಲ್ಲಿ ಪಬ್ಲಿಕ್ ಹೆಲ್ತ್ ಮತ್ತು ವೆಲ್‌ನೆಸ್ ಸೆಂಟರ್‌ಗಳನ್ನು ತೆರೆಯಲಾಗುವುದು. ಎಲ್ಲ ಜಿಲ್ಲೆಗಳ್ಲಲೂ ಸಾಂಕ್ರಾಮಿಕ ರೋಗ ತಡೆಗೆ ಸಂಬಂಧಿಸಿದ ಸಂಶೋಧನೆಗೆ ಒತ್ತು ನೀಡಲಾಗುವುದು ಎಂದರು. ಪ್ರತಿಯೊಂದು ಜಿಲ್ಲೆಯಲ್ಲೂ ಸಾಂಕ್ರಾಮಿಕ ತಡೆ ಬ್ಲಾಕ್‌ಗಳನ್ನು ಪ್ರಾರಂಭಿಸಲಾಗುವುದು ಎಂದರು.

 ಪಿಎಂ ಇ-ವಿದ್ಯಾ
ವಿದ್ಯಾರ್ಥಿಗಳಿಗೆ ಆನ್‌ಲೈನ್ ಶಿಕ್ಷಣ ನೀಡಲು ಪಿಎಂ ಇ-ವಿದ್ಯಾ ಯೋಜನೆಯನ್ನು ಜಾರಿಗೆ ತರಲಾಗುವುದು. 1 ರಿಂದ 12ನೇ ತರಗತಿವರೆಗೆ ಆನ್‌‌ಲೈನ್ ಶಿಕ್ಷಣ ನೀಡಲು ಒಂದೊಂದು ತರಗತಿಗೆ ಒಂದೊಂದು ಚಾನಲ್ ಪ್ರಾರಂಭಿಸಲಾಗುವುದು. ದಿವ್ಯಾಂಗ ಮಕ್ಕಳಿಗೂ ಅನುಕೂಲವಾಗುವಂತೆ ಶೈಕ್ಷಣಿಕ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದರು.

ದೇಶದ 100 ವಿಶ್ವವಿದ್ಯಾಲಯಗಳಲ್ಲಿ ಆನ್‌ಲೈನ್ ಶಿಕ್ಷಣ ಪ್ರಾರಂಭಕ್ಕೆ ಅನುಮತಿ ನೀಡಲಾಗುವುದು. ಜತೆಗೆ ರೆಡಿಯೋ ಚಾನೆಲ್‌ಗಳ ಮುಖಾಂತರ ಸಮುದಾಯ ರೆಡಿಯೋ ಚಾನೆಲ್ ಮೂಲಕ ಶಿಕ್ಷಣ ನೀಡಲಾಗುವುದು ಎಂದರು.
 

ಉದ್ಯಮಗಳಿಗೆ ಪರಿಹಾರ
ಲಾಕ್‌ಡೌನ್ ಹಿನ್ನೆಲೆಯಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಉದ್ಯಮಗಳಿಗೆ ವಿಶೇಷ ಪರಿಹಾರ ಘೋಷಣೆ ಮಾಡಿರುವ ನಿರ್ಮಲಾಸೀತಾರಾಮನ್, ಕಂಪೆನಿಗಳು ಪಡೆದಿರುವ ಸಾಲವನ್ನು ಮರುಪಾವತಿ ಮಾಡದಿದ್ದರೆ ಅವುಗಳನ್ನು ಸುಸ್ತಿದಾರ ಕಂಪೆನಿ ಎಂದು ಪರಿಗಣಿಸದಿರಲು ನಿರ್ಧರಿಸಲಾಗಿದೆ. ಒಂದು ವರ್ಷ ಕಾಲ ಈ ಸೌಲಭ್ಯವನ್ನು ಕಲ್ಪಿಸಲು ತೀರ್ಮಾನಿಸಲಾಗಿದ್ದು, ಇದರಿಂದ ಕಿರು, ಸಣ್ಣ, ಮಧ್ಯಮ, ಎಂಎಸ್‌ಎಂಇ ಉದ್ಯಮಿಗಳಿಗೆ ಬೆಂಬಲವಾಗಿ ನಿಲ್ಲಲು ಸರ್ಕಾರ ತೀರ್ಮಾನಿಸಿದೆ ಎಂದರು.

ಯಾವುದೇ ಕಂಪೆನಿ ದಿವಾಳಿ ಎಂದು ಘೋಷಿಸಲು ಇದ್ದ 1 ಲಕ್ಷದ ಮಿತಿಯನ್ನು 1 ಕೋಟಿಗೆ ಏರಿಕೆ ಮಾಡಲಾಗಿದೆ. ಉದ್ಯಮ ಸರಳೀಕರಣ ಕುರಿತು ವಿವರಿಸಿದ ಅವರು, ಕಂಪೆನಿಗಳ ಕಾಯ್ದೆಗೆ ತಿದ್ದುಪಡಿ ತರಲಾಗುವುದು. ಇದನ್ನು ಸುಗ್ರೀವಾಜ್ಞೆ ಮೂಲಕ ಕಂಪೆನಿ ಕಾಯ್ದೆಯ ತಿದ್ದುಪಡಿಗಳನ್ನು ಪ್ರಕಟಿಸಲಾಗುವುದು ಎಂದರು.
ಅಪರಾಧಿಕರಣದಿಂದ ಕಂಪೆನಿಗಳನ್ನು ಮುಕ್ತಗೊಳಿಸುವ ಸಲುವಾಗಿ 7 ಅಪರಾಧ ಪ್ರಕರಣಗಳನ್ನು ಕೈಬಿಡಲು ಉದ್ದೇಶಿಸಿದೆ ಎಂದರು. ಉದ್ಯಮಗಳು ವಿದೇಶಿ ಮಾರುಕಟ್ಟೆಯಲ್ಲಿ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು ಎಂದರು.

ಖಾಸಗೀಕರಣ
ಸಾರ್ವಜನಿಕ ವಲಯದ ಕೆಲವು ಉದ್ಯಮಗಳನ್ನು ಖಾಸಗಿಕರಣ ಮಾಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ ಎಂದರು
ಖಾಸಗಿಯವರು ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ಹೆಚ್ಚು ಬಂಡವಾಳ ಹೂಡಲು ಅವಕಾಶ ಕಲ್ಪಿಸಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಶೀಘ್ರವೇ ಹೊಸ ನೀತಿಯೊಂದನ್ನು ರೂಪಿಸಲಾಗುವುದು ಎಂದು ಕೇಂದ್ರ ಸಚಿವರು ತಿಳಿಸಿದರು.

ಲಾಕ್‌ಡೌನ್‌ನಿಂದ ರಾಜ್ಯ ಸರ್ಕಾರಗಳು ಆರ್ಥಿಕವಾಗಿ ತೊಂದರೆಗೆ ಸಿಲುಕಿದ್ದು, ಇವುಗಳಿಗೆ ಶಕ್ತಿ ತುಂಬಲು ಈಗಾಗಲೇ ತೆರಿಗೆ ನಷ್ಟ ಪರಿಹಾರ ಬಾಬ್ತು ಸಂಬಂಧ 46038 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಏಪ್ರಿಲ್ ಮೊದಲ ವಾರದಲ್ಲೇ 12,390 ಕೋಟಿ ರೂ.ಗಳನ್ನು ಮೊದಲ ಕಂತಿನಲ್ಲಿ ಬಿಡುಗಡೆ ಮಾಡಲಾಗಿದೆ ಎಂದರು.
ಇದಲ್ಲದೆ, ಎನ್‌ಡಿಆರ್‌ಎಫ್‌ಎಸ್ ನಿಧಿಗೆ 11092 ಕೋಟಿ ಹಣವನ್ನು ರಾಜ್ಯ ಸರ್ಕಾರಗಳಿಗೆ ಬಿಡುಗಡೆ ಮಾಡಲಾಗಿದೆ ಎಂದರು .

ರಾಜ್ಯ ಸರ್ಕಾರಗಳು ಸಾಲಪಡೆಯಲು ಇದ್ದ ಮೀತಿಯನ್ನು ಶೇ. 60 ಕ್ಕೆ ಹೆಚ್ಚಿಸಲು ತೀರ್ಮಾನಿಸಲಾಗಿದೆ. ರಾಜ್ಯ ಸರ್ಕಾರಗಳ ಆದಾಯದ ಒಟ್ಟು ಜಿಡಿಪಿಯ ಶೇ. 50 ರಷ್ಟು ಸಾಲ ಪಡೆಯಲು ಅವಕಾಶ ಕಲ್ಪಿಸಲಾಗುವುದು ಎಂದರು.
ಒಂದು ದೇಶ, ಒಂದು ಪಡಿತರ ಯೋಜನೆ ಜಾರಿಗೆ ಪೂರಕ ಸಿದ್ಧತೆಗಳು ನಡೆದಿವೆ ಎಂದರು.

ಸಾಲು ಸಾಲಾಗಿ ವಿವಿಧ ವಲಯಗಳಿಗೆ ಪ್ಯಾಕೇಜ್ ಪ್ರಕಟಿಸಿದ್ದ ನಿರ್ಮಲಾಸೀತಾರಾಮನ್ ಅವರು ಇಂದು ಪ್ರಧಾನಿಗಳ ಪ್ಯಾಕೇಜ್ ಘೋಷಣೆಗೆ ಪೂರಕವಾಗಿ ಕೊನೆಯ ಆರ್ಥಿಕ ಪ್ಯಾಕೇಜ್‌ನ್ನು ಪ್ರಕಟಿಸಿದ್ದಾರೆ.
ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಡವರು, ವಲಸೆ ಕಾರ್ಮಿಕರ ಹಿತರಕ್ಷಣೆ ಜತೆಗೆ ಕೋವಿಡ್ ವಿರುದ್ಧ ನಡೆಸಿರುವ ಹೋರಾಟ ಕ್ರಮಗಳನ್ನು ಅವರು ಇದೇ ಸಂದರ್ಭದಲ್ಲಿ ವಿವರಿಸಿದರು.

Leave a Comment