ಆರ್ಥಿಕ ಅಭಿವೃದ್ಧಿಗೆ ಮೋದಿ ಪಣ  ಮನ್ ಕಿ ಬಾತ್

ನವದೆಹಲಿ, ಮೇ ೩೧- ಕೊರೊನಾ ತಡೆಗೆ 5ನೇ ಹಂತದ ಲಾಕ್ ಡೌನ್ ಜಾರಿಗೊಳಿಸಿದ್ದರೂ, ದೇಶದ ಆರ್ಥಿಕ ಅಭಿವೃದ್ಧಿಗೆ ಮುಕ್ತ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಕೊರೊನಾ ವಿರುದ್ಧದ ಹೋರಾಟವನ್ನು ಮುಂದುವರೆಸುವುದರ ಜೊತೆಗೆ ಸ್ವಾವಲಂಬಿ ಭಾರತವನ್ನು ನಿರ್ಮಿಸುವತ್ತ ಪ್ರತಿಯೊಬ್ಬರೂ ಸರ್ಕಾರದ ಜೊತೆ ಕೈಜೋಡಿಸಬೇಕೆಂದು ಮನವಿ ಮಾಡಿರುವ ಪ್ರಧಾನಿ, ಪ್ರಸಕ್ತ ದಶಕದಲ್ಲಿ ದೇಶವನ್ನು ಹೊಸಎತ್ತರಕ್ಕೆ ಕೊಂಡೊಯ್ಯಲು ಶಕ್ತಿಮೀರಿ ಪ್ರಯತ್ನಿಸುವುದಾಗಿ ಭರವಸೆ ನೀಡಿದ್ದಾರೆ.

ಆಕಾಶವಾಣಿಯ ಜನಪ್ರಿಯ ಕಾರ್ಯಕ್ರಮ ”ಮನ್ ಕಿ ಬಾತ್‌”ನಲ್ಲಿ ಇಂದು ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಕೊರೊನಾ ನಿಯಂತ್ರಣಕ್ಕೆ ಇಡೀ ದೇಶವೇ ಒಗ್ಗಟ್ಟಿನಿಂದ ಸಹಕರಿಸಿದ್ದು, ಮುಂಬರುವ ದಿನಗಳಲ್ಲೂ ಸಾಮೂಹಿಕ ಸಂಕಲ್ಪ ಶಕ್ತಿಯಾಗಿ ಜನರು ಹೋರಾಟ ಮಾಡುವ ಅಗತ್ಯವಿದೆ ಎಂದು ಒತ್ತಿಹೇಳಿದ್ದಾರೆ.

ಕೊರೊನಾ ವಿರುದ್ಧದ ಹೋರಾಟವನ್ನು ಒಂದು ಕಠಿಣ ತಪಸ್ಸು ಎಂಬ ರೀತಿಯಲ್ಲಿ ದೇಶದ ಜನತೆ ಸಾಮೂಹಿಕವಾಗಿ ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ. ಇದೇ ಹೋರಾಟವನ್ನು ಮತ್ತಷ್ಟು ದಿನಗಳ ಕಾಲ ಮುಂದುವರೆಸಬೇಕಾಗಿದೆ. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು. ಕೊರೊನಾ ಮಹಾಮಾರಿಯ ಹೋರಾಟವನ್ನು ದುರ್ಬಲವಾಗಲು ಅವಕಾಶ ನೀಡಬಾರದು. ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ಕಳೆದ ಬಾರಿ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ನನ್ನ ಅನಿಸಿಕೆಗಳನ್ನು ಹಂಚಿಕೊಂಡ ಸಂದರ್ಭದಲ್ಲಿ ಪ್ರಯಾಣಿಕರ ರೈಲು ಚಲಿಸುತ್ತಿರಲಿಲ್ಲ, ಬಸ್‌ಗಳು ಓಡಾಡುತ್ತಿರಲಿಲ್ಲ, ವಿಮಾನ ಹಾರಾಟವೂ ನಿಂತುಹೋಗಿತ್ತು. ಆದರೆ ಇದೀಗ ಬಹಳಷ್ಟು ಸೇವೆಗಳು ಆರಂಭವಾಗಿವೆ. ಶ್ರಮಿಕ ವಿಶೇಷ ರೈಲುಗಳು ಸಂಚರಿಸುತ್ತಿವೆ.
ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ವಿಮಾನ ಹಾರಾಟವೂ ಹಂತಹಂತವಾಗಿ ಪ್ರಾರಂಭವಾಗಿದೆ ಎಂದು ಅವರು ಹೇಳಿದರು.

ಈ ಎಲ್ಲಾ ಚಟುವಟಿಕೆಗಳಿಂದ ಅರ್ಥ ವ್ಯವಸ್ಥೆಯ ಒಂದು ದೊಡ್ಡ ಭಾಗ ನಡೆಯಲು ಆರಂಭಿಸಿದೆ. ಚಟುವಟಿಕೆಗಳು ಮುಕ್ತವಾಗಿ ನಡೆಯಲು ಅವಕಾಶ ಕಲ್ಪಿಸಲಾಗಿದೆ. ಹಾಗೆಂದ ಮಾತ್ರಕ್ಕೆ ನಾವು ಎಚ್ಚರಿಕೆ ತಪ್ಪುವಂತಿಲ್ಲ. ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು, ಅನಗತ್ಯವಾಗಿ ಮನೆಗಳಿಂದ ಹೊರಬರುವುದಕ್ಕೆ ನಿರ್ಬಂಧ ಹೇರಿಕೊಳ್ಳಬೇಕು. ಯಾವುದೇ ರೀತಿಯಲ್ಲೂ ಅಜಾಗರೂಕರಾಗಬಾರದು ಎಂದು ಅವರು ದೇಶವಾಸಿಗಳಿಗೆ ಮನವಿ ಮಾಡಿದರು.

ಎಲ್ಲರ ಸಾಮೂಹಿಕ ಪ್ರಯತ್ನಗಳಿಂದ ಕೊರೊನಾ ವಿರುದ್ಧದ ಹೋರಾಟ ಅತ್ಯಂತ ಶಕ್ತಿಯುತವಾಗಿ ಮುಂದುವರೆದಿದೆ. ನಾವು ವಿಶ್ವದತ್ತ ನೋಡಿದಾಗ ಭಾರತೀಯರ ಸಾಧನೆ ಎಷ್ಟು ದೊಡ್ಡದು ಎಂಬ ಅರಿವಾಗುತ್ತದೆ. ನಮ್ಮ ದೇಶದಲ್ಲಿ ವಿಭಿನ್ನ ಸವಾಲುಗಳಿದ್ದರೂ, ಕೊರೊನಾ ನಿಯಂತ್ರಣಕ್ಕೆ ಒಗ್ಗಟ್ಟಿನ ಪ್ರಯತ್ನ ಮುಂದುವರೆದಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬೇರೆ ದೇಶಗಳಿಗೆ ಹೋಲಿಸಿದರೆ, ನಮ್ಮ ದೇಶದಲ್ಲಿ ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ ಕಡಿಮೆಯಾಗಿದೆಯಾದರೂ, ಈ ಬಗ್ಗೆ ಅಪಾರ ದುಃಖವಿದೆ. ದೇಶದ ಸಾಮೂಹಿಕ ಸಂಕಲ್ಪ ಶಕ್ತಿಯ ಪರಿಣಾಮವಾಗಿ ಕೊರೊನಾ ವಿರುದ್ಧದ ಹೋರಾಟವನ್ನು ಅಭಿಯಾನದ ರೂಪದಲ್ಲಿ ಮುಂದುವರೆಸಿರುವುದು ಶ್ಲಾಘನೀಯ. ದೇಶವಾಸಿಗಳ ಸಂಕಲ್ಪ ಶಕ್ತಿಯೊಂದಿಗೆ ಸೇವಾಶಕ್ತಿ ಕೊರೊನಾ ವಿರುದ್ಧದ ಹೋರಾಟದಲ್ಲಿ ಜೊತೆಯಾಗಿದೆ. ಇಂತಹ ಸಂಕಷ್ಟ ಸಂದರ್ಭದಲ್ಲಿ ಜನರ ಸೇವೆ ಮತ್ತು ತ್ಯಾಗ ಇತರರಿಗೆ ಆದರ್ಶಮಯವಾಗಿದೆ. ಸೇವಾ ಪರಮೋಧರ್ಮಹ, ಸೇವಾ ಸ್ವಯಂ ಮೇ ಸುಖ್ ಹೈ ಸೇವಾ ಮೇ ಹಿ ಸಂತೋಷ್ ಹೈ ಎಂದು ಹೇಳಲಾಗುತ್ತದೆ.

ಸಂಕಷ್ಟದಲ್ಲಿರುವವರ ಸೇವೆಯಲ್ಲಿ ನಿರತರಾಗಿರುವ ಪ್ರತಿಯೊಬ್ಬರ ಕಾರ್ಯವೂ ಅನನ್ಯ ಮತ್ತು ಪ್ರಶಂಸನೀಯ ಎಂದು ಹೇಳಿದರು.ಕೊರೊನಾ ಮಹಾಮಾರಿ ವಿರುದ್ಧ ವೈದ್ಯರು, ನರ್ಸಿಂಗ್ ಸಿಬ್ಬಂದಿ, ಸ್ವಚ್ಛತಾ ಕೆಲಸಗಾರರು, ಪೊಲೀಸ್ ಸಿಬ್ಬಂದಿ, ಮಾಧ್ಯಮದ ಸ್ನೇಹಿತರು, ಮಾಡುತ್ತಿರುವ ಸೇವೆ ಮೆಚ್ಚುವಂತಾದ್ದಾಗಿದೆ ಎಂದು ಹೇಳಿದ್ದಾರೆ.
ಇಡೀ ದೇಶ ಕೊರೊನಾದಿಂದ ಸಂಕಷ್ಟಕ್ಕೆ ಈಡಾಗಿದ್ದರೆ, ಪೂರ್ವಭಾರತದ ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳಲ್ಲಿ ಹಂಫಾನ್ ಚಂಡಮಾರುತ ಅಪಾರ ಹಾನಿಯುಂಟುಮಾಡಿದೆ. ಪೂರ್ವಭಾರತದ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸುವ ಅಗತ್ಯವಿದೆ ಎಂದು ಅವರು ಒತ್ತಿಹೇಳಿದರು.
ವೋಕಲ್ ಫಾರ್ ಲೋಕಲ್
ಕತ್ತಲಿನಿಂದ ಬೆಳಕಿನೆಡೆಗೆ ಸಾಗುವುದು ಮನುಷ್ಯನ ಸ್ವಭಾವ. ಸ್ವಾವಲಂಬಿ ಭಾರತ ಕುರಿತಂತೆ, ದೇಶದಲ್ಲಿ ವ್ಯಾಪಕವಾಗಿ ಚಿಂತನೆ ನಡೆದಿದೆ. ಜನರು ಈಗ ಇದನ್ನೇ ಅಭಿಯಾನ ಮಾಡಿಕೊಳ್ಳಲು ಆರಂಭಿಸಿದ್ದಾರೆ. ಕೆಲವರಂತೂ ತಮ್ಮ ಪ್ರದೇಶಗಳಲ್ಲಿ ತಯಾರಿಸುವ ವಸ್ತುಗಳ ಪಟ್ಟಿ ತಯಾರಿಸಿದ್ದಾರೆಂದೂ ಮತ್ತು ಸ್ಥಳೀಯ ಉತ್ಪನ್ನಗಳನ್ನೇ ಖರೀದಿಸಲು ಜನ ಮುಂದಾಗುತ್ತಿದ್ದಾರೆಂದು ಕೇಳ್ಪಟ್ಟಿದ್ದೇನೆ. ವೋಕಲ್ ಫಾರ್ ಲೋಕಲ್ ಅಭಿಯಾನವನ್ನು ಉತ್ತೇಜಿಸುತ್ತಿದ್ದಾರೆ. ಆ ಮೂಲಕ ಮೇಕ್ ಇನ್ ಇಂಡಿಯಾಗೆ ಪ್ರೋತ್ಸಾಹ ನೀಡಲು ಜನರು ಸಂಕಲ್ಪ ಮಾಡಿದ್ದಾರೆಂದು ಪ್ರಧಾನಿ ತಿಳಿಸಿದ್ದಾರೆ.

ಯೋಗ ಮತ್ತು ಆಯುರ್ವೇದ ಪದ್ಧತಿ, ಕೊರೊನಾ ನಿಯಂತ್ರಣಕ್ಕೆ ಸಹಕಾರಿ ಎಂಬುದು ಸಾಬೀತಾಗಿದೆ. ಕೊರೊನಾ ವೈರಸ್ ಶ್ವಾಸಕೋಶದ ವ್ಯವಸ್ಥೆ ಮೇಲೆ ಎಲ್ಲಕ್ಕಿಂತ ಅಧಿಕವಾಗಿ ಪರಿಣಾಮ ಬೀರಲಿದೆ. ಶ್ವಾಸಕೋಶ ವ್ಯವಸ್ಥೆಯನ್ನು ಬಲಪಡಿಸುವಂತಹ ಅನೇಕ ಪ್ರಾಣಾಯಾಮಗಳು ಯೋಗದಲ್ಲಿವೆ. ಯೋಗದ ಜೊತೆಗೆ ಆಯುರ್ವೇದ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಅಗತ್ಯ. ಆಯುರ್ವೇದ ಪದ್ಧತಿಯನ್ನು ಉತ್ತೇಜಿಸಲು ಆಯುಷ್ಮಾನ್ ಭಾರತ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಇದುವರೆಗೂ 1 ಕೋಟಿಗೂ ಹೆಚ್ಚುಜನ ಇದರ ಲಾಭ ಪಡೆದಿದ್ದಾರೆ ಎಂದು ಪ್ರಧಾನಿ ತಿಳಿಸಿದರು.

Share

Leave a Comment