ಆರ್ಥಿಕತೆ ಸರಿ ದಾರಿಗೆ ತರಲು ಸಧೃಡ ಯೋಜನೆ ಅಗತ್ಯ, ಮೂರ್ಖ ಸಿದ್ಧಾಂತಗಳಲ್ಲ- ರಾಹುಲ್ ಗಾಂಧಿ

ನವದೆಹಲಿ, ಸೆ 12  – ಆರ್ಥಿಕ ಸ್ಥಿತಿಯ ಬಗ್ಗೆ ನರೇಂದ್ರ ಮೋದಿ ಸರ್ಕಾರವನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಆರ್ಥಿಕತೆಯನ್ನು ಸರಿದಾರಿಗೆ ತರಲು ದೇಶಕ್ಕೆ ದೃಢವಾದ ಯೋಜನೆ ಅಗತ್ಯವಿದೆ ಎಂದು ಹೇಳಿದ್ದಾರೆ.

ಆಟೋಮೊಬೈಲ್‍ ಕ್ಷೇತ್ರದ ಬಿಕ್ಕಟ್ಟಿಗೆ ಕೋಟ್ಯಧೀಶರು ಕಾರುಗಳನ್ನು ಖರೀದಿಸುವ ಬದಲು ಉಬರ್ ಮತ್ತು ಓಲಾದಂತಹ ಕ್ಯಾಬ್ ಸೇವೆಗಳನ್ನು ಬಯಸುತ್ತಿರುವುದೇ ಕಾರಣ ಎನ್ನಲಾದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನೂ ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿರುವ ಅವರು, ಭಾರತಕ್ಕೆ ಅಗತ್ಯವಿರುವುದು ಕೋಟ್ಯಧೀಶರ ಕುರಿತ ಸಿದ್ಧಾಂತಗಳಲ್ಲ ಎಂದು ಹೇಳಿದ್ದಾರೆ.

 ‘ಭಾರತಕ್ಕೆ ಬೇಕಾಗಿರುವುದು  ಪ್ರಚಾರವಲ್ಲ, ತಿರುಚಲಾದ ಸುದ್ದಿಗಳಲ್ಲ ಮತ್ತು ಕೋಟ್ಯಧೀಶರ ಕುರಿತ ಸಿದ್ಧಾಂತಗಳಲ್ಲ. ಆರ್ಥಿಕತೆಯನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯುವ ದೃಢವಾದ ಯೋಜನೆ ಅಗತ್ಯವಿದೆ. ಇದಕ್ಕೆ ನಾವೆಲ್ಲರೂ ಬೆಂಬಲವಾಗಿ ನಿಲ್ಲುತ್ತೇವೆ.’ ಎಂದು ರಾಹುಲ್‍ಗಾಂಧಿ ಟ್ವೀಟ್ ಮಾಡಿದ್ದಾರೆ.

 ಇದಕ್ಕೂ ಮುನ್ನ ಮಾಜಿ ಪ್ರಧಾನಿ ಡಾ ಮನಮೋಹನ್‍ ಸಿಂಗ್ ಸಹ ಆರ್ಥಿಕತೆ ಕುರಿತಂತೆ ಸರ್ಕಾರದ ನಡೆಯನ್ನು ಪ್ರಶ್ನಿಸಿದ್ದರು. ಆರ್ಥಿಕತೆ ಕುರಿತಂತೆ ಸರ್ಕಾರ ಈಗಾಗಲೇ ವಿಫಲವಾಗಿದೆ. ನೋಟು ಅಮಾನ್ಯೀಕರಣದಂತಹ ಐತಿಹಾಸಿಕ ವೈಫಲ್ಯಗಳನ್ನು ಬಿಟ್ಟು, ಮುಂದಿನ ಪೀಳಿಗೆಯ ರಚನಾತ್ಮಕ ಆರ್ಥಿಕ ಸುಧಾರಣೆಗಳ ಅಗತ್ಯವಿದೆ ಎಂದು ಡಾ.ಸಿಂಗ್ ಅವರು ಸಂದರ್ಶನವೊಂದರಲ್ಲಿ ಹೇಳಿದ್ದರು.

Leave a Comment