ಆರ್ಥರಿಟೀಸ್ ಅರಿವು ಅಗತ್ಯ: ಡಾ. ವಿಕ್ರಮ ಹರಿದಾಸ

ಹುಬ್ಬಳ್ಳಿ,ಜು.10- ‘ಇತ್ತೀಚಿನ ದಿನಗಳಲ್ಲಿ ರೂಮಾಟಾಯ್ಡ್ ಸಂಧಿವಾತ (ಆರ್ಥರಿಟೀಸ್) ಸಾಮಾನ್ಯವಾಗಿದೆ.  ಕನಿಷ್ಠ ಇಪ್ಪತ್ತು ವಯಸ್ಸಿನವರಿಂದಿಡಿದು ವಯಸ್ಕರವರೆಗೆ ಇದು ಹೆಚ್ಚಾಗಿ ಬರುತ್ತಿದೆ.  ನೂರು ಜನರಲ್ಲಿ ಇಬ್ಬರಿಗೆ ಬರುವ ಈ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಲಾಗದಿದ್ದರೂ ತಾತ್ಕಾಲಿಕ ಚಿಕಿತ್ಸೆ ಮೂಲಕ ನಿಯಂತ್ರಣದಲ್ಲಿಡಬಹುದು. ಹಾಗಾಗಿ, ಈ ರೋಗದ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದ ಅಗತ್ಯವಿದೆ’ ಎಂದು ರೊಮಾಟಾಯ್ಡ್ ಕನ್ಸಲ್ಟೆಂಟ್ ಡಾ. ವಿಕ್ರಮ ಹರಿದಾಸ ಹೇಳಿದರು.
ರೋಗದ ಕುರಿತು ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ‘ರೂಮಾಟಾಯ್ಡ್ ಸಂಧಿವಾತ ಒಂದು ರೀತಿಯ ಉರಿ ಊತವಾಗಿದೆ. ಕೈ ಮತ್ತು ಕಾಲಿನಲ್ಲಿರುವ ಕೀಲುಗಳಲ್ಲಿ ನೋವು ಮತ್ತು ಬಾವು ಕಾಣಿಸಿಕೊಳ್ಳುತ್ತದೆ. ಆರಂಭಿಕ ಹಂತದಲ್ಲೇ ಇದಕ್ಕೆ ಚಿಕಿತ್ಸೆ ಪಡೆಯದಿದ್ದರೆ, ಕೀಲುಗಳಲ್ಲಿ ದೀರ್ಘಕಾಲಿಕ ನ್ಯೂನತೆ ಉಂಟಾಗುವ ಸಾಧ್ಯತೆ ಇರುತ್ತದೆ. ಜತೆಗೆ ಪುಪ್ಪಸ, ಕಣ್ಣು, ರಕ್ತನಾಳಗಳು, ನರಗಳು ಹಾಗೂ ಚರ್ಮಕ್ಕೂ ತೊಂದರೆಯಾಗುತ್ತದೆ’ ಎಂದರು.
‘ರುಮಾಟಾಯ್ಡ್ ಆಟೊ ಇಮ್ಯೂನೊ ರೋಗ. ನಮ್ಮ ಶರೀರದಲ್ಲಿರುವ ರೋಗ ನಿಯಂತ್ರಣ ಕಣಗಳು, ನಮ್ಮ ಶರೀರರವನ್ನು ಪರಕೀಯ ಎಂದು ಭಾವಿಸಿ ಆಕ್ರಮಣ ಮಾಡುತ್ತವೆ. ಒತ್ತಡ, ಸಂಸರ್ಗ ದೋಷ, ಅನುವಂಶೀಯತೆ, ಆಹಾರದ ಕಾರಣಗಳಿಗಾಗಿ ಬರುವುದುಂಟು.  ಯಾರಿಗೆ ಕೈ ಮತ್ತು ಕಾಲಿನ ಗಂಟುಗಳಲ್ಲಿ ಆರು ವಾರಕ್ಕಿಂತ ಹೆಚ್ಚು ಕಾಲ ನೋವಿದ್ದರೆ,  ಬೇರಾವುದೇ ಕಾಯಿಲೆ ಇಲ್ಲದಿದ್ದರೆ ಅದು ರೂಮಾಟಾಯ್ಡ್ ಆರ್ಥರಿಟೀಸ್ ಎಂದರ್ಥ. ಶೇ 70ರಷ್ಟು ಜನರಲ್ಲಿ ರೂಮಾಟಾಯ್ಡ್ ಫ್ಯಾಕ್ಟರ್ ಫಾಸಿಟಿವ್ (ಆರ್‌ಎಫ್‌) ಆಗಿರುತ್ತದೆ. ರೋಗ ಖಚಿತಕ್ಕೆ  ಆರ್ಎಫ್‌ ಆಗಬೇಕಿಲ್ಲ. ಆದರೆ, ಹೆಚ್ಚಿನ ಪ್ರಮಾಣದಲ್ಲಿದ್ದವರಿಗೆ ರೋಗದ ಪರಿಣಾಮ ತೀವ್ರವಾಗಿರಬಹುದು. ರೊಮಾಟಾಯ್ಡ್ ಅಂಶವು ಒಮ್ಮೆ  ಪಾಸಿಟಿವ್ ಆಗಿದ್ದರೆ, ಅದು ಹಾಗೆಯೇ ಉಳಿಯುವುದು’ ಎಂದು ಹೇಳಿದರು.
‘ಈ ರೋಗಕ್ಕೆ ಮೂರು ರೀತಿಯ ಚಿಕಿತ್ಸೆಗಳಿವೆ. ನೋವು ಕಡಿಮೆ ಮಾಡುವ ಮಾತ್ರೆಗಳು, ಕಾಯಿಲೆ ಗುಣಪಡಿಸುವ ಮಾತ್ರೆಗಳು ಹಾಗೂ ಸ್ಟಿರಾಯ್ಡ್‌. ಆದರೆ, ಇದರಿಂದಲೂ ಸೈಡ್ ಎಫೆಕ್ಟ್‌್ ತಪ್ಪಿದ್ದಲ್ಲ. ನೋವು ಕಡಿಮೆ ಮಾಡುವ ಮಾತ್ರೆಗಳನ್ನು ತುಂಬಾ ದಿನ ತೆಗೆದುಕೊಂಡೆರೆ, ಹೊಟ್ಟೆಯಲ್ಲಿ ಹುಣ್ಣಾಗುತ್ತದೆ ಮತ್ತು ಕಿಡ್ನಿಗೆ ತೊಂದರೆಯಾಗಬಹುದು. ರೋಗ ಗುಣಪಡಿಸುವ ಮಾತ್ರೆಗಳನ್ನು  ವೈದ್ಯರ ಸಲಹೆ ಮೇರೆಗೆ ತೆಗೆದುಕೊಳ್ಳಬೇಕು. ಸ್ಟಿರಾಯ್ಡ್‌ ಮಾತ್ರೆಗಳು ನೋವನ್ನು ಬೇಗ ವಾಸಿ ಮಾಡುತ್ತವೆ. ಇವುಗಳ ಜತೆಗೆ, ಆಹಾರದಲ್ಲಿ ನಿಯಂತ್ರಣ, ಸೂಕ್ತ ಉಪವಾಸ, ನಿಯಮಿತ ಆಹಾರ, ವ್ಯಾಯಾಮ ಹಾಗೂ ಯೋಗದಿಂದಲೂ ಆರ್ಥರಿಟೀಸ್‌ನಿಂದ ದೂರವಿರಬಹುದು’ ಎಂದು ವಿವರಿಸಿದರು.

Leave a Comment