ಆರೋಗ್ಯ ಕೇಂದ್ರ, ಸರ್ಕಾರಿ ಶಾಲೆಗಳಿಗೆ ಜಿ.ಪಂ. ಉಪಾಧ್ಯಕ್ಷೆ ದಿಢೀರ್ ಭೇಟಿ: ಪರಿಶೀಲನೆ

ಗುಬ್ಬಿ, ಆ. ೩- ಇಲ್ಲಿನ ತಾಲ್ಲೂಕು ಆರೋಗ್ಯ ಕೇಂದ್ರ, ಸರ್ಕಾರಿ ಶಾಲೆ, ಅಂಗನವಾಡಿ ಕೇಂದ್ರ, ರೈತ ಸಂಪರ್ಕ ಕೇಂದ್ರಗಳಿಗೆ ಜಿ.ಪಂ. ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಲೂಕಿಗೆ ಎರಡನೇ ಬಾರಿಗೆ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾದ ಶಾರದಾ ನರಸಿಂಹಮೂರ್ತಿ ಅವರು ಪಟ್ಟಣದ ಸರ್ಕಾರಿ ಶಾಲೆಗೆ ತೆರಳಿ ಅಲ್ಲಿನ ಮೂಲಭೂತ ಸೌಕರ್ಯಗಳು, ಕುಡಿಯುವ ನೀರಿನ ಫಿಲ್ಟರ್ ಇಲ್ಲದಿರುವುದು,  ಮಕ್ಕಳು ಕುಳಿತು ಊಟ ಮಾಡಲು ಮತ್ತು ಆಟ ಆಡಲು ಶಾಲೆಯ ಒಳಾಂಗಣದಲ್ಲಿ ಸರಿಯಾದ ವ್ಯವಸ್ಥೆ ಮತ್ತು ಶೌಚಾಲಯ ಇಲ್ಲದಿರುವುದನ್ನು ಮನಗಂಡ ಅವರು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಗುಬ್ಬಿ-ಚೇಳೂರು ರಸ್ತೆಯಲ್ಲಿರುವ ರಂಗನಾಥಪುರ ಪ್ರೌಢಶಾಲೆ ಮತ್ತು ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ ಅವರು ಶಾಲೆಯ ಆವರಣದಲ್ಲಿರುವ ಸ್ವಚ್ಚತೆ ಇಲ್ಲದ ಅಡುಗೆ ಕೋಣೆ ಮತ್ತು ಮಕ್ಕಳ ಹಾಜರಾತಿಯನ್ನು ವೀಕ್ಷಿಸಿದರು.

ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ ಅವರು ಮಕ್ಕಳ ಹಾಜರಾತಿ, ದಾಖಲಾತಿ ಮತ್ತು ದಾಸ್ತಾನು ಪರಿಶೀಲನೆ ಮಾಡಿ ಗರ್ಭಿಣಿ ಬಾಣಂತಿಯರು ಮತ್ತು ಮಾತೃತ್ವ ಯೋಜನೆಯ ಬಗ್ಗೆ ಮಾಹಿತಿ ಪಡೆದುಕೊಂಡರು.

ನಂತರ ಚೇಳೂರು ಪ್ರಾಥಮಿಕ ಆರೋಗ್ಯಕ್ಕೆ ಭೇಟಿ ನೀಡಿದ ಅವರು ಔಷಧಿಗಳ ದಾಸ್ತಾನುಗಳು, ಚುಚ್ಚುಮದ್ದು ಮತ್ತು ನಾಯಿ ಕಡಿತಕ್ಕೆ ಔಷಧಿ, ಹಾವು ಕಡಿತಕ್ಕೆ ಇರುವ ಔಷಧಿಗಳನ್ನು ಪರಿಶೀಲಿಸಿ, ರೋಗಿಗಳಿಗೆ ಯಾವುದೇ ತೊಂದರೆ ಉಂಟಾಗದಂತೆ ಸೇವೆ ಒದಗಿಸಲು ವೈದ್ಯರಿಗೆ ಸೂಚಿಸಿದರು.

ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿದ ಅವರು ಬಿತ್ತನೆ ಬೀಜ, ರಸಗೊಬ್ಬರ ಮತ್ತು ಟಾರ್ಪಲಿನ್ ಬಗ್ಗೆ ಅಧಿಕಾರಿಗಳಿಂದ ವಿವರಣೆ ಕೇಳಿ ಪರಿಶೀಲಿಸಿದರು.    ಬಾಲಕರ ವಸತಿ ನಿಲಯಕ್ಕೆ ಭೇಟಿ ನೀಡಿದ ಅವರು ಅಲ್ಲಿನ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದುಕೊಂಡರು. ವಿದ್ಯಾರ್ಥಿಗಳ ಹಾಜರಾತಿ, ಆಹಾರ ಸಾಮಗ್ರಿಗಳ ದಾಸ್ತಾನು ಪರಿಶೀಲಿಸಿದರು.

ಸಂಜೆ 4 ಗಂಟೆಗೆ ಗುಬ್ಬಿ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

ಸಭೆಯಲ್ಲಿ ಎಲ್ಲಾ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಚರ್ಚಿಸಿ ವಸತಿ, ಶೌಚಾಲಯ ಮತ್ತು ಮೂಲಭೂತ ಕುಡಿಯುವ ನೀರಿನ ಬಗ್ಗೆ ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ನವ್ಯಬಾಬು, ಜಿಲ್ಲಾ ಪಂಚಾಯತಿ ಸದಸ್ಯರಾದ ಭಾರತಿ ಹಿತೇಶ್, ನರಸಿಂಹಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

Leave a Comment