ಆರೋಗ್ಯವಂತ ದೇಶ ಕಟ್ಟಲು ರೈತರೇ ಮುಂದಾಗಿ – ಗಾಯಿತ್ರಿ ರೇವಣ್ಣ

ಕೆ.ಆರ್.ಪೇಟೆ,ಆ.11- 1965ರಲ್ಲಿ ದೇಶದ ಹಸಿವು ನೀಗಿಸುವ ದೃಷ್ಠಿಯಿಂದ ಆರಂಭಿಸಲಾದ ಹಸಿರು ಕ್ರಾಂತಿಯ ಸಮಯದಲ್ಲಿ ಪರಿಚಯಿಸಲಾದ ರಾಸಾಯನಿಕ ಗೊಬ್ಬರಗಳು, ರಾಸಾಯನಿಕ ಕೀಟ ನಾಶಕಗಳನ್ನು ಯಥೇಚ್ಚವಾಗಿ ಬಳಿಸಿದ ಪರಿಣಾಮ ಭೂಮಿಯು ಸತ್ವವನ್ನು ಕಳೆದುಕೊಂಡಿದೆ. ಅಲ್ಲದೆ ನಾವು ಸೇವಿಸುವ ಆಹಾರವನ್ನು ವಿಷಯುಕ್ತಗೊಳಿಸಿವೆ ಹಾಗಾಗಿ ಇನ್ನಾದರೂ ಸಾವಯವ ಬೇಸಾಯವನ್ನು ಅಳವಡಿಸಿಕೊಂಡು ಭೂಮಿಯ ಆರೋಗ್ಯವನ್ನು ಕಾಪಾಡುವ ಮೂಲಕ ರಾಸಾಯನಿಕ ಮುಕ್ತ ಆಹಾರ ವಸ್ತುಗಳನ್ನು ಬೆಳೆಯುವಂತಾಬೇಕಾದ ಅಗತ್ಯವಿದೆ ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಗಾಯಿತ್ರಿರೇವಣ್ಣ ಹೇಳಿದರು.
ಅವರು ತಾಲೂಕಿನ ಬೂಕನಕೆರೆ ಹೋಬಳಿ ಕೇಂದ್ರದ ಗೋಗಾಲಮ್ಮ ದೇವಾಲಯದ ಆವರಣದಲ್ಲಿ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 2018-19ನೇ ಸಾಲಿನ ಸಮಗ್ರ ಕೃಷಿ ಅಭಿಯಾನದ ಅಂಗವಾಗಿ ಹೋಬಳಿಯಾದ್ಯಂತ ರೈತರಿಗೆ ಮಾಹಿತಿ ನೀಡಲು ಹೊರಟ ಕೃಷಿ ಮಾಹಿತಿ ರಥಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಾಕಷ್ಟು ದೇಶಗಳು ರಾಸಾಯನಿಕ ಗೊಬ್ಬರಗಳನ್ನು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಬಳಸುತ್ತಿವೆ. ಸಾವಯವ ಬೇಸಾಯವನ್ನು ಹೆಚ್ಚಾಗಿ ಬಳಕೆ ಮಾಡುತ್ತಿವೆ. ಇದರಿಂದ ಆ ದೇಶದಲ್ಲಿ ಬೆಳೆದ ಕೃಷಿ ಉತ್ಪನ್ನಗಳಿಗೆ ಬೇರೆ ದೇಶಗಳಲ್ಲಿ ಉತ್ತಮ ಬೇಡಿಕೆ ಇದ್ದು ಆಮದು ಮಾಡಿಕೊಂಡು ಬಳಸುತ್ತಿವೆ ಆದರೆ ನಮ್ಮ ದೇಶದಲ್ಲಿ ಯಥೇಚ್ಚವಾಗಿ ರಸಗೊಬ್ಬರ, ವಿಷಕಾರಕ ಕೀಟನಾಶಕ ಬಳಸಿ ಬೆಳೆದ ಕೃಷಿ ಉತ್ಪನ್ನಗಳನ್ನು ಹೊರದೇಶಗಳು ಸೇವಿಸಲು ಯೋಗ್ಯವಲ್ಲ ಎಂದು ತಿರಸ್ಕರಿಸುತ್ತಿವೆ. ಇದನ್ನೇ ನಮ್ಮ ದೇಶದ ಜನಸಾಮಾನ್ಯರು ಮಾರುಕಟ್ಟೆಯಲ್ಲಿ ಕೊಂಡು ಸೇವಿಸುತ್ತಿರುವ ಕಾರಣ ದೇಶದ ಜನತೆಯು ನಿಧಾನ ಗತಿಯ ವಿಷವನ್ನು ಆಹಾರದ ರೂಪದಲ್ಲಿ ಸೇವಿಸುವಂತಾಗಿದೆ ಇದು ಮನುಷ್ಯನ ಸರಾಸರಿ ಆಯಸ್ಸನ್ನು ಕಡಿಮೆ ಮಾಡುತ್ತಿದೆ ಹಾಗಾಗಿ ಇನ್ನಾದರೂ ರಾಸಾಯನಿಕ ಗೊಬ್ಬರ ಪದ್ದತಿಯನ್ನು ದೂರ ಮಾಡಬೇಕು. ಸಾವಯವ, ಕೊಟ್ಟಿಗೆ ಗೊಬ್ಬರ, ಎರೆಹುಳು ಗೊಬ್ಬರ, ಹಸಿರೆಲೆ ಗೊಬ್ಬರ ಬಳಕೆ ಮಾಡುವ ಮೂಲಕ ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಂಡು ಬೇಸಾಯ ಮಾಡಿದರೆ ರಾಸಾಯನಿಕಮುಕ್ತವಾದ ಕೃಷಿ ಉತ್ಪನ್ನಗಳನ್ನು ಬೆಳೆಯಬಹುದು ಇದರಿಂದ ನಮ್ಮ ದೇಶದ ಜನತೆಗೆ ವಿಷಕಾರಕವಲ್ಲದ ಉತ್ತಮ ಆಹಾರವನ್ನು ನೀಡುವ ಮೂಲಕ ಆರೋಗ್ಯವಂತ ದೇಶವನ್ನು ಕಟ್ಟಲು ರೈತರು ಮುಂದಾಗಬೇಕು ಎಂದು ಗಾಯಿತ್ರಿ ರೇವಣ್ಣ ರೈತರಲ್ಲಿ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಬೂಕನಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಟ್ಟಮ್ಮ, ಬೂಕನಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಡಿಕೆ ಸ್ವಾಮೀಗೌಡ, ಪಿ.ಎಸ್.ಎಸ್.ಕೆ. ಮಾಜಿ ಉಪಾಧ್ಯಕ್ಷ ಬಿ.ಬೋಳೇಗೌಡ, ಕೃಷಿ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಟಿ.ಎಸ್.ಮಂಜುನಾಥ್, ತಾಲೂಕು ಕೃಷಿ ಅಧಿಕಾರಿಗಳಾದ ಮಾನಸ, ಶ್ರೀಧರ್, ಆನಂದ್‍ಕುಮಾರ್, ಜಯಶಂಕರಆರಾಧ್ಯ, ಶಾಲಿನಿ, ನಾಗರಾಜು, ಕೃಷಿ ತಾಂತ್ರಿಕ ಉತ್ತೇಜಕರಾದ ರಾಜೇಶ್, ರಮೇಶ್, ಸತೀಶ್, ದರ್ಶಿನಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Comment