ಆರೋಗ್ಯಯುತ ಬದುಕಿಗೆ ಪೌಷ್ಟಿಕ ಆಹಾರ ಅವಶ್ಯ

ಅಳ್ನಾವರ, ಸೆ 12- ಬಡತನ, ಅನಕ್ಷರತೆ, ಮೂಡನಂಬಿಕೆ ಹಾಗೂ ನಿರ್ಲಕ್ಷತನವೇ ಅಪೌಷ್ಟಿಕತೆಗೆ ಕಾರಣ. ಸದೃಡ ಮತ್ತು ಆರೋಗ್ಯಯುತ ಬದುಕಿಗೆ ಪೌಷ್ಟಿಕ ಆಹಾರ ಪದ್ದತಿ ಅಳವಡಿಸಿಕೊಳ್ಳಬೇಕು ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಬಿ. ಜೋಶಿ ಹೇಳಿದರು.
ಇಲ್ಲಿನ ಕಲ್ಮೇಶ್ವರ ಸಮುದಾಯ ಭವನದಲ್ಲಿ ಮಂಗಳವಾರ ನಡೆದ ರಾಷ್ಟ್ರೀಯ ಪೌಷ್ಠಿಕ ಆಹಾರ ಸಪ್ತಾಹ ಮತ್ತು ಪ್ರಧಾನ ಮಂತ್ರಿ ಮಾತೃವಂದನಾ ಹಾಗೂ ಪೋಷಣ ಅಭಿಯಾನ ಯೋಜನೆಯಡಿ ಪೋಷಣ ಮಾಸಾಚರಣೆಯ ಕಾರ್ಯಕ್ರಮದಲ್ಲಿ ಮಾತಾನಾಡಿದ ಅವರು, ಸೇವಿಸುವ ಆಹಾರ ಹೊಟ್ಟೆ ತುಂಬಿಸುವದಕ್ಕಾಗಿ ಮಾತ್ರ ಸೀಮಿತವಾಗದೆ, ದೇಹದ ಆರೋಗ್ಯ ಕಾಪಾಡುವಂತಹ ಪೌಷ್ಠಿಕಾಂಶಗಳನ್ನು ಒಳಗೊಂಡಿರುವಂತದ್ದಾಗಬೇಕು. ಇದರಿಂದ ಗರ್ಭಿಣಿಯರ, ಕಿಶೋರಿಯರ ಮತ್ತು ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರುವ ಅಪೌಷ್ಠಿಕತೆಯನ್ನು ತಡೆಗಟ್ಟಲು ಸಾಧ್ಯವಿದೆ ಎಂದರು.
ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿ ಡಾ. ಶಿವುಕುಮಾರ ಮಾತನಾಡಿ , ‘ಮಹಿಳೆಯರಲ್ಲಿ ಕಂಡು ಬರುವ ಲೈಂಗಿಕ ಕಾಯಿಲೆಗಳ ಬಗ್ಗೆ ವಿವರಿಸಿದರು. ಪ್ರತಿ ಗುರುವಾರ ಆಯಾ ಆಸ್ಪತ್ರೆ ಮತ್ತು ಉಪ ಆರೋಗ್ಯ ಕೇಂದ್ರಗಳಲ್ಲಿ ಹದಿ ಹರೆಯದವರಿಗಾಗಿ ಆಪ್ತ ಸಮಾಲೋಚನೆಯ ಮೂಲಕ ಆರೋಗ್ಯ ರಕ್ಷಣೆಯ ಬಗ್ಗೆ ಮುಕ್ತ ಚರ್ಚೆ ನಡೆಸಿ ಸಮಸ್ಯೆ ಪರಿಹರಿಸುವ ಪ್ರಯತ್ನ ಮಾಡಲಾಗುತ್ತಿದೆ’ ಎಂದರು.
ಪೌಷ್ಠಿಕ ಆಹಾರ ತಯಾರಿಕೆ ಸ್ಪರ್ಧೆ ಮತ್ತು ಮಕ್ಕಳಿಗಾಗಿ ವೇಷ ಭೂಷಣ ಸ್ಪರ್ಧೆ ಆಯೋಜಿಸಲಾಗಿತ್ತು .ಪ್ರೌಢ ಶಾಲಾ ಮಕ್ಕಳಿಗಾಗಿ ನಡೆಸಿದ ರಸ ಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿನಿಯರಾದ ವನಿತಾ ಭಜಂತ್ರಿ ಹಾಗೂ ಮಿಸ್ಮಾ ಸತ್ತಿಗೇರಿ ಅವರಿಗೆ ಬಹುಮಾನ ನೀಡಲಾಯಿತು.
ಪ.ಪಂ ಸದಸ್ಯ ಉಸ್ಮಾನ ಬಾತಖಂಡೆ ಅಧ್ಯಕ್ಷತೆ ವಹಿಸಿದ್ದರು. ಪ.ಪಂ. ಸದದಸ್ಯರಾದ ವಿನಾಯಕ ಕುರುಬರ, ಮಂಜುಳಾ ಮೇದಾರ, ನಾಗರತ್ನಾ ವಾಗ್ಮೋಡೆ, ನಾಗರತ್ನಾ ಜಮಖಂಡಿ,ಪರಶುರಾಮ ಬೆಕನೇಕರ, ಜೈಲಾನಿ ಸುದರ್ಜಿ, ಕಡಬಗಟ್ಟಿ ಗ್ರಾ.ಪಂ ಅದ್ಯಕ್ಷ ದಸ್ತಗೀರ ಹುಣಸಿಕಟ್ಟಿ, ಆರೋಗ್ಯ ನಿರೀಕ್ಷಕ ಮದುಸೂಧನ, ಕ್ಷೇತ್ರ ಪ್ರಚಾರ ಇಲಾಖೆಯ ಸಹಾಯಕ ಸಿ.ಕೆ.ಸುರೇಶ, ಜಯಶ್ರೀ ಉಡುಪಿ ಇದ್ದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪಟ್ಟಣ ಪಂಚಾಯ್ತಿ ,ಶಿಶು ಅಭಿವೃದ್ಧಿ ಇಲಾಖೆ, ಕ್ಷೇತ್ರ ಪ್ರಚಾರ ಇಲಾಖೆ, ಸ್ವಚ್ಚ ಭಾರತ ಮಿಷನ, ವಾರ್ತಾ ಮತ್ತು ಪ್ರಸಾರ ಮಂತ್ರಾಲಯ, ಆರೋಗ್ಯ ಇಲಾಖೆ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೇಲ್ವಿಚಾರಕಿ ಶೋಭಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೀತಾ ಕೌಜಲಗಿ ಸ್ವಾಗತಿಸಿದರು. ಉಮಾ ಜೋಶಿ ನಿರೂಪಿಸಿದರು, ಆದಿಲಕ್ಷ್ಮೀ ದಮ್ಮು ವಂದಿಸಿದರು.

Leave a Comment