ಆರೋಗ್ಯದ ಕಲ್ಪವೃಕ್ಷ ತೆಂಗು

ತೆಂಗಿನ ಮರಗಳನ್ನು ನಾವು ಕಲ್ಪವೃಕ್ಷವೆಂದೇ ಕರೆಯುತ್ತೇವೆ. ಅದರ ಒಂದೊಂದು ಭಾಗವೂ ಬಹುಪಯೋಗಿಯಾಗಿದೆ. ವಿಶೇಷವಾಗಿ ಅದು ನೀಡುವ ಎಳನೀರು ಹಾಗೂ ತೆಂಗಿನ ಕಾಯಿ ಬಳಕೆ ಮತ್ತು ಪ್ರಯೋಜನಗಳ ಬಗ್ಗೆ ಪ್ರತ್ಯೇಕ ಹೇಳಬೇಕಾದ ಅವಶ್ಯಕತೆ ಇಲ್ಲ.
ಎಳನೀರನ್ನು ನಿತ್ಯ ಸೇವಿಸಿದರೆ, ಅದರಿಂದ ಹಲವು ಬಗೆಯ ಪ್ರಯೋಜನಗಳಿವೆ. ಆರೋಗ್ಯ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಬಾಲವೃದ್ಧರಾದಿಯಾಗಿ ಎಳನೀರು ಸೇವಿಸಿದರೂ ಯಾವುದೇ ಅಡ್ಡ ಪರಿಣಾಮಗಳಾಗುವುದಿಲ್ಲ.
ತೆಂಗಿನ ಕಾಯಿ ಕುರಿತು ನಡೆದಿರುವ ವಿವಿಧ ಸಂಶೋಧನೆಗಳಿಂದ ಇದು ಆರೋಗ್ಯಕ್ಕೆ ತುಂಬಾ ಲಾಭದಾಯಕ ಎಂಬ ಅಂಶ ಬೆಳಕಿಗೆ ಬಂದಿದೆ.
ತೆಂಗಿನ ಕಾಯಿಯಿಂದ ತಯಾರಿಸುವ ಎಣ್ಣೆ ದೇಹಕ್ಕೆ ತುಂಬಾ ಒಳ್ಳೆಯದು. ಇದು ದೇಹದಲ್ಲಿನ ಹಲವಾರು ರೋಗಗಳನ್ನು ದೂರ ಮಾಡುವುದು. ಇದರಲ್ಲಿ ಕೆಲವು ಕೊಬ್ಬಿನ ಆಮ್ಲಗಳು ದೇಹದ ಆರೋಗ್ಯ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ತೆಂಗಿನ ಎಣ್ಣೆಯಲ್ಲಿ ಕೊಲೆಸ್ಟ್ರಾಲ್ ಕಡಿಮೆ ಇದೆ. ಇದರಲ್ಲಿನ ಏಕಪರ್ಯಾಪ್ತ, ಬಹುಪರ್ಯಾಪ್ತ ಮತ್ತು ಪರಿಷ್ಕರಿಸಿದ ಕೊಬ್ಬಿನ ಆಮ್ಲಗಳು ಹೃದಯದ ಆರೋಗ್ಯವನ್ನು ಕಾಪಾಡುವುದರ ಜತೆಗೆ ದೇಹದ ತೂಕ ಇಳಿಸಲು ಸಹಕಾರಿಯಾಗಲಿದೆ.
ತೆಂಗಿನ ಕಾಯಿಯಲ್ಲಿ ವಿಟಮಿನ್ ಕೆ ಹಾಗೂ ವಿಟಮಿನ್ – ಇ ಅಂಶಗಳು ಸಮೃದ್ಧಿಯಾಗಿವೆ. ಖನಿಜಾಂಶ ಕಬ್ಬಿಣವೂ ಇದರಲ್ಲಿ ಅಡಗಿದೆ. ದೇಹಕ್ಕೆ ದಿನಕ್ಕೆ ಬೇಕಾದ ಶೇ. 18 ರಷ್ಟು ಆಹಾರದ ನಾರಿನಾಂಶ ತೆಂಗಿನ ಕಾಯಿಯಲ್ಲಿದೆ.
ಚರ್ಮ, ಮೂಳೆ, ಅಸ್ಥಿರಜ್ಜು ಸ್ನಾಯುಗಳನ್ನು ಜೋಡಿಸುವಂತಹ ಅಂಗಾಂಶಗಳನ್ನು ಬಲಪಡಿಸುವ ಶಕ್ತಿ ಇದರಲ್ಲಿ ಅಡಗಿದೆ.
ದೇಹದ ತೂಕ ಇಳಿಸಲು ನೆರವಾಗುವುದಲ್ಲದೆ, ಹೊಟ್ಟೆಯ ಸುತ್ತಲೂ ಅಂಟಿಕೊಂಡಿರುವ ಕೊಬ್ಬನ್ನು ಕರಗಿಸಲು ಸಹಕಾರಿಯಾಗಲಿದೆ.
ಬ್ಯಾಕ್ಟೀರಿಯಾ, ವೈರಸ್ ಮತ್ತು ಪಂಗಸ್‌ನಿಂದ ಉಂಟಾಗುವಂತಹ ಸೋಂಕನ್ನು ನಿವಾರಣೆ ಮಾಡಬಲ್ಲ ಸಾಮರ್ಥ್ಯ ತೆಂಗಿನ ಕಾಯಿಯಲ್ಲಿದೆ. ದೇಹದ ಪ್ರತಿರೋಧಕ ಶಕ್ತಿಯನ್ನು ವೃದ್ಧಿಸುವ ತೆಂಗಿನಕಾಯಿ, ಹರ್ಪಿಸ್, ಎಚ್‌ಐವಿ ಮುಂತಾದ ರೋಗಗಳ ವಿರುದ್ಧ ಹೋರಾಡಲು ಶಕ್ತಿ ತುಂಬಲಿದೆ.
ತೆಂಗಿನಕಾಯಿ, ಪದೇ ಪದೇ ಹಸಿವು ಆಗುವುದನ್ನು ತಡೆಯಲಿದೆ. ಆ ಮೂಲಕ ಆಗ್ಗಿಂದ್ದಾಗ್ಗೆ ತಿನ್ನಬೇಕೆಂಬ ಮನಸ್ಸಿಗೆ ಕಡಿವಾಣ ಹಾಕಲಿದೆ. ಇದರಲ್ಲಿರುವ ಪರಿಷ್ಕರಿಸಿದ ಕೊಬ್ಬಿನ ಅಂಶ, ದೇಹದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಿ, ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲಿದೆ.
ತೆಂಗಿನಕಾಯಿ, ಮೆದುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು. ಅಲ್ಲದೆ, ಜೀರ್ಣಕ್ರಿಯೆಯನ್ನು ಹೆಚ್ಚಿಸುವುದು, ಜೀರ್ಣಕ್ರಿಯೆಗೆ ಸಂಬಂಧಿಸಿದ ಕಾಯಿಲೆಗಳನ್ನು ದೂರ ಮಾಡಲಿದೆ.
ತೆಂಗಿನ ಎಣ್ಣೆ ಬಳಕೆಯಿಂದ ಕರುಳಿನ ಕ್ರಿಯೆ ಸರಾಗವಾಗುವಂತೆ ಮಾಡುವುದು.

Leave a Comment