ಆರೋಗ್ಯದಿಂದ ರಾಷ್ಟ್ರ ಬಲಿಷ್ಠ: ಪ್ರಣವ್

ಉಡುಪಿ, ಜೂ.೧೯- ಆರೋಗ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧನೆಗಳ ಮೂಲಕ ಗ್ರಾಮೀಣ ಪ್ರದೇಶದಲ್ಲಿ ವೈದ್ಯಕೀಯ ಸೇವಾ ಸೌಲಭ್ಯದ ಗುಣಮಟ್ಟ ಹೆಚ್ಚಿಸಬೇಕು ಎಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅಭಿಪ್ರಾಯಪಟ್ಟರು.

ಸರ್ಕಾರಿ ಸಹಭಾಗಿತ್ವದಲ್ಲಿ ಬಿಆರ್‌ಎಸ್ ಹೆಲ್ತ್ ಆಂಡ್ ರಿಸರ್ಚ್ ಇನ್ಸ್‌ಟಿಟ್ಯೂಟ್ ವತಿಯಿಂದ ನಿರ್ಮಾಣಗೊಳ್ಳಲಿರುವ ’ತಾಯಿ ಮತ್ತು ಮಕ್ಕಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ’ಗೆ ಶ್ರೀಕೃಷ್ಣ ಮಠ ರಾಜಾಂಗಣದಲ್ಲಿ ನಿನ್ನೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

ವ್ಯಕ್ತಿ ಶಾರೀರಿಕ ಹಾಗೂ ಮಾನಸಿಕವಾಗಿ ಆರೋಗ್ಯವಂತನಾಗಬೇಕಾದರೆ ಆತನಿಗೆ ಶಿಕ್ಷಣ ಮತ್ತು ಆರೋಗ್ಯ ಸೇವೆ ಒದಗಿಸಬೇಕು. ಜನತೆಗೆ ಶಿಕ್ಷಣ ಮತ್ತು ಆರೋಗ್ಯ ಸೇವೆ ಒದಗಿಸದಿದ್ದರೆ ಈ ದೇಶ ಬಲಿಷ್ಠ ರಾಷ್ಟ್ರವಾಗುವುದಿಲ್ಲ. ಆದ್ದರಿಂದ ಉತ್ತಮ ಗುಣಮಟ್ಟದ ಶಿಕ್ಷಣ, ಆರೋಗ್ಯ ಸೌಲಭ್ಯ ನೀಡುವುದು ದೇಶದ ಅಭಿವೃದ್ಧಿಗೆ ಪೂರಕ ಎಂದು ಮುಖರ್ಜಿ ಅಭಿಪ್ರಾಯಪಟ್ಟರು. ಪ್ರಸ್ತುತ ನಮ್ಮ ದೇಶದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ವೈದ್ಯರು, ನುರಿತ ಚಿಕಿತ್ಸಾ ತಜ್ಞರು, ನರ್ಸ್ ಗಳ ಅರೆ ವೈದ್ಯಕೀಯ ಸಿಬ್ಬಂದಿ ಕೊರತೆ ಇದೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಒಂದು ಸಾವಿರಕ್ಕೆ ಒಬ್ಬ ವೈದ್ಯರಿದ್ದಾರೆ. ಭಾರತದಲ್ಲಿ ೧,೭೦೦ ಜನಕ್ಕೆ ಒಬ್ಬ ವೈದ್ಯರಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ ರಾಷ್ಟ್ರಪತಿ, ಈ ಕೊರತೆ ನೀಗಬೇಕು ಎಂದರು.

ಉಡುಪಿಯಂಥಹ ಬೆಳೆಯುತ್ತಿರುವ ಪ್ರದೇಶದಲ್ಲಿ ಉತ್ತಮ ಆರೋಗ್ಯ ಸೇವೆ ನೀಡಲು ಖಾಸಗಿ ಮತ್ತು ಸರ್ಕಾರದ ಸಹಭಾಗಿತ್ವದಲ್ಲಿ ಸೂಪರ್ ಸ್ಪೆಷಾಲಿಟಿ ಆರೋಗ್ಯ ಸೇವೆ ಇಂದಿನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಬಿ.ಆರ್.ಶೆಟ್ಟಿ ಅವರು ಮುಂದೆ ಬಂದಿರುವುದು ಶ್ಲಾಘನೀಯ ಎಂದರು. ವೈದ್ಯರ ಮೇಲೆ ಹಲ್ಲೆ ಮಾಡುವುದು ನಾಗರಿಕ ಸಮಾಜಕ್ಕೆ ಶೋಭೆಯಲ್ಲ, ಇಲ್ಲಿ ಯಾರೂ ಪರಿಪೂರ್ಣರಲ್ಲ. ವೈದ್ಯಕೀಯ ಆಕಸ್ಮಿಕಗಳಿಗೆ ವೈದ್ಯರನ್ನು ಹೊಣೆ ಮಾಡುವುದು ತಪ್ಪು. ವೈದ್ಯರ ಮತ್ತು ಸಾರ್ವಜನಿಕರ ನಡುವೆ ಸಾಮರಸ್ಯ, ಹೊಂದಾಣಿಕೆ ಇರಬೇಕು. ಆಸ್ಪತ್ರೆ ಮತ್ತು ದೇವಸ್ಥಾನಗಳು ಜನರ ಸೇವಾಕೇಂದ್ರದಗಳು. ಇದರ ಪಾವಿತ್ರ್ಯ ಕಾಪಾಡಿಕೊಳ್ಳುವುದು ನಾಗರಿಕರ ಕರ್ತವ್ಯ ಎಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅಭಿಪ್ರಾಯಪಟ್ಟರು.

೧೯೭೮ರ ನೆನಪು ೧೯೭೮ರ ಉಪಚುನಾವಣೆ ವೇಳೆ ಇಂದಿರಾ ಗಾಂಧಿ ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ ವೇಳೆ ಚುನಾವಣಾ ಪ್ರಚಾರಕ್ಕಾಗಿ ಚಿಕ್ಕಮಗಳೂರಿಗೆ ಬಂದಿದ್ದೆ. ಉಡುಪಿಯ ಆಸ್ಕರ್ ಫೆರ್ನಾಂಡಿಸ್ ಮತ್ತು ಮನೋರಮಾ ಮಧ್ವರಾಜ್ ಅವರೊಂದಿಗೆ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡದ್ದನ್ನು ಮುಖರ್ಜಿ ನೆನಪಿಸಿಕೊಂಡರು.

Leave a Comment