ಆರೆಸ್ಸೆಸ್‌ನಿಂದ ಮುಸ್ಲಿಮರ ಮನವೊಲಿಕೆ ಆರಂಭ

ನವದೆಹಲಿ, ನ.೮- ಅಯ್ಯೋಧ್ಯ ಪ್ರಕರಣದ ಮೇಲೆ ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದಂತೆ, ಶಾಂತಿ ಸೌಹಾರ್ದತೆ ಕಾಪಾಡಿಕೊಂಡು ಹೋಗುವ ಬಗ್ಗೆ, ಮುಸ್ಲಿಂ ಸಮುದಾಯದ ಮನವೊಲಿಕೆ ಕಾರ್ಯವನ್ನು ಆರ್ ಎಸ್ ಎಸ್ ಇಂದಿನಿಂದ ಆರಂಭಿಸಿದೆ.
ಈ ಹಿನ್ನೆಲೆಯಲ್ಲಿ ಆರ್‌ಎಸ್‌ಎಸ್‌ನ ನಾಯಕರಾದ ಕೃಷ್ಣ ಗೋಪಾಲ್ ಮತ್ತು ರಾಮನಾಯಕ್ ಇಲ್ಲಿಯ ನೆಹರು ಸ್ಮಾರಕದಲ್ಲಿ ಮುಸ್ಲಿಂ ಸಮುದಾಯದ ವಿದ್ಯಾವಂತರು, ವೃತ್ತಿನಿರತರು, ಸರ್ಕಾರೇತರ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವವರೊಂದಿಗೆ ಸಂವಾದ ಆರಂಭಿಸಿದ್ದಾರೆ.
ಅಯ್ಯೋಧ್ಯ ತೀರ್ಪು ಯಾವ ಪಕ್ಷದ ಪರವಾಗಿ ಬಂದರೂ ಅದನ್ನು ಈ ನೆಲದ ಕಾನೂನು ಎಂದು ಭಾವಿಸಿ, ಎಲ್ಲರೂ ಅದಕ್ಕೆ ತಲೆಬಾಗಬೇಕು. ಯಾವುದೇ ರೀತಿಯ ಪ್ರಚೋದನೆಗೆ, ಅಹಿತಕರ ಘಟನೆಗಳಿಗೆ, ಕೋಮು ಸೌಹಾರ್ದ ಕದಡುವುದಕ್ಕೆ ಅವಕಾಶ ನೀಡಬಾರದು ಎಂದು ಈಗಾಗಲೇ ಮುಸ್ಲಿಂ ಧರ್ಮಗುರುಗಳು ತಮ್ಮ ಸಮುದಾಯದ ಮನವೊಲಿಸುವ ಯತ್ನ ನಡೆಸಿದ ನಂತರದಲ್ಲಿ ಈಗ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖ ನಾಯಕರು, ಮುಸ್ಲಿಂ ಸಮುದಾಯದ ವಿದ್ಯಾವಂತರು, ವೃತ್ತಿನಿರತರಾದ ಇಂಜಿನಿಯರ್ಸ್, ಡಾಕ್ಟರ್ಸ್, ಸಾಮಾಜಿಕ ಕಾರ್ಯಕರ್ತರು ಮತ್ತು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ತೊಡಿಗಿಸಿಕೊಂಡವರೊಂದಿಗೆ ಚರ್ಚೆ, ವಿಚಾರ ವಿನಿಮಯ ನಡೆಸಲು ಮುಂದಾಗಿದೆ.
ಇಂದಿನ ಈ ಚರ್ಚೆಯಲ್ಲಿ ಮುಸ್ಲಿಂ ಸಮುದಾಯದ ವಿದ್ಯಾವಂತರು, ವೃತ್ತಿನಿರತರಿಂದ ಕೂಡಿದ ಸುಮಾರು ೮೦ ಮಂದಿ ಈ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
ರಾಮಜನ್ಮ ಭೂ ವಿವಾದ ಕುರಿತಂತೆ, ಸುಪ್ರೀಂ ಕೋರ್ಟ್‌ನ ವರದಿ ಹೊರಬೀಳುವವರೆವಿಗೂ ಈ ಸಂವಾದ ಮುಂದುವರೆಯುತ್ತದೆ ಎಂದು ಆರ್‌ಎಸ್‌ಎಸ್ ಮೂಲಗಳು ತಿಳಿಸಿವೆ.

Leave a Comment