ಆರುಷಿ ಕೊಲೆ ಸುಪ್ರೀಂ ವಿಚಾರಣೆ

ನವದೆಹಲಿ, ಆ. ೧೦- ಕಳೆದ 2008 ರಲ್ಲಿ ತಮ್ಮ ಸ್ವಂತ ಮಗಳು ಆರುಷಿ ಮತ್ತು ಮನೆಗೆಲಸದಾತ ಹೇಮರಾಜ್‌ನನ್ನು ಕೊಲೆಮಾಡಿದ್ದ ದಂತವೈದ್ಯ ದಂಪತಿಗಳಿಗೆ ಅಲಹಾಬಾದ್ ಹೈಕೋರ್ಟ್ ಶಿಕ್ಷೆಯಿಂದ ಖುಲಾಸೆಗೊಳಿಸಿರುವುದನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿರುವ ಮನವಿಯನ್ನು ಆಲಿಸಲು ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದೆ.

2008 ರಲ್ಲಿ 14 ವರ್ಷದ ಬಾಲಕಿ ಆರುಷಿ ಮತ್ತು ಹೇಮರಾಜ್ ಕೊಲೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ದಂತವೈದ್ಯ ದಂಪತಿಗಳಾದ ರಾಜೇಶ್ ಮತ್ತು ನೂಪುರ್ ತಲವಾರ್ ಅವರನ್ನು ಅಲಹಾಬಾದ್ ಹೈಕೋರ್ಟ್ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಖುಲಾಸೆಗೊಳಿಸಿತ್ತು.

ಇದನ್ನು ಹೇಮರಾಜ್ ಪತ್ನಿ ಪ್ರಶ್ನಿಸಿದ್ದರು. ನ್ಯಾಯಮೂರ್ತಿ ರಂಜನ್ ಗೊಗೊಯ್, ನ್ಯಾ. ನವೀನ್ ಸಿನ್ಹ ಮತ್ತು ನ್ಯಾ.ಕೆ.ಎಂ.ಜೋಸೆಫ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಸಿಬಿಐ ಮನವಿಯನ್ನು ಆಲಿಸಲು ಒಪ್ಪಿಗೆ ನೀಡಿದೆ.

ಹೆಚ್ಚುವರಿ ಸಾಲಿಸಿಟರ್ ಜನರಲ್ ಮಣಿಂದರ್ ಸಿಂಗ್, ಸಿಬಿಐ ಪರ ವಾದ ಮಂಡಿಸಲಿದ್ದು, ಹೇಮರಾಜ್ ಪತ್ನಿ ಅವರ ಹೇಳಿಕೆಗಳನ್ನೂ ಸಹ ಮಂಡಿಸಲಿದ್ದಾರೆ.

ತಲ್ವಾರ್ ಅವರ ನೊಯ್ಡಾ ಮನೆಯಲ್ಲಿ 2008ರ ಮೇ ತಿಂಗಳಲ್ಲಿ ಈ ಜೋಡಿ ಕೊಲೆ ನಡೆದಿತ್ತು. ಬಾಲಕಿ ಆರುಷಿ ಮನೆಯ ಕೋಣೆಯಲ್ಲಿ ಸತ್ತಿದ್ದರೆ, 45 ವರ್ಷದ ಮನೆಗೆಲಸದ ಹೇಮರಾಜ್ ಶವ ಎರಡು ದಿನಗಳ ನಂತರ ಮನೆಯ ಮಹಡಿ ಮೇಲೆ ಪತ್ತೆಯಾಗಿತ್ತು. ಅದಕ್ಕೂ ಮುಂಚೆ ಆತ ತಲೆಮರೆಸಿಕೊಂಡಿದ್ದಾನೆ ಎಂದು ಹೇಳಲಾಗಿತ್ತು.

Leave a Comment