ಆಯುಷ್ಮಾನ್ ಭಾರತ್ ಯೋಜನೆ ಬಡವರ ಪಾಲಿಗೆ ವರದಾನ

ಮೈಸೂರು. ಜೂ.18- ಎಲ್ಲಿ ಜನಸಂಖ್ಯೆ ಜಾಸ್ತಿ ಇರಲಿದೆಯೋ ಅಲ್ಲಿನ ಜನರಿಗೆ ಗುಣಮಟ್ಟದ ಆರೋಗ್ಯ ಲಭಿಸುತ್ತಿಲ್ಲ ಐಎಚ್ ಎಂ ಆರ್ ನಿರ್ದೇಶಕರಾದ ಪ್ರೊ.ಉಷಾ ಮಂಜುನಾಥ್ ತಿಳಿಸಿದರು.
ಅವರಿಂದು ವಿಜ್ಞಾನ ಭವನದಲ್ಲಿ ಐಒಇ ಹಾಲ್ ನಲ್ಲಿ ಮೈಸೂರು ವಿಶ್ವವಿದ್ಯಾಲಯದ ಸಾಮಾಜಿಕ ಹೊರಗುಳಿಯುವಿಕೆ ಮತ್ತು ಒಳಗೊಳ್ಳುವಿಕೆ ನೀತಿ ಅಧ್ಯಯನ ಕೇಂದ್ರದ ವತಿಯಿಂದ ನಡೆದ ‘ಭಾರತದಲ್ಲಿ ಸಾರ್ವತ್ರಿಕ ಆರೋಗ್ಯ ಸಮಸ್ಯೆ ಮತ್ತು ಸವಾಲು ‘ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ, ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು. ಹಲವು ಪ್ರದೇಶಗಳಲ್ಲಿ ಜನರು ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡುತ್ತಾರೆ. ಅವರಿಗೆ ವ್ಯವಸ್ಥಿತವಾದ ಸೌಲಭ್ಯಗಳು ಲಭ್ಯವಿರುತ್ತವೆ. ಆದರೆ ಜನಸಂಖ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ಜನತೆಗೆ ಸಮಪರ್ಕವಾಗಿ ಆರೋಗ್ಯ ಯೋಜನೆಗಳು ಲಭ್ಯವಾಗುತ್ತಿಲ್ಲ ಎಂದರು. ಮಕ್ಕಳ ಆರೋಗ್ಯದಲ್ಲಿಯೂ ಬದಲಾವಣೆಗಳು ಕಾಣಿಸಬೇಕು. ಆಯುಷ್ಮಾನ್ ಭಾರತ್ ಯೋಜನೆ ಜಾರಿಗೆ ಬಂದಿದ್ದು, ಅದರಲ್ಲಿ ಆರ್ಥಿಕವಾಗಿ ಹಿಂದುಳಿದವರು ಉತ್ತಮ ಆರೋಗ್ಯ ಪಡೆಯಲು ಅನುಕೂಲವಾಗಲಿದೆ. ದೇಶದ ಎಲ್ಲೆಡೆ ಏಕಸ್ವರೂಪದ ಆರೋಗ್ಯ ರಕ್ಷಕ ಸೇವೆಗಳು ಲಭ್ಯವಿರದ ಕಾರಣ ಬಡವರು, ಗ್ರಾಮೀಣ ಸಮುದಾಯದವರು ಮಹಿಳೆಯರು, ಮಕ್ಕಳು ಅತ್ಯಾವಶ್ಯಕ ಆರೋಗ್ಯ ಸೇವೆಗಳ ಪ್ರಯೋಜನ ಪಡೆಯಲು ಸೋತಿದ್ದರು. ಆದರೆ ಇಂದು ಆಯುಷ್ಮಾನ್ ಭಾರತ್ ಯೋಜನೆ ಬಡವರ ಪಾಲಿಗೆ ವರದಾನವಾಗಿದೆ ಎಂದರು.
ವೈದ್ಯಕೀಯ ಸೇವೆಗಳು ಶಿಕ್ಷಣ ಇವೆಲ್ಲ ಭಾರತವನ್ನು ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ಆರೋಗ್ಯ ರಕ್ಷಕ ಸೇವಾ ವ್ಯವಸ್ಥೆಯನ್ನು ಹೊಂದಿರುವ ದೇಶಗಳ ಸಾಲಿಗೆ ಸೇರಿಸುತ್ತಿವೆ. ಯುವಜನತೆ ಆರೋಗ್ಯ ವ್ಯಾಪ್ತಿಯನ್ನು ಹೆಚ್ಚಿಸಿ ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಲಿವೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಕೀಯ ಅಧಿಕಾರಿ ಡಾ.ಎಂ.ಎಸ್.ಬಸವರಾಜ್, ಕುಲಸಚಿವ ಪ್ರೊ.ಲಿಂಗರಾಜ ಗಾಂಧಿ, ಮೈಸೂರು ವಿವಿಯ ಡಾ. ಡಿ.ಸಿ.ನಂಜುಂಡ ಮತ್ತಿತರರು ಉಪಸ್ಥಿತರಿದ್ದರು.

Leave a Comment