ಆಯುರ್ವೇದ, ಯುನಾನಿ ವಿದ್ಯಾರ್ಥಿಗಳಿಗೆ ನೆರವಿನ ಭರವಸೆ

ಬೆಂಗಳೂರು, ಫೆ. ೧೧- ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಲು ಕ್ರೀಡೆ ಸಹಕಾರಿ. ಯುನಾನಿ ಮತ್ತು ಆಯುರ್ವೇದ ಕೋರ್ಸ್ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ತೊಡಗಿಕೊಂಡರೆ, ಎಲ್ಲಾ ರೀತಿಯ ನೆರವು ಮತ್ತು ಸಹಕಾರ ನೀಡುವುದಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ರಹೀಮ್ ಖಾನ್ ಇಂದಿಲ್ಲಿ ಹೇಳಿದ್ದಾರೆ.
ರಾಷ್ಟ್ರೀಯ ಮಟ್ಟದ ಕ್ರೀಡೆಯಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳಿಗೆ ಕನಿಷ್ಟ 5 ಲಕ್ಷದಿಂದ 50 ಲಕ್ಷ ರೂ. ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳಿಗೆ ಒಂದು ಕೋಟಿ ರೂ. ನಿಂದ 5 ಕೋಟಿ ರೂ. ವರೆಗೆ ಆರ್ಥಿಕ ನೆರವು ಸರ್ಕಾರ ನೀಡಲಿದ್ದು, ಅದನ್ನು ಸದುಪಯೋಗಪಡೆದುಕೊಳ್ಳಬೇಕು ಎಂದು ಕರೆನೀಡಿದರು.
ಯುನಾನಿ ದಿನಾಚರಣೆ ಅಂಗವಾಗಿ ಆಯುಷ್ ಇಲಾಖೆ ನಗರದಲ್ಲಿಂದು ಹಮ್ಮಿಕೊಂಡಿದ್ದ 2 ದಿನಗಳ ಯುನಾನಿ ಉತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಯುನಾನಿ ಮತ್ತು ಆಯುರ್ವೇದ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಪಾಲ್ಗೊಂಡರೆ, ಅಗತ್ಯವಿರುವ ಕ್ರೀಡಾ ಉಪಕರಣಗಳನ್ನು ಇಲಾಖಾ ವತಿಯಿಂದ ಪೂರೈಕೆ ಮಾಡಲಾಗುವುದು ಎಂದರು.
ಕ್ರೀಡೆಯಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಸೇರಿದಂತೆ, ವಿವಿಧ ಸೌಲಭ್ಯಗಳನ್ನು ಸರ್ಕಾರ ನೀಡಲಿದೆ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಆರೋಗ್ಯವೂ ಮುಖ್ಯ. ಹೀಗಾಗಿ ಕ್ರೀಡೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳುವ ಮೂಲಕ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಲು ಹೆಚ್ಚಿನ ಒತ್ತುನೀಡಿ ಎಂದು ಕಿವಿಮಾತು ಹೇಳಿದರು.
ಯುನಾನಿ ಮತ್ತು ಆಯುರ್ವೇದ ಚಿಕಿತ್ಸೆ ಪಡೆಯುವುದರಿಂದ ಯಾವುದೇ ಅಡ್ಡಪರಿಣಾಮ ಬೀರುವುದಿಲ್ಲ. ಉತ್ತಮ ಆರೋಗ್ಯಕ್ಕೂ ಸಹಕಾರಿಯಾಗಲಿದೆ. ಈ ಹಿನ್ನೆಲೆಯಲ್ಲಿ ಇಂಗ್ಲಿಷ್ ಔಷಧಿಗಳು, ಆಯುರ್ವೇದ ಮತ್ತು ಯುನಾನಿಯ ಬಗ್ಗೆ ಅಪಪ್ರಚಾರ ಮಾಡಲು ತೊಡಗಿವೆ. ಇಂತಹುದ್ದಕ್ಕೆ ಹೆಚ್ಚಿನ ಗಮನ ನೀಡುವ ಅಗತ್ಯವಿಲ್ಲ ಎಂದು ಹೇಳಿದರು.
ಯುನಾನಿ ಮತ್ತು ಆಯುರ್ವೇದ ಕಡಿಮೆ ಮೊತ್ತದಲ್ಲಿ ಸಿಗುವ ಅತ್ಯುತ್ತಮ ಚಿಕಿತ್ಸಾ ಸೌಲಭ್ಯಗಳು. ಇದನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದ ಅವರು, ಆರೋಗ್ಯ ಕಾಪಾಡುವಲ್ಲಿ ವೈದ್ಯರುಗಳ ಪಾತ್ರವೂ ಹಿರಿದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಆಯುಷ್ ಇಲಾಖೆಯ ಆಯುಕ್ತೆ ಮೀನಾಕ್ಷಿ ನೇಗಿ, ಸೇರಿದಂತೆ ಆಯುಷ್ ಇಲಾಖೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Comment