ಆಯುರ್ವೇದ ಚಿಕಿತ್ಸೆ ಪಡೆದು ಆರೋಗ್ಯವಂತರಾಗಿ: ಗಂಗಾಂಜನೇಯ

ತುಮಕೂರು, ನ. ೮- ನಮ್ಮ ದೇಶದ ಪಾರಂಪರಿಕ ವೈದ್ಯ ಪದ್ಧತಿಯಾದ ಆಯುರ್ವೇದ ಪದ್ಧತಿಯಡಿ ಚಿಕಿತ್ಸೆ ಪಡೆದು ಜನರು ಹೆಚ್ಚು ಆರೋಗ್ಯವಂತರಾಗಬೇಕು ಎಂದು ತಾ.ಪಂ. ಅಧ್ಯಕ್ಷ ಗಂಗಾಂಜನೇಯ ಕರೆ ನೀಡಿದರು.

ನಗರದ ಜಿಲ್ಲಾಸ್ಪತ್ರೆಯ ಆವರಣದಲ್ಲಿರುವ ಜಿಲ್ಲಾ ಆಯುಷ್ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಆಯುಷ್ ಇಲಾಖೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ 3ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಹಿಂದಿನ ಕಾಲದಲ್ಲಿ ನಮ್ಮ ಪೂರ್ವಜರು ಆಯುರ್ವೇದ ಔಷಧಿಗಳನ್ನು ಸೇವಿಸಿ, ದೀರ್ಘಕಾಲ ಯಾವುದೇ ಪ್ರತಿಕೂಲ ಪರಿಣಾಮವಿಲ್ಲದೆ ಜೀವಿಸುತ್ತಿದ್ದರು. ನಮ್ಮ ಪಾರಂಪರಿಕ ಪದ್ಧತಿಯನ್ನು ಬಳಸಿಕೊಂಡು ಜನರು ದೀರ್ಘಾಯುಷ್ಯ ಜೀವನ ಸಾಗಿಸಬೇಕು ಎಂದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಟಿ.ಎ. ವೀರಭದ್ರಯ್ಯ ಮಾತನಾಡಿ, ಆಯುರ್ವೇದ ಪದ್ಧತಿಯು ಭಾರತದ ಪುರಾತನ ಪದ್ಧತಿಯಾಗಿದ್ದು, ನಮ್ಮ ಪೂರ್ವಜರು ಈ ಪದ್ಧತಿಯಡಿ ಚಿಕಿತ್ಸೆ ಪಡೆದು ದೀರ್ಘಾಯುಷ್ಯಗಳಾಗಿದ್ದರು. ಜನರು ಅಲೋಪತಿ ಚಿಕಿತ್ಸೆ ಪದ್ಧತಿಗೆ ಹೆಚ್ಚಿಗೆ ಮಾರು ಹೋಗದೆ, ಆಯುರ್ವೇದಿಕ್ ಚಿಕಿತ್ಸೆಯನ್ನು ಪಡೆಯಬೇಕು. ಇತ್ತೀಚಿನ ದಿನಗಳಲ್ಲಿ ಆಯುರ್ವೇದೆಡೆಗೆ ಜನರು ಆಸಕ್ತಿ ತೋರುತ್ತಿದ್ದಾರೆ ಎಂದರು.

ಜಿಲ್ಲಾ ಆಯುಷ್ ಅಧಿಕಾರಿ ಡಾ. ಸಂಜೀವಮೂರ್ತಿ ಮಾತನಾಡಿ, ಆಧುನಿಕ ಜೀವನ ಶೈಲಿಯಿಂದಾಗಿ ಜನರಲ್ಲಿ ರೋಗ ನಿರೋಧಕ ಶಕ್ತಿ ಇಳಿಮುಖವಾಗುತ್ತಿದೆ. ನಮ್ಮ ಪಾರಂಪರಿಕ ವೈದ್ಯ ಪದ್ಧತಿಯಾದ ಆಯುರ್ವೇದದಲ್ಲಿ ಯಾವ ಶಸ್ತ್ರ ಚಿಕಿತ್ಸೆಯಿಲ್ಲದೆ ರೋಗವನ್ನು ಗುಣಪಡಿಸುವ ಶಕ್ತಿ ಇದೆ ಎಂದರು.

ಕಾರ್ಯಕ್ರಮದಲ್ಲಿ ಡಾ. ಕೇಶವಮೂರ್ತಿ, ಡಾ. ಗುರುಪ್ರಸಾದ್, ಡಾ. ಹಕೀಮ್ ಮತ್ತಿತರರು ಭಾಗವಹಿಸಿದ್ದರು.
ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಆಯುರ್ವೇದ ಶಿಬಿರದಲ್ಲಿ ನೂರಾರು ಜನರು ಭಾಗವಹಿಸಿ ಸಲಹೆ, ಸೂಚನೆ ಹಾಗೂ ಚಿಕಿತ್ಸೆಯನ್ನು ಪಡೆದರು.

Leave a Comment