ಆಯುಕ್ತರಿಲ್ಲದೆ ನರಳುತ್ತಿರುವ ಶಿಕ್ಷಣ ಇಲಾಖೆ

ಕಲಬುರಗಿ, ಜು. 15: ಸರಕಾರದ ಎಲ್ಲಾ ಇಲಾಖೆಗಳಂತೆ ಶಿಕ್ಷಣ ಇಲಾಖೆ ಕೂಡ ಮಹತ್ವದಾಗಿದೆ. 6 ಜಿಲ್ಲೆಗಳಿಗೆ ಸಂಬಂಧಿಸಿದ ಅತೀ ದೊಡ್ಡ ಶಿಕ್ಷಣ ಇಲಾಖೆಯ ಆಯುಕ್ತಾಲಯಕ್ಕೆ ಆಯುಕ್ತರಿಲ್ಲದೆ ಕಳೆದ ಎಂಟು ತಿಂಗಳಿಂದ ಕಾರ್ಯಭಾರ ನಡೆಯುತ್ತಿದೆ.
ಕಳೆದ ವರ್ಷ 2016ರ ನವೆಂಬರ್ ಕೊನೆಯಲ್ಲಿ ರಾಧಾಕೃಷ್ಣ ಮದನಕರ್ ಅವರು ನಿವೃತ್ತಿಯ ನಂತರ ಸೇವಾ ಹಿರಿತನದ ಮೇಲೆ ಅದೇ ಇಲಾಖೆಯ ಹಿರಿಯ ಅಧಿಕಾರಿ ಸಿ.ವಿ. ಹಿರೇಮಠ ಅವರನ್ನು ಪ್ರಭಾರಿ ಆಯುಕ್ತರನ್ನಾಗಿ ನಿಯೋಜನೆ ಮಾಡಲಾಗಿತ್ತು. ಅವರು ಕೂಡ ಮೇ ತಿಂಗಳಲ್ಲಿ ನಿವೃತ್ತಿಯಾಗಿದ್ದಾರೆ. ಹಿರೇಮಠರ ನಿವೃತ್ತಿಯ ನಂತರ ಮತ್ತೆ ಆಯುಕ್ತರ ನಿಯುಕ್ತಿಯಾಗಲಿಲ್ಲ. ಆಯುಕ್ತರ ಹುದ್ದೆ ಖಾಲಿ ಇದೆ ಎಂದು ರಾಜ್ಯ ಸರಕಾರಕ್ಕೆ ಇಲ್ಲಿನ ನಿರ್ದೇಶಕರು ಮಾಹಿತಿ ನೀಡಿದ್ದಾರೆ.
ಹಿಂದುಳಿದ ಭಾಗ ಎಂದು ಹಣೆ ಪಟ್ಟಿ ಕಟ್ಟಿಕೊಂಡಿರುವ ಕಲಬುರಗಿ ವಿಭಾಗದಲ್ಲಿ ಆಯುಕ್ತರಾಗಿ ಕಾರ್ಯನಿರ್ವಹಿಸಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಐಎಎಸ್ ಅಧಿಕಾರಿಗಳನ್ನು ಸೇವಾ ಹಿರಿತನ ಮೇಲೆ ಆಯುಕ್ತರನ್ನಾಗಿ ಬಡ್ತಿ ನೀಡಿದರೂ ಇಲ್ಲಗೆ ಬರಲು ಒಪ್ಪುತ್ತಿಲ್ಲ. ಬೇಕಾದರೆ ಬಡ್ತಿಯನ್ನೆ ತಿರಸ್ಕರಿಸುತ್ತೇವೆ. ಆದರೆ ಕಲಬುರಗಿ ವಿಭಾಗದಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಅಧಿಕಾರಿಯೊಬ್ಬರು ಇಲಾಖೆಯ ಕಾರ್ಯದರ್ಶಿಯವರಿಗೆ ತಿಳಿಸಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಈ ಭಾಗದಲ್ಲಿ ಪ್ರೌಢ ಶಾಲೆ ಹಾಗೂ ಪ್ರಾಥಮಿಕ ಶಾಲೆ ಸೇರಿದಂತೆ ಸುಮಾರು 15 ಸಾವಿರಕ್ಕೂ ಅಧಿಕ ಹುದ್ದೆಗಳು ಖಾಲಿ ಇವೆ. ಹೈ.ಕ. ಭಾಗದ ಎಲ್ಲಾ ಹುದ್ದೆಗಳು ಭರ್ತಿ ಮಾಡುವದಾಗಿ ಶಿಕ್ಷಣ ಸಚಿವರು ಹೇಳಿಕೆ ನೀಡುತ್ತಾರೆ. ಇದೇ 20 ರಂದು 5400 ಅಧಿಕ ಖಾಲಿ ಇರುವ ಪ್ರಾಥಮಿಕ ಶಿಕ್ಷಕರ ಹುದ್ದೆಗಳ ಸೇರಿದಂತೆ ಸುಮಾರು 10 ಸಾವಿರ ಹುದ್ದೆಗಳ ಭರ್ತಿ ಮಾಡುವದಕ್ಕೆ ಅಧಿಸೂಚನೆ ಸರಕಾರದಿಂದ ಹೊರಡಿಸಲಾಗುವದು ಎಂದು ಹೇಳಿಕೆ ನೀಡಿದ್ದಾರೆ.
ಅದರೆ ಸಂಜೆವಾಣಿ ಅವರನ್ನು ದೂರವಾಣಿ ಮುಖಾಂತರ ಸಂಪರ್ಕಿಸಲು ಪ್ರಯತ್ನಿಸಲಾದರೂ, ಮೊಬೈಲ್ ರಿಂಗ್ ಆಗುತ್ತದೆ ಆದರೆ ಕರೆಯನ್ನು ಯಾರು ಸ್ವೀಕರಿಸುತ್ತಿಲ್ಲ.
ಜಿಲ್ಲಾ ಪಂಚಾಯತನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಹೆಚ್ಚುವರಿಯಾಗಿ ಶಿಕ್ಷಣ ಇಲಾಖೆಯ ಆಯುಕ್ತರ ಹುದ್ದೆಯ ಪ್ರಭಾರ ವಹಿಸಿಕೊಡಲಾಗಿದೆ. ಅಗತ್ಯ ಕಡತಗಳಿಗೆ ಅನುಮೊದನೆ ಪಡೆಯಬೇಕಾದರೆ ಆಯುಕ್ತರ ಕಾರ್ಯಾಲಯದಿಂದ ಜಿಪಂ ಕಚೇರಿಗೆ ಕಡತಗಳನ್ನು ತೆಗೆದುಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನೂ ಇಲಾಖೆಯಲ್ಲಿ ಕೆಲವರ ಲಾಬಿಯಿಂದಾಗಿ ಅವರ ನಿರ್ಧಾರವೇ ಅಂತಿಮವಾಗಿದೆ ಎನ್ನುವಂತಾಗಿದೆ. ಆಯುಕ್ತರು ತೆಗೆದುಕೊಳ್ಳುವ ನಿರ್ಧಾರಗಳು ಕಾರ್ಯಾಲಯದಲ್ಲಿ ಎಸ್‍ಡಿಎ ಹಾಗೂ ಎಫ್‍ಡಿಎಗಳು ತೆಗೆದುಕೊಳ್ಳುವಂತ ಪರಿಸ್ಥಿತಿ ಇದೆ ಎಂದರೆ ಇನ್ನೂ ಶಿಕ್ಷಣ ಗತಿ ಏನು ಎಂಬಂತಾಗಿದೆ.

Leave a Comment