ಆಯಾಗಳಿಗೆ ಕನಿಷ್ಠ ವೇತನ ಪಾವತಿಗೆ ಒತ್ತಾಯ

ರಾಯಚೂರು.ಆ.01- ರಾಜ್ಯದ ವಿವಿಧ ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಆಯಾಗಳಿಗೆ ಕನಿಷ್ಠ ವೇತನ ಪಾವತಿಸಿ, ಡಿ.ದರ್ಜೆ ನೌಕರರೆಂದು ಪರಿಗಣಿಸದಿದ್ದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಕೋರ್ಟ್‌ನಲ್ಲಿ ದಾಖಲಿಸುವುದಾಗಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಆಯಾಗಳ ಸಂಘದ ರಾಜ್ಯ ಕಾರ್ಯದರ್ಶಿ ಎಂ.ಮಹೇಶ ಕುಮಾರ ಹೇಳಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡಿ, 2016 ಆ.4 ರಂದು ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಹೈಕೋರ್ಟ್ ಆದೇಶದಂತೆ ಆಯಾಗಳಿಗೆ ಕನಿಷ್ಠ ವೇತನ ಪಾವತಿಸಬೇಕು. ಇಲ್ಲದಿದ್ದರೆ, ಡಿ.ದರ್ಜೆ ನೌಕರರೆಂದು ಪರಿಗಣಿಸಬೇಕೆಂದು ಒತ್ತಾಯಿಸಿದರು. ಆಯಾಗಳ ವೇತನ ಪ್ರತಿ ತಿಂಗಳ ಶಿಕ್ಷಕರ ವೇತನ ಜೊತೆ ಬಿಲ್ ಪಾವತಿಸಬೇಕು. ವಯೋವೃದ್ಧ ಆಯಾಗಳ ಬದಲಿಗೆ ಅವರ ಸಂಬಂಧಿಕರಿಗೆ ಕೆಲಸ ನೀಡಬೇಕೆಂದು ಒತ್ತಾಯಿಸಿದರು.
ಆಯಾಗಳಿಗೆ ಪ್ರತಿ ತಿಂಗಳು 5 ಸಾವಿರ ರೂ. ಮತ್ತು ನಿವೃತ್ತಿ ಪಿಂಚಣಿ ನಿಗದಿ ಪಡಿಸಬೇಕು. ವಯೋವೃದ್ಧ ಆಯಾಗಳಿಗೆ ಕನಿಷ್ಠ 6 ಲಕ್ಷ ರೂ. ಪರಿಹಾರ ನೀಡಬೇಕು. 2002 ರಿಂದ 2011ರ ವರೆಗೆ ತಡೆಹಿಡಿದ ಬೇಸಿಗೆ ರಜೆ ಬಾಕಿ ವೇತನ ಹಾವೇರಿ, ಚಿಕ್ಕೋಡಿ, ಬೆಳಗಾಂ, ಮಂಡ್ಯ, ಚಾಮರಾಜ ನಗರ, ಕೊಡಗು, ಚಿಕ್ಕಬಳ್ಳಾಪುರ ಜಿಲ್ಲೆಯವರಿಗೆ ನೀಡಿರುವುದಿಲ್ಲ. ತಕ್ಷಣವೇ ವೇತನ ಪಾವತಿಸಲು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸಬೇಕೆಂದು ಒತ್ತಾಯಿಸಿದರು.
ಆಯಾಗಳು ಎದುರಿಸುತ್ತಿರುವ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿ ಜು.31 ರಂದು ಕಲ್ಬುರ್ಗಿ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾದ ಗಜಾನನ ಮಲ್ಕೇರಿಯವರು ಆಯುಕ್ತರೊಂದಿಗೆ ಚರ್ಚಿಸಿ, ಕನಿಷ್ಠ ವೇತನ ನೀಡುವುದಾಗಿ ಭರವಸೆ ನೀಡಿದ್ದಾರೆ. ಕುರಿತು ಶುಕ್ರವಾರದೊಳಗೆ ಅಧಿಕೃತ ಆದೇಶ ಹೊರಡಿಸದಿದ್ದಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸುವುದಾಗಿ ತಿಳಿಸಿದರು.

Leave a Comment