ಆಮಿ ಜಾಕ್ಸನ್‌ಗೆ ಸೀಮಂತ ಸಂಭ್ರಮ

ಲಂಡನ್, ಆ ೩೧- ಮದುವೆ ಮಾಡಿಕೊಳ್ಳದೇ ತಾಯಿಯಾಗುವ ಮೂಲಕ ಸುದ್ದಿ ಮಾಡಿದ್ದ ಬ್ರಿಟಿಷ್ ಮೂಲದ ವಿಲನ್ ನಟಿ ಆಮಿ ಜಾಕ್ಸನ್‌ಗೆ ಇದೀಗ ಸೀಮಂತ ಸಂಭ್ರಮ.

ಇತ್ತೀಚೆಗೆ ಮಗುವಿನ ಲಿಂಗದ ಬಗ್ಗೆ ಮಾಹಿತಿ ಹಂಚಿಕೊಂಡು ಸುದ್ದಿಯಲ್ಲಿದ್ದ ಆಮಿ ಇದೀಗ ಅದ್ಧೂರಿಯಾಗಿ ಸೀಮಂತ ಮಾಡಿಕೊಂಡು ಗಮನ ಸೆಳೆದಿದ್ದಾರೆ. ಸದ್ಯದಲ್ಲೇ ಆಕೆ ತಾಯಿಯಾಗುತ್ತಿದ್ದಾರೆ. ಆಮಿ ಜಾಕ್ಸನ್ ಮತ್ತು ಪ್ರಿಯಕರ ಜಾರ್ಜ್ ಪನಯೌಟು ಜೋಡಿಗೆ ಶೀಘ್ರದಲ್ಲಿಯೇ ಮಗು ಜನಿಸಲಿದೆ. ಈ ಹಿನ್ನೆಲೆಯಲ್ಲಿ ಆಮಿ ಜಾಕ್ಸನ್‌ಗೆ ಎಲ್ಲರೂ ಸೇರಿ ಅದ್ಧೂರಿಯಾಗಿ ಬೇಬಿ ಶೋವರ್ ಅನ್ನು ಏರ್ಪಡಿಸಿದ್ದರು.

ಈ ಕಾರ್ಯಕ್ರಮದ ಕೆಲವು ಫೋಟೋಗಳನ್ನು ಆಮಿ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಮಗುವನ್ನು ಪಡೆಯುವ ಸಂಭ್ರಮದಲ್ಲಿ ತೇಲುತ್ತಿರುವ ಆಮಿ, ನನ್ನ ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ಸೇರಿ ಅವಿಸ್ಮರಣೀಯವಾದ ಬೇಬಿ ಶೋವರ್ ನಲ್ಲಿ ಪಾಲ್ಗೊಂಡಿದ್ದು ಸಂತಸವೆನಿಸುತ್ತಿದೆ. ಜನಿಸುವ ಮುನ್ನವೇ ನನ್ನ ಮಗು ಇಂತಹ ಸಮಾರಂಭವನ್ನು ಆಚರಿಸಿಕೊಂಡಿದ್ದು ವರ್ಣಿಸಲಾಗದು ಎಂದಿದ್ದಾರೆ.

ತಾನು ತಾಯಿಯಾಗುತ್ತಿದ್ದೇನೆ ಎಂದು ಕಳೆದ ಮಾರ್ಚ್ ನಲ್ಲಿ ಪ್ರಕಟಿಸಿದ ನಂತರ ಆಮಿ, ತನ್ನ ಹಲವಾರು ಫೋಟೋಗಳನ್ನು ಇನ್ ಸ್ಟಾಗ್ರಾಂನಲ್ಲಿ ನಿರಂತರವಾಗಿ ಹಾಕುತ್ತಲೇ ಬಂದಿದ್ದಾರೆ. ಅದರಲ್ಲಿ ಪ್ರಮುಖವಾಗಿ ಯೋಗಾಭ್ಯಾಸ ಮಾಡುತ್ತಿರುವುದು, ಧ್ಯಾನ ಮಾಡುತ್ತಿರುವುದು, ವಿಶ್ರಾಂತಿ ಪಡೆಯುತ್ತಿರುವ ಫೋಟೋಗಳೂ ಸೇರಿವೆ.

ಮೇ ೫ರಂದು ಲಂಡನ್‌ನಲ್ಲಿರುವ ಅವರ ಮನೆಯಲ್ಲೇ ತಮ್ಮ ಪ್ರಿಯಕರ ಜಾರ್ಜ್ ಪನಯೌಟು ಜೊತೆ ಅಧಿಕೃತವಾಗಿ ನಿಶ್ಚಿತಾರ್ಥ ಮಾಡಿಕೊಂಡಿರುವ ಆಮಿ ಜಾಕ್ಸನ್, ೨೦೨೦ ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಅದಕ್ಕೂ ಮುಂಚೆ ಮಗುವನ್ನು ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

Leave a Comment