ಆಪರ್ಚುನಿಟಿ ರೋವರ್‌ 15ನೇ ವರ್ಷಾಚರಣೆ

  • ಉತ್ತನೂರು ವೆಂಕಟೇಶ್

ಶರಶೆಯ್ಯೆಯಲ್ಲಿ ಮಲಗಿದ ಮಹಾಭಾರತದ ಭೀಷ್ಮನಂತೆ ಕೊಮಾ ಸ್ಥಿತಿಯಲ್ಲಿರುವ ನಾಸಾದ ಮಂಗಳ ಶೋಧನಾ ನೌಕೆ ಆಪರ್ಚುನಿಟಿ ರೋವರ್‌ನಲ್ಲಿ ಎಂದಾದರೊಂದು ದಿನ ಜೀವ ಮರುಕಳಿಸಿ ಅದರಿಂದ ಬರುವ ಸಂದೇಶವನ್ನು ಕೇಳಬಹುದು ಎಂಬ ನಿರೀಕ್ಷೆಯಲ್ಲಿರುವ ನಾಸಾ ಇಂಜಿನಿಯರ್‌ಗಳು ಈಗಲೂ ಅದಕ್ಕೆ ನಿರ್ದೇಶಿತ ಮಾಹಿತಿಯನ್ನು (ಕಮಾಂಡ್) ಕಳುಹಿಸುತ್ತಿದ್ದಾರೆ.

  • ಮಂಗಳ ಗ್ರಹದ ಶೋಧನೆಗೆಂದು ಜುಲೈ 2003 ರಲ್ಲಿ ನಾಸಾ ಉಡಾವಣೆಮಾಡಿದ್ದ ಆಪರ್ಚುನಿಟಿ ರೋವರ್‌ ಈಗ ನಿರ್ಜೀವ ಸ್ಥಿತಿಯಲ್ಲಿದೆ. ಆದರೂ ಇದರ 15ನೇ ವರ್ಷಾಚರಣೆಯನ್ನು ನಾಸಾ ವಿಜ್ಞಾನಿಗಳು ಕಳೆದ ತಿಂಗಳು ಸಂಭ್ರಮದಿಂದ ಆಚರಿಸಿದ್ದಾರೆ.
  • 2003 ರ ಜುಲೈನಲ್ಲಿ ಉಡಾವಣೆಗೊಂಡು ದೀರ್ಘಾಕಾಲದ ಯಾನದ ನಂತರ 2004 ರಿಂದ ಶೋಧನಾ ಕಾರ್ಯ ಆರಂಭಿಸಿತ್ತು.
  • 2018ರ ಜೂನ್ ನಲ್ಲಿ ಮಂಗಳ ನಲ್ಲಿ ಬೀಸಿದ ಧೂಳಿನಿಂದ ಕೂಡಿದ ಪ್ರಚಂಡ ಬಿರುಗಾಳಿ ಇದರ ಜೀವವನ್ನು ನುಂಗಿ ಹಾಕಿತು.

ಆಪರ್ಚುನಿಟಿಯ ಸಾಹಸಗಾತೆಯೊಂದಿಗೆ ನಾಸಾ ವಿಜ್ಞಾನಿಗಳ ಅದರ 15ನೇ ವರ್ಷಾಚರಣೆಯನ್ನು ಕಳೆದ ತಿಂಗಳು ಆಚರಿಸಿ ಸಂಭ್ರಮಿಸಿತು.

3vichara1

ಅದರ ಅಪ್ರತಿಮ ಕಾರ್ಯ ವಿಧಾನವನ್ನು ಕೊಂಡಾಡಿತು. ಅದಕ್ಕೆ ಲಕ್ಷ, ಲಕ್ಷ ವಂದನೆ ಅಭಿನಂದನೆ ಸಲ್ಲಿಸಲಾಯಿತು. ಕೆಂಪು ಗ್ರಹದ ಮೇಲೆ ಆಪರ್ಚುನಿಟಿಯು ಮಹತ್ವದ ಅನ್ವೇಷಣೆ ನಡೆಸುವ ಒಂದು ಅದ್ಭುತ ಯಂತ್ರವಷ್ಟೇ ಆಗಿರಲಿಲ್ಲ. ಅದರ ಹಿಂದೆ ಅರ್ಪಣ ಮನೋಭಾವದ ಮತ್ತು ಪ್ರತಿಭಾನ್ವಿತರ ಒಂದು ದೊಡ್ಡ ತಂಡವೇ ಇತ್ತು ಎಂದು ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೋರೇಟಿಯಲ್ಲಿನ ಆಪರ್ಚುನಿಟಿಯ ಪ್ರಾಜೆಕ್ಟ್ ಮ್ಯಾನೇಜರ ಜಾನ್ ಕ್ಯಾಲ್ಲಸ್ ಈ ಸಂದರ್ಭದಲ್ಲಿ ಹೇಳಿದ್ದಾರೆ.

ಮಂಗಳ ಶೋಧನೆಗೆ ನಾಸಾ ಹಲವು ನೌಕೆಗಳನ್ನು ಈಗಾಗಲೇ ಕಳುಹಿಸಿದೆ. ಆದರೆ ಆಪರ್ಚುನಿಟಿ ರೋವರ್ ಅವೆಲ್ಲದರಿಂದ ಭಿನ್ನ. ಕಾರ್ಯ ವಿಧಾನದಲ್ಲಿ ಕಾರ್ಯ ಕ್ಷಮತೆಯಲ್ಲಿ ಇದಕ್ಕೆ ಸರಿಯಾಟಿಯಾಗಿ ಯಾವುದೇ ನಾಸಾದ ಮಂಗಳ ನೌಕೆ ನಿಲ್ಲಲಾರರು.

ಭೀಕರ ಬಿರುಗಾಳಿ

ಮಂಗಳನ ಮೇಲ್ಮೈಯಲ್ಲಿ ತೆರಳುತ್ತ ವಾಲುವ, ಓಡಾಡುತ್ತಾ, ಸಿಕ್ಕ -ಸಿಕ್ಕ ಮಾಹಿತಿಯನ್ನು ಭೂಮಿಗೆ ರವಾನಿಸುತ್ತ ಇದ್ದ ಇದರ ಚಟುವಟಿಕೆಗೆ ಗ್ರಹಣ ಇಡಿಯುವ ರೀತಿಯಲ್ಲಿ ಮಂಗಳನಲ್ಲಿ ಅಪ್ಪಳಿಸಿದ ಧೂಳಿನಿಂದ ಕೂಡಿದ ಬಿರುಗಾಳಿ ಇದರ ಜೀವವನ್ನೇ ನುಂಗಿ ಹಾಕಿತು. 2018ರ ಜೂನ್ 10 ರಂದು ಮಂಗಳ ಗ್ರಹದಲ್ಲಿ ಅಪ್ಪಳಿಸಿದ ಧೂಳಿನಿಂದ ಕೂಡಿದ ಬಿರುಗಾಳಿಯಿಂದ ನೌಕೆಯ ಸೋಲಾರ್ ರೆಕ್ಕೆಗಳನ್ನು ಧೂಳು ಸಂಪೂರ್ಣವಾಗಿ ಆವರಿಸಿಕೊಂಡಿತ್ತು.

ಅತಿಯಾದ ಧೂಳಿನಿಂದ ತುಂಬಿ ಹೋದ ಇದರ ಸೋಲಾರ್ ಪ್ಯಾನೆಲ್‌ಗಳು ನೌಕೆಯ ಚಾಲನಾ ಶಕ್ತಿ ವಿದ್ಯುತ್ ನಿಲುಗಡೆಯಾಯಿತು. ನೌಕೆ ನಿರ್ಜೀವ ಸ್ಥಿತಿಗೆ ಬಂತು. 2004 ರಿಂದ ನಿಶ್ಯಕ್ತವಾಗುವ ತನಕ ಸರಿಸುಮಾರು 45 ಕಿ.ಮೀ. ನಡೆದಾಡಿದ ಕೀರ್ತಿ ಇದರದು.

ಮಂಗಳನ ಶೋಧನೆಗೆಂದು ಈ ನೌಕೆಯನ್ನು ಉಡಾವಣೆ ಮಾಡಿದಾಗ, ಇದು ಇಷ್ಟೊಂದು ದೀರ್ಘಕಾಲದವರೆಗೆ ಸಕ್ಷಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ನಾಸಾ ವಿಜ್ಞಾನಿಗಳು ಅಂದಾಜಡಿಸಿಯೇ ಇರಲಿಲ್ಲ. ಕೇವಲ 90 ದಿನಗಳ ಕಾರ್ಯಾಚರಣೆ ಕ್ಷಮತೆಯೊಂದಿಗೆ ನಿರ್ಮಾಣ ಮಾಡಿದ್ದ ಈ ನೌಕೆ ನಾಸಾ ವಿಜ್ಞಾನಿಗಳ, ಇಂಜಿನಿಯರ್‌ಗಳ ನಿರೀಕ್ಷೆಗೂ ಮೀರಿ  ಒಂದು ದಶಕಕ್ಕೂ ಅಧಿಕ ಕಾಲ ಮಂಗಳದಲ್ಲಿ ಕಾರ್ಯನಿರ್ವಹಿಸಿದೆ. ಈಗ ನಿರ್ಜೀವವಾಗಿದ್ದರೂ ಮುಂದೊಂದು ದಿನ ಇದರಲ್ಲಿ  ಜೀವ ಬರಬಹುದು ಎಂಬ ಆಶಾಭಾವನೆ ನಾಸಾ ವಿಜ್ಞಾನಿಗಳಲ್ಲಿ ಇನ್ನು ಇದೆ.

Leave a Comment