ಆನೆಯ ಸೈಕಲ್ ಸವಾರಿ!

ಲಕ್ನೊ, ಜ. ೧೨- ಕಾಂಗ್ರೆಸ್ ಪಕ್ಷವನ್ನು ಬದಿಗಿಟ್ಟು ಉತ್ತರ ಪ್ರದೇಶದಲ್ಲಿ ಮಹಾಮೈತ್ರಿ  ರಚಿಸಿಕೊಂಡಿರುವ ಬಿಎಸ್‌ಪಿ ಮತ್ತು ಎಸ್‌ಪಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸೀಟು ಹೊಂದಾಣಿಕೆ ಮಾಡಿಕೊಂಡಿವೆ. ಉತ್ತರ ಪ್ರದೇಶದ 80 ಲೋಕಸಭಾ ಕ್ಷೇತ್ರಗಳ ಪೈಕಿ ತಲಾ 38 ಲೋಕಸಭಾ ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷಗಳು ಸ್ಪರ್ಧಿಸಲಿವೆ ಎಂದು ಮಾಯಾವತಿ ಘೋಷಣೆ ಮಾಡಿದ್ದಾರೆ.
ಎಸ್.ಪಿ. ಅಧ್ಯಕ್ಷ ಅಖಿಲೇಶ್ ಯಾದವ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಹಾಮೈತ್ರಿ ಕುರಿತಂತೆ, ಅಧಿಕೃತವಾಗಿ ಘೋಷಣೆ ಮಾಡಿದ ಮಾಯಾವತಿ ಅವರು, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪ್ರತಿನಿಧಿಸಿರುವ ಅಮೇಥಿ ಹಾಗೂ ರಾಯ್‌ಬರೇಲಿ ಕ್ಷೇತ್ರಗಳಲ್ಲಿ ಮೈತ್ರಿಕೂಟದ ಅಭ್ಯರ್ಥಿಗಳು ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್‌ನಿಂದ ಮಹಾಮೈತ್ರಿಗೆ ಯಾವುದೇ ರೀತಿಯ ಲಾಭ ಆಗುವುದಿಲ್ಲ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತಬ್ಯಾಂಕ್ ಸಾಕಷ್ಟಿಲ್ಲ. ಈ ಕಾರಣದಿಂದಾಗಿ ಆ ಪಕ್ಷವನ್ನು ಕೈಬಿಟ್ಟು ಮಹಾಮೈತ್ರಿ ರಚನೆ ಮಾಡಿಕೊಂಡಿರುವುದಾಗಿ ತಿಳಿಸಿದರು.
ಬೋಫೋರ್ಸ್ ಹಗರಣದಲ್ಲಿ ಅಧಿಕಾರ ಕಳೆದುಕೊಂಡ ಕಾಂಗ್ರೆಸ್‌ನಂತೆ ರಫೇಲ್ ಹಗರಣದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರ ಕಳೆದುಕೊಳ್ಳಲಿದೆ ಎಂದು ಭವಿಷ್ಯ ನುಡಿದಿರುವ ಬಿಸ್‌ಪಿ ಅಧ್ಯಕ್ಷೆ ಮಾಯಾವತಿ, ಎಸ್‌.ಪಿ. ಜೊತೆ ಸೇರಿ ಮಹಾಮೈತ್ರಿ ಮಾಡಿಕೊಂಡಿರುವುದರಿಂದ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ನಿದ್ರೆ ಕೆಡಿಸಲಿದೆ ಎಂದು ಹೇಳಿದರು.
ಎರಡು ಸ್ಥಾನಗಳನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿರುವ ಮಹಾಮೈತ್ರಿಕೂಟ ಇನ್ನುಳಿದ ಎರಡು ಸೀಟುಗಳನ್ನು ಸಣ್ಣಪುಟ್ಟ ಪಕ್ಷಗಳಿಗೆ ಬಿಟ್ಟುಕೊಡಲು ತೀರ್ಮಾನಿಸಿದೆ. ಕೋಮುವಾದಿ ಶಕ್ತಿಗಳನ್ನು ಹಿಮ್ಮೆಟ್ಟಿಸಲು ಮತ್ತು ರಾಜ್ಯದ ಜನರ ಹಿತ ಕಾಪಾಡಲು ಮಹಾಮೈತ್ರಿ ಮಾಡಿಕೊಳ್ಳಲಾಗಿದೆ ಎಂದು ಮಾಯಾವತಿ ಹೇಳಿದರು.
ತಮ್ಮ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ಮುಂದೆ ಬಂದ ಮಾಯಾವತಿ ಅವರ ನಿರ್ಧಾರವನ್ನು ಸ್ವಾಗತಿಸಿರುವ ಅಖಿಲೇಶ್ ಯಾದವ್, ಮಾಯಾವತಿ ಅವರಿಗೆ ಯಾವುದೇ ರೀತಿಯ ಅವಮಾನವಾದರೂ ಅದು ತಮಗೇ ಆದಂತೆ ಎಂದರು.
ಬಿಜೆಪಿಯ ಧಾರ್ಮಿಕ ಮತ್ತು ಜಾತಿ ಆಧಾರದ ರಾಜಕಾರಣವನ್ನು ಹತ್ತಿಕ್ಕಲು ಎರಡೂ ಪಕ್ಷಗಳು ಉತ್ತರ ಪ್ರದೇಶದಲ್ಲಿ ಒಂದಾಗಿವೆ. ಬಿಜೆಪಿಯನ್ನು ಸೋಲಿಸಲು ಈ ಮೈತ್ರಿ ಸಹಕಾರಿಯಾಗಲಿದೆ ಎಂದು ಅಖಿಲೇಶ್ ಯಾದವ್ ಹೇಳಿದರು.
ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಹೇಳಿಕೊಳ್ಳುವಂತಹ ವ್ಯತ್ಯಾಸಗಳೇನೂ ಇಲ್ಲ. ಅವೆರಡೂ ಪಕ್ಷಗಳು ಒಂದೇ ರೀತಿಯ ನೀತಿ ನಿರ್ಧಾರಗಳನ್ನು ಮತ್ತು ಸಿದ್ಧಾಂತಗಳನ್ನು ಹೊಂದಿವೆ. ಇವೆರಡೂ ಪಕ್ಷಗಳು ಭ್ರಷ್ಟಾಚಾರದಲ್ಲಿ ತೊಡಗಿವೆ ಎಂದ ಮಾಯಾವತಿ, ಕಾಂಗ್ರೆಸ್‌ನೊಂದಿಗೆ ಎಲ್ಲಾ ವರ್ಗಗಳೂ ಅಸಮಾಧಾನ ಹೊಂದಿವೆ ಎಂದರು.
ಜನಸಾಮಾನ್ಯರ ಪ್ರತಿನಿಧಿಯಾಗಿ ಮೈತ್ರಿಕೂಟ ಹೊರಹೊಮ್ಮಿದೆ. ನಮ್ಮಲ್ಲಿನ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ದೇಶದ ಹಿತಕ್ಕಾಗಿ ನಾವು ಶ್ರಮಿಸುತ್ತೇವೆ ಎಂದು ಅವರು ಹೇಳಿದರು.

Leave a Comment