ಆನಂದ್‌ಸಿಂಗ್‌ಗೆ ಟಿಕೆಟ್ ಖಚಿತ ಫಲಿತಾಂಶ ಅನಿಶ್ಚಿತ

ಬಳ್ಳಾರಿ, ಏ. ೪- ಜಿಲ್ಲೆಯ ಕೂಡ್ಲಿಗಿ ಕ್ಷೇತ್ರದ ಬಿ.ನಾಗೇಂದ್ರ, ಕಂಪ್ಲಿ ಕ್ಷೇತ್ರದ ಸುರೇಶ್ ಬಾಬು, ಮತ್ತು ವಿಜಯನಗರ ಕ್ಷೇತ್ರದ ಆನಂದ್ ಸಿಂಗ್ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ಇವರಿಗೆ ಟಿಕೆಟ್ ಖಚಿತ. ಹ್ಯಾಟ್ರಿಕ್ ಗೆಲುವಿಗಾಗಿ ಕಾದಿರುವ ಇವರಿಗೆ ಫಲಿತಾಂಶ ಮಾತ್ರ ಅನಿಶ್ಚಿತ.
ಬಿ.ನಾಗೇಂದ್ರ
ಬಿ.ನಾಗೇಂದ್ರ ಮೊದಲ ಬಾರಿಗೆ 2008ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕೂಡ್ಲಿಗಿ ಕ್ಷೇತ್ರದಲ್ಲಿ ಸ್ಪರ್ಧೆಗಿಳಿದರು. ಕ್ಷೇತ್ರದಲ್ಲಿ ಹೊಸಬರಾದರು ಭಾರೀ ಮತಗಳಿಂದ ಕಾಂಗ್ರೆಸ್ ನ ವೆಂಕಟೇಶ್ ಅವರನ್ನು ಮಣಿಸಿದರು. ಯುವಕರಾಗಿದ್ದ ಇವರು ಜನ ಧನ ಬಲದಿಂದ ಕ್ಷೇತ್ರದ ಹಿರಿ-ಕಿರಿಯರನ್ನೆಲ್ಲ ಸಮಾನ ಗೌರವಗಳೊಂದಿಗೆ ವಿಜಯಲಕ್ಷ್ಮಿಯನ್ನು ಒಲಿಸಿಕೊಂಡರು.
ಹಲವು ರಾಜಕೀಯ ಬೆಳವಣಿಗೆಗಳ ಹಿನ್ನಲೆಯಲ್ಲಿ 2013ರ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಮತ್ತೆ ವೆಂಕಟೇಶ ಅವರನ್ನು ಹೆಚ್ಚು ಮತಗಳಿಂದ ಸೋಲಿಸಿದರು. ಈಗ ಕಾಂಗ್ರೆಸ್ ಗೆ ಜಂಪ್ ಆಗಿರುವ ಅವರು, ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಖಚಿತವಿದೆಯಾದರೂ ಫಲಿತಾಂಶಕ್ಕೆ ಹಿರಿಯ ರಾಜಕಾರಣಿ ಮಾಜಿ ಶಾಸಕ ಎನ್.ಟಿ.ಬೊಮ್ಮಣ್ಣ ಜೆಡಿಎಸ್ ನಿಂದ ಮತ್ತು ಬಿಜೆಪಿಯಿಂದ ಕೋಡಿಹಳ್ಳಿ ಸೇರಿದಂತೆ ಹಲವರು ಸ್ಪರ್ಧಿಗಳಾಗುತ್ತಿದ್ದಾರೆ.
ಏನೇ ಆದರೂ ನನ್ನ ಗೆಲುವಿಗೆ ಭಯವಿಲ್ಲ ಎನ್ನುವಂತಹ ಪರಿಸರವನ್ನು ನಾಗೇಂದ್ರ ಸ್ಪಷ್ಟ ಮಾಡಿಕೊಂಡಿದ್ದಾನೆ ಎನ್ನುತ್ತಿದ್ದಾರೆ ಅಲ್ಲಿನ ಬಹುತೇಕ ಜನ. ಆದರೂ ಇದು ಚುನಾವಣೆ ಎಂಬ ಮಾತನ್ನು ಮರೆಯಬೇಕಿಲ್ಲ.
ಸುರೇಶ್ ಬಾಬು
ಜಿಲ್ಲೆಯಲ್ಲಿ 2008ರಲ್ಲಿ ಅಸ್ತಿತ್ವಕ್ಕೆ ಬಂದ ಕಂಪ್ಲಿ ಕ್ಷೇತ್ರದಿಂದ ಅಖಾಡಕ್ಕಿಳಿದ ಇಂಜಿನೀಯರಿಂಗ್ ಪದವೀಧರ, ಬಳ್ಳಾರಿಯ ರೈಲ್ವೆ ಬಾಬು ಅವರ ಪುತ್ರ ಟಿ.ಹೆಚ್.ಸುರೇಶ್ ಬಾಬು ಪ್ರಮುಖ ಸ್ಪರ್ಧೆಗಳಿಲ್ಲದೆ ಸುಲಭವಾಗಿ ಆಯ್ಕೆಯಾಗಿ ಅಂದು ರಾಜ್ಯದ ಅತಿ ಕಿರಿಯ ವಯಸ್ಸಿನ ಶಾಸಕರೆಂದೆನಿಕೊಂಡರು.
ನಂತರ 2013ರ ವೇಳೆಗೆ ರಾಜಕೀಯ ಬದಲಾವಣೆಗಳಿಂದ ಸಹೋದರ ಮಾವ ಸ್ಥಾಪಿಸಿದ ಬಿಎಸ್ಆರ್ ಪಕ್ಷದಿಂದ ಕಣಕ್ಕಿಳಿದು ಆಗಲೂ ಪ್ರತಿ ಪಕ್ಷಗಳಿಂದ ಪ್ರಬಲ ಪೈಪೋಟಿ ಇಲ್ಲದೆ ತಮ್ಮ ಬಹು ಬಲದಿಂದ ಆಯ್ಕೆಯಾದರು.
ಈಗ ಹ್ಯಾಟ್ರಿಕ್ ಗೆಲುವಿನ ಕನಸಿನಲ್ಲಿದ್ದು ಗೆಲುವಿಗಾಗಿ ಬೇಕಾದ ದ್ರವ್ಯರೂಪದಲ್ಲೂ ಸೇರಿದಂತೆ ಸಕಲ ಸಿದ್ದತೆಗಳನ್ನು ಮಾಡಿಕೊಂಡಿರುವುದಲ್ಲದೆ, ತಮ್ಮದೇ ರಾಜಕೀಯ ವ್ಯವಸ್ಥೆಯನ್ನು (ಪ್ರತಿ ಸ್ಪರ್ಧಿಗಳೇ ಬರದಂತೆ) ವ್ಯೂಹ ರಚಿಸಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಇವರಷ್ಟೆ ಆರ್ಥಿಕ ಬಲದ, ಮತ್ತು ಅನಿರೀಕ್ಷಿತ ಸ್ಪರ್ಧಾಳು ಬಂದಲ್ಲಿ ಮಾತ್ರ ಗೆಲುವಿಗೆ ಕೊಕ್ಕೆ ಬಿದ್ದೀತು ಎನ್ನುಲಾಗುತ್ತಿದೆ.
ಆನಂದ್ ಸಿಂಗ್
ವಿಜಯನಗರದ ಕ್ಷೇತ್ರದ ಶಾಸಕರಾಗಿದ್ದ ಆನಂದ್ ಸಿಂಗ್ ಸಹ ನಾಗೇಂದ್ರ, ಸುರೇಶ್ ಬಾಬು ಅವರಂತೆ 2008ರಲ್ಲಿ ರಾಜಕೀಯಕ್ಕೆ ಪಾದಾರ್ಪಣೆ ಮಾಡಿ ಮೊದಲ ಬಾರಿಗೆ ಶಾಸಕರಾದರು. ದಾನ ಧರ್ಮದಿಂದ ಮೊದಲ ಬಾರಿಗೆ ಗಣಿ ಧೂಳಿನಲ್ಲಿ ಕಾಂಗ್ರೆಸ್ ನ ಭಿನ್ನ ಮತದಿಂದ ಸುಲಭವಾಗಿ ಆಯ್ಕೆಯಾದರು, ಪಕ್ಷನಿಷ್ಠೆಯಿಂದ ಸಚಿವರೂ ಆದರು. ನಂತರ 2008ರಲ್ಲಿ ಒಲ್ಲೆ ಎನ್ನುತ್ತಲೇ ಬಿಜೆಪಿಯಿಂದ ಸ್ಪರ್ಧಿಸಿ ಆಯ್ಕೆಯಾದ ಜಿಲ್ಲೆಯ ಏಕೈಕ ಬಿಜೆಪಿ ಶಾಸಕರೆನಿಸಿಕೊಂಡರು.
ಈಗ ಇವರೂ ಸಹ ನಾಗೇಂದ್ರನಂತೆ ಕಾಂಗ್ರೆಸ್ ಗೆ ಜಂಪ್ ಆಗಿದ್ದು ಹ್ಯಾಟ್ರಿಕ್ ಗೆಲುವಿಗೆ ಕಾಯುತ್ತಿದ್ದಾರೆ.
ಆದರೆ ಕಳೆದ ಕೆಲವು ದಿನಗಳಿಂದ ಕ್ಷೇತ್ರದಲ್ಲಿ ಕಾಣಿಸದೇ ಗೆಲುವಿಗಾಗಿ ಯಾವ ವ್ಯೂಹ ರಚಿಸಲು ತೊಡಗಿದ್ದಾರೆ. ಎಂಬುದು ಕ್ಷೇತ್ರದ ಜನರ ಮಾತಾಗಿದೆ. ಇತ್ತ ಬಿಜೆಪಿಯಿಂದ ಗವಿಯಪ್ಪ ಸಡ್ಡು ಹೊಡೆದು ದಿನಾಲು ಪ್ರಚಾರ ಮಾಡುತ್ತಿರುವುದು, ಜೊತೆಗೆ ಕಾಂಗ್ರೆಸ್ ನಲ್ಲಿ ಇನ್ನಿತರರು ನಮಗೆ ಟಿಕೆಟ್ ಬೇಕೆನ್ನುತ್ತಿರುವುದು ಇವರ ಹ್ಯಾಟ್ರಿಕ್ ಬಯಕೆಗೆ ಅಡ್ಡಿಯಾಗುವುದೇ. ರಾಜಕೀಯದಾಟದ ಎಲ್ಲಾ ಮಜಲುಗಳನ್ನು ಅರಿತಿರುವ ಸಿಂಗ್ ವಿಜಯ ಲಕ್ಷ್ಮಿಯನ್ನು ಒಲಿಸಿಕೊಳ್ಳುವರೇ ಎಂಬುದನ್ನು ಕಾದು ನೋಡಬೇಕಿದೆ.

Leave a Comment