ಆಧಾರ್ ತಿದ್ದುಪಡಿಗಾಗಿ ತೆರಳಿದ್ದ ಬಾಲಕ ನೀರಿಗೆ ಬಿದ್ದು ಸಾವು

ಹುಳಿಯಾರು, ಜೂ. ೧೯- ಆಧಾರ್ ಕಾರ್ಡ್ ತಿದ್ದುಪಡಿಗಾಗಿ ತನ್ನ ತಾಯಿಯೊಂದಿಗೆ ತೆರಳಿದ್ದ ಬಾಲಕನೋರ್ವ ಆಕಸ್ಮಿಕವಾಗಿ ನೀರಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಹೋಬಳಿಯ ಯಳನಡುವಿನಲ್ಲಿಂದು ನಡೆದಿದೆ.

8ನೇ ತರಗತಿಯ ವಿದ್ಯಾರ್ಥಿ ಅಬ್ದುಲ್ ಖಲೀಲ್ (13) ಎಂಬಾತನೇ ನೀರಿಗೆ ಬಿದ್ದು ಸಾವನ್ನಪ್ಪಿರುವ ದುರ್ದೈವಿ ಬಾಲಕ.
ಇಂದು ಮುಂಜಾನೆ 5 ಗಂಟೆಗೆ ತನ್ನ ತಾಯಿಯೊಂದಿಗೆ ಸದರಿ ಬಾಲಕ ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಸಲು ಯಳನಡುವಿಗೆ ತೆರಳಿದ್ದನು. ಬೆಳಿಗ್ಗೆ 5 ಗಂಟೆಯಿಂದ ಆಧಾರ್ ಕೇಂದ್ರದ ಮುಂದೆ ಸರದಿಯ ಸಾಲಿನಲ್ಲಿ ನಿಂತಿದ್ದು, 6 ಗಂಟೆ ಸಮಯದಲ್ಲಿ ಬಹಿರ್ದೆಸೆಗಾಗಿ ಎದುರಿನಲ್ಲಿಯೇ ಇದ್ದ ಹೊಂಡಕ್ಕೆ ಹೋಗಿದ್ದಾನೆ. ನೀರು ಮುಟ್ಟಲು ಹೊಂಡಕ್ಕೆ ಇಳಿದ ಸಂದರ್ಭದಲ್ಲಿ ಆಯತಪ್ಪಿ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿದ್ದಾನೆ.

ಆಧಾರ್ ಕೇಂದ್ರದ ಮುಂದೆ ಸರದಿಯ ಸಾಲಿನಲ್ಲಿ ನಿಂತಿದ್ದ ತಾಯಿ ಶಾಹೇದಾಬೇಗಂ ಅವರು ಬಹಿರ್ದೆಸೆಗೆ ತೆರಳಿದ್ದ ಮಗ ಎಷ್ಟೊತ್ತಾದರೂ ವಾಪಸ್ ಬರದಿದ್ದರಿಂದ ಗಾಬರಿಗೊಂಡು ಹೊಂಡದ ಬಳಿ ಹೋಗಿ ನೋಡಿದಾಗ ಮಗ ನೀರಿಗೆ ಬಿದ್ದಿರುವುದು ಕಂಡು ಬಂದಿದೆ.

ಹೊಂಡದ ನೀರಿಗೆ ಬಿದ್ದಿದ್ದ ಮಗನನ್ನು ಸ್ಥಳೀಯ ಸಹಕಾರದಿಂದ ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆತಂದರಾದರೂ ಅಷ್ಟರಲಾಗಲೇ ಬಾಲಕ ಕೊನೆಯುಸಿರೆಳೆದಿದ್ದನು.

ಈ ಸಂಬಂಧ ಹುಳಿಯಾರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸುತ್ತಿದ್ದಾರೆ.
ಹೋಬಳಿ ಕೇಂದ್ರವಾಗಿರುವ ಹುಳಿಯಾರಿನಲ್ಲಿ ಆಧಾರ್ ಕೇಂದ್ರ ತೆರೆಯುವಂತೆ ಹಲವು ಬಾರಿ ಅಧಿಕಾರಿಗಳ ಗಮನ ಸೆಳೆದಿದ್ದರೂ ಸಹ ನಿರ್ಲಕ್ಷ್ಯ ವಹಿಸುತ್ತಲೇ ಬಂದಿದ್ದಾರೆ.

ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಬಾಲಕ ಬಲಿಯಾಗುವಂತಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Comment