ಆಧಾರ್ ಜೋಡಣೆ ಅವಧಿ ಮಾ. 31ಕ್ಕೆ ವಿಸ್ತರಣೆ

ನವದೆಹಲಿ, ಡಿ. ೭- ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಸೇವೆ ಮತ್ತು ಲಾಭ ಪಡೆಯಲು ಆಧಾರ್ ಕಾರ್ಡ್ ಜೋಡಣೆಯ ಅವಧಿಯನ್ನು ಮುಂದಿನ ವರ್ಷ ಮಾರ್ಚ್ 31ರವರೆಗೆ ವಿಸ್ತರಿಸಲಾಗಿದೆ ಎಂದು ಕೇಂದ್ರ ಸರ್ಕಾರ, ಸುಪ್ರೀಂ ಕೋರ್ಟ್‌ಗೆ ಇಂದು ತಿಳಿಸಿದೆ.

ಕೇಂದ್ರ ಸರ್ಕಾರ ಸೌಲಭ್ಯಗಳನ್ನು ಪಡೆಯಬೇಕಾದರೆ ಆಧಾರ್ ಕಾರ್ಡ್ ಜೋಡಣೆಯನ್ನು ಕಡ್ಡಾಯಗೊಳಿಸಿದೆ. ಈ ಕ್ರಮಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಬೇಕೆಂದು ಕೋರಿ ಸರ್ವೋಚ್ಛ ನ್ಯಾಯಾಲಯಕ್ಕೆ ಹಲವು ಅರ್ಜಿಗಳು ಸಲ್ಲಿಕೆಯಾಗಿವೆ. ಈ ಸಂಬಂಧ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ 5 ಮಂದಿ ನ್ಯಾಯಾಧೀಶರನ್ನು ಒಳಗೊಂಡ ಸಂವಿಧಾನ ಪೀಠವನ್ನು ಮುಂದಿನ ವಾರ ರಚಿಸಲು ಮುಂದಾಗಿದೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಆಧಾರ್ ಜೋಡಣೆಯನ್ನು ಮಾರ್ಚ್ 31ರ ಒಳಗೆ ವಿಸ್ತರಿಸುವುದಾಗಿ ತಿಳಿಸಿದೆ.

ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಾಧೀಶರಾದ ದೀಪಕ್ ಮಿಶ್ರಾ ನೇತೃತ್ವದ ನ್ಯಾಯ ಪೀಠದ ಮುಂದೆ ಹಾಜರಾದ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್, ಆಧಾರ್ ಲಿಂಕ್ ಜೋಡಣೆಯನ್ನು ಡಿಸೆಂಬರ್ 31ಕ್ಕೆ ಬದಲಾಗಿ ಮುಂದಿನ ವರ್ಷ ಮಾರ್ಚ್ 31 ವರೆಗೂ ವಿಸ್ತರಿಸಲಾಗಿದೆ ಎಂದು ತಿಳಿಸಿದರು. ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಶ್ಯಾಂ ದಿವಾನ್, ಸರ್ಕಾರದ ವಿವಿಧ ಯೋಜನೆಗಳ ಸೇವೆ ಪಡೆಯಲು ಆಧಾರ್ ಕಾರ್ಡ್ ಜೋಡಣೆ ಮಾಡಲು ವಿಫಲವಾದ ವ್ಯಕ್ತಿಗಳ ವಿರುದ್ಧ ಕೇಂದ್ರ ಸರ್ಕಾರ ಯಾವುದೇ ಕಠಿಣ ಕ್ರಮಗಳನ್ನು ಕೈಗೊಳ್ಳಬಾರದು ಎಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಅಟಾರ್ನಿ ಜನರಲ್ ಆಧಾರ್ ಕಾರ್ಡ್ ಜೋಡಣೆ ಮಾಡದ ವ್ಯಕ್ತಿಗಳ ವಿರುದ್ಧ ಯಾವುದೇ ಕಠಿಣ ಕ್ರಮಕೈಗೊಳ್ಳುವುದಿಲ್ಲ, ಜೊತೆಗೆ ಮಾರ್ಚ್ 31ರವರೆಗೆ ಸಾಮಾಜಿಕ ಕಲ್ಯಾಣ ಯೋಜನೆಗಳನ್ನು ತಡೆಹಿಡಿಯುವುದಿಲ್ಲವೆಂದು ಸ್ಪಷ್ಟಪಡಿಸಿದರು. ಇನ್ನು ಕೆಲವು ಅರ್ಜಿದಾರರು ಮೊಬೈಲ್ ಮತ್ತು ಬ್ಯಾಂಕ್ ಖಾತೆಗಳಿಗಾಗಿ ಆಧಾರ್ ಜೋಡಣೆ ಕಡ್ಡಾಯಗೊಳಿಸಿರುವುದು ಕಾನೂನು ಬಾಹಿರ ಮತ್ತು ಅಸಂವಿಧಾನಿಕ ಎಂದು ವಾದಿಸಿವೆ.

ಸಿಬಿಎಸ್ ಸಿ ಪರೀಕ್ಷೆಗಳನ್ನು ಬರೆಯಲು ವಿದ್ಯಾರ್ಥಿಗಳು ಕೂಡ ಆಧಾರ್ ಕಾರ್ಡ್ ಜೋಡಣೆ ಮಾಡುವುದು ಕಡ್ಡಾಯವೆಂದು ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶಕ್ಕೆ ಅರ್ಜಿದಾರರ ಪರವಾಗಿ ವಾದ ಮಂಡಿಸಿದ ವಕೀಲರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಬ್ಯಾಂಕ್ ಖಾತೆಗಳು ಮತ್ತು ಮೊಬೈಲ್ ನಂಬರ್‌ಗಳಿಗೆ ಆಧಾರ್ ನೊಂದಣಿ ಮಾಡುವ ಕೊನೆ ದಿನಾಂಕವನ್ನು ಗ್ರಾಹಕರಿಗೆ ತಿಳಿಸುವಂತೆಯೂ ಮೊಬೈಲ್ ಹಾಗೂ ಟೆಲಿಕಾಂ ಕಂಪನಿಗಳಿಗೆ ಸುಪ್ರೀಂ ಕೋರ್ಟ್ ಈಗಾಗಲೇ ತಿಳಿಸಿದೆ.

ಆಧಾರ್ ಕಾರ್ಡ್ ಜೋಡಣೆಗೆ ಸಂವಿಧಾನದ ಮಾನ್ಯತೆ ಇದೆಯೇ ಎಂದು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ಬಗ್ಗೆ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾದ ಎ.ಕೆ. ಸಿಕ್ರಿ ಮತ್ತು ಅಶೋಕ್ ಭೂಷಣ್ ಅವರನ್ನೊಳಗೊಂಡ ನ್ಯಾಯಪೀಠ ಇದುವರೆಗೂ ಯಾವುದೇ ಮಧ್ಯಂತರ ಆದೇಶವನ್ನು ನೀಡಿಲ್ಲ. ಈಗ ಮುಂದಿನ ವಾರ ಈ ಎಲ್ಲಾ ಅರ್ಜಿಗಳ ವಿಚಾರಣೆ ನಡೆಸಿ ಅಂತಿಮ ತೀರ್ಪು ನೀಡುವ ಸಂಬಂಧ ಸುಪ್ರೀಂ ಕೋರ್ಟ್ ಸಂವಿಧಾನ ಪೀಠ ರಚಿಸಲಿದೆ.

 

 

Leave a Comment