ಆಧಾರ್‌ಗೆ ಪ್ಯಾನ್ ಜೋಡಣೆ ಮಾರ್ಚ್ ಗಡುವು

 

ನವದೆಹಲಿ, ಫೆ. 15- ಆಧಾರ್ ಸಂಖ್ಯೆಗೆ ಪ್ಯಾನ್ ಸಂಖ್ಯೆಯನ್ನು ಮಾರ್ಚ್ 31ರೊಳಗಾಗಿ ಜೋಡಣೆ ಮಾಡದಿದ್ದರೆ ಆ ಬಳಿಕ 17 ಕೋಟಿಗೂ ಅಧಿಕ ಪ್ಯಾನ್ ಕಾರ್ಡ್‌ಗಳು ನಿಷ್ಕ್ರಿಯವಾಗಲಿದೆ ಎಂದು ಆದಾಯ ತೆರಿಗೆ ಇಲಾಖೆ ಇಂದಿಲ್ಲಿ ಪ್ರಕಟಿಸಿದೆ.
ಪ್ಯಾನ್‌ಕಾರ್ಡ್‌ನ್ನು ಆಧಾರ್ ಕಾರ್ಡ್‌ಗೆ ಜೋಡಣೆ ಮಾಡುವಂತೆ ಈಗಾಗಲೇ ಹಲವು ಬಾರಿ ಗಡುವು ವಿಸ್ತರಿಸಲಾಗಿದ್ದು, 2020ರ ಮಾ. 31ರವರೆಗೆ ಈಗಾಗಲೇ ವಿಸ್ತರಿಸಿರುವ ಗಡುವಿನೊಳಗೆ ಜೋಡಣೆ ಮಾಡದಿದ್ದರೆ ಪ್ಯಾನ್ ಕಾರ್ಡ್‌ಗಳು ನಿಷ್ಕ್ರಿಯಗೊಳ್ಳಲಿವೆ ಎಂದು ತಿಳಿಸಿವೆ.
ದೇಶದಲ್ಲಿ ಇದುವರೆಗೂ 30.75 ಕೋಟಿ ಪಾನ್‌ಕಾರ್ಡ್‌ಗಳು ಆಧಾರ್‌ಕಾರ್ಡ್‌ಗೆ ಜೋಡಣೆಯಾಗಿದ್ದು, ಇನ್ನು 17.58 ಕೋಟಿ ಪ್ಯಾನ್ ಸಂಖ್ಯೆ ನೋಂದಣಿಯಾಗಬೇಕಾಗಿದೆ. ಮಾ. 31ರ ನಂತರವೂ ನೋಂದಣಿಯಾಗದಿದ್ದರೆ ಆ ಎಲ್ಲ ಪ್ಯಾನ್‌ಕಾರ್ಡ್‌ಗಳು ನಿಷ್ಕ್ರಿಯಗೊಳ್ಳಲಿದೆ.
2018ರ ಸೆಪ್ಟೆಂಬರ್‌ನಲ್ಲಿ ಸುಪ್ರೀಂಕೋರ್ಟ್ ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ – ಆಧಾರ್‌ನ ಸಿಂಧುತ್ವವನ್ನು ಎತ್ತಿ ಹಿಡಿದಿತ್ತು. ಹೀಗಾಗಿ, ಪ್ಯಾನ್‌ಕಾರ್ಡ್‌ಗಳು ಆಧಾರ್‌ಕಾರ್ಡ್‌ಗೆ ಜೋಡಿಸುವುದು ಕಡ್ಡಾಯವಾಗಿದೆ.
2017ರ ಜುಲೈ 1 ರಿಂದೀಚೆಗೆ ಪ್ಯಾನ್‌‌ಕಾರ್ಡ್ ಸಂಖ್ಯೆ ಹೊಂದಿರುವ ಮಂದಿ ಆಧಾರ್‌ಕಾರ್ಡ್‌ಗೆ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಇಲ್ಲದಿದ್ದರೆ ಅಂತಹ ಪ್ಯಾನ್‌ಕಾರ್ಡ್‌ಗಳು ನಿಷ್ಕ್ರಿಯಗೊಳ್ಳಲಿವೆ ಎಂದು ಕೇಂದ್ರ ನೇರ ತೆರಿಗೆ ಮಂಡಳಿ ತಿಳಿಸಿದೆ.
ಪ್ಯಾನ್‌ಕಾರ್ಡ್‌ಗಳು ನಿಷ್ಕ್ರಿಯಗೊಂಡರೆ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಸೇರಿದಂತೆ ವಿವಿಧ ವಿಷಯಗಳಿಗೆ ಭವಿಷ್ಯದಲ್ಲಿ ತೊಂದರೆಯಾಗಲಿದೆ. ಹೀಗಾಗಿ ಮಾರ್ಚ್ 31ರೊಳಗಾಗಿ ಜೋಡಣೆ ಮಾಡಿಕೊಳ್ಳುವುದು ಕಡ್ಡಾಯವಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.

* ಪ್ಯಾನ್‌ಕಾರ್ಡ್‌ಗೆ ಆಧಾರ್ ಜೋಡಣೆ ಕಡ್ಡಾಯ.
* ಮಾ. 31ರವರೆಗೆ ಅಂತಿಮ ಗಡುವು.
* ಆ ಬಳಿಕ ಜೋಡಣೆಯಾಗದಿದ್ದರೆ 17 ಕೋಟಿಗೂ ಹೆಚ್ಚು ಪ್ಯಾನ್‌ಕಾರ್ಡ್ ನಿಷ್ಕ್ರಿಯ ಸಾಧ್ಯತೆ.
* ಇದುವರೆಗೂ 30.75 ಕೋಟಿ ಪ್ಯಾನ್ ಆಧಾರ್‌ಗೆ ಜೋಡಣೆ.
* ಇನ್ನೂ 17.58 ಕೋಟಿ ಜೋಡಣೆ ಬಾಕಿ.

Leave a Comment