ಆದಿವಾಸಿಗಳು ಮುಖ್ಯ ಭೂಮಿಕೆಯಲ್ಲಿ ಗುರುತಿಸಲ್ಪಡಬೇಕು

ಮೈಸೂರು. ಸೆ.12: ಆದಿವಾಸಿಗಳು ಪ್ರತಿಯೊಬ್ಬರೂ ಸಹ ಮುಖ್ಯ ಭೂಮಿಕೆಯಲ್ಲಿ ಗುರುತಿಸಲ್ಪಡಬೇಕು ಎಂದು ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದರು.
ಅವರಿಂದು ಮಹಾರಾಜ ಶತಮಾನೋತ್ಸವ ಭವನದಲ್ಲಿ ಆದಿವಾಸಿ ಸಮನ್ವಯ ಮಂಚ್, ರಾಜ್ಯ ಮೂಲ ಆದಿವಾಸಿ ಕರ್ನಾಟಕ ವೇದಿಕೆ ವತಿಯಿಂದ ‘ಆದಿವಾಸಿ ಜನರ ಹಕ್ಕು ಘೋಷಣಾ ದಿನಾಚರಣೆ’ಯನ್ನು ಉದ್ಘಾಟಿಸಿ ಮಾತನಾಡಿದರು. ಈ ಸಮಾಜದ ತುಳಿತಕ್ಕೆ ಒಳಪಟ್ಟ ಸಮಾಜ. ಹತ್ತಾರು ವರ್ಷಗಳಿಂದ ತುಳಿತಕ್ಕೆ ಹೋರಾಟ ಮಾಡುತ್ತಿದ್ದೀರಿ. ಪ್ರತಿಯೊಬ್ಬರೂ ಸಹ ಮುಖ್ಯ ಭೂಮಿಕೆಯಲ್ಲಿ ಗುರುತಿಸಲ್ಪಡಬೇಕು. ಈಗ ಪರಿಸ್ಥಿತಿ ಬದಲಾಗಿದೆ. ನೀವು ಸಹ ಮುಖ್ಯ ಭೂಮಿಕೆಗೆ ಬರುತ್ತೀರಿ. ಈಗಾಗಲೇ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಆದಿವಾಸಿಗಳು ಇರುವ ಜಾಗಕ್ಕೆ ವಿದ್ಯುತ್ ಸಂಪರ್ಕ ನೀಡಿ ಎಂದು. ನಿಮಗೆ ಸಿಗಬೇಕಾದ ಸರ್ಕಾರದ ಸವಲತ್ತುಗಳನ್ನು ನಿಮಗೆ ದೊರೆಯುವಂತೆ ಮಾಡುತ್ತೇವೆ. ನಿಮ್ಮ ಸಮಸ್ಯೆಗಳ ಕುರಿತು ನಿಮ್ಮದೇ ಒಂದು ತಂಡದೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿಸುತ್ತೇನೆ. ತುಳಿತಕ್ಕೆ ಒಳಗಾದ ಸಮಾಜಕ್ಕೆ ಬೆನ್ನೆಲುಬಾಗಿ ನಿಲ್ಲುವುದು ನಮ್ಮ ಕರ್ತವ್ಯ. ಅದನ್ನು ನಮ್ಮ ಸರ್ಕಾರ ಮಾಡಲಿದೆ ಎಂದರು.
ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದ ಗೌರವ ಕಾರ್ಯದರ್ಶಿ ಡಾ.ಹೆಚ್.ಸುದರ್ಶನ್ ಮತ್ತಿತರರು ಉಪಸ್ಥಿತರಿದ್ದರು.

Leave a Comment