ಆದಿವಾಸಿಗಳಿಗೆ ಪೌಷ್ಠಿಕ ಆಹಾರ : ಸಚಿವರ ಭರವಸೆ

(ನಮ್ಮ ಪ್ರತಿನಿಧಿಯಿಂದ)

ಬೆಂಗಳೂರು, ಮಾ. ೨೦- ರಾಜ್ಯದ 7 ಜಿಲ್ಲೆಗಳಲ್ಲಿರುವ ಆದಿವಾಸಿಗಳಿಗೆ ಜೂನ್‌ನಿಂದ ಡಿಸೆಂಬರ್ ವರೆಗೆ 6 ತಿಂಗಳ ಕಾಲ ಪೌಷ್ಠಿಕಾಂಶಯುಕ್ತ ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ವಿಧಾನ ಪರಿಷತ್ತಿನಲ್ಲಿಂದು ಹೇಳಿದರು.

ಸಮೀಕ್ಷೆಯಲ್ಲಿ ಕೈತಪ್ಪಿ ಹೋಗಿರುವ ಆದಿವಾಸಿಗಳನ್ನು ಗುರುತಿಸಿ ಅವರಿಗೂ ಆಹಾರ ಧಾನ್ಯ ವಿತರಿಸಲಾಗುವುದು. ಆಹಾರ ಧಾನ್ಯಗಳ ಜೊತೆ ಒಂದು ಕೆ.ಜಿ. ತುಪ್ಪವನ್ನು ನೀಡುತ್ತಿದ್ದು, ಅದರ ಬದಲು ಮತ್ತಷ್ಟು ಮೊಟ್ಟೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಆಡಳಿತ ಪಕ್ಷದ ಸದಸ್ಯೆ ಮೋಟಮ್ಮ ಮಲೆಯರು, ಮಲೆಕುಡಿಯರು, ಮೇದಾಸ್ ಸೇರಿದಂತೆ ವಿವಿಧ ಮೂಲ ಆದಿವಾಸಿಗಳನ್ನೇ ಕೈಬಿಡಲಾಗಿದೆ. ಕೈತಪ್ಪಿರುವ ಆದಿವಾಸಿಗಳಿಗೂ ಆಹಾರ ಧಾನ್ಯ ವಿತರಿಸಿ ಎಂದು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಅವರನ್ನು ಪ್ರಶ್ನಿಸಿದರು.

ಸದಸ್ಯರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಆದಿವಾಸಿಗಳಿಗೂ ಪೌಷ್ಠಿಕ ಆಹಾರ ಸಿಗಬೇಕು ಎನ್ನುವ ಉದ್ದೇಶದಿಂದ ಸರ್ಕಾರ ಆಹಾರ ಧಾನ್ಯ ವಿತರಿಸಲು ನಿರ್ಧರಿಸಿದೆ. ಸಮೀಕ್ಷೆಯಲ್ಲಿ ಕೈಬಿಟ್ಟಿರುವವರಿಗೂ ಆಹಾರಧಾನ್ಯ ನೀಡಲಾಗುವುದು ಎಂದರು.

ಮಧ್ಯ ಪ್ರವೇಶಿಸಿದ ವಿ.ಎಸ್. ಉಗ್ರಪ್ಪ, ರಾಜ್ಯದಲ್ಲಿ 606 ಹಾಡಿಗಳಿದ್ದು, ಅದರಲ್ಲಿ ಮೈಸೂರು ಜಿಲ್ಲೆಯಲ್ಲಿ 206, ಚಾಮರಾಜನಗರ ಜಿಲ್ಲೆಯಲ್ಲಿ 146, ಚಿಕ್ಕಮಗಳೂರು, ಕೊಡಗು, ಮಂಗಳೂರು ಸೇರಿದಂತೆ ಇನ್ನಿತರ ಕ‌ಡೆ ಹಾಡಿಗಳಿವೆ. ಆ ಹಾಡಿಗಳಿಗೆ ನೀಡುತ್ತಿರುವ ತುಪ್ಪ ಸಮರ್ಪಕವಾಗಿ ಸಿಗುತ್ತಿಲ್ಲ. ಹೀಗಾಗಿ ಅದರ ಬದಲು ಮೊಟ್ಟೆಗಳನ್ನು ನೀಡಿ ಎಂದು ಹೇಳಿದರು.

ಇದಕ್ಕೆ ಉತ್ತರಿಸಿದ ಸಚಿವ ಆಂಜನೇಯ, ಈಗಾಗಲೇ 45 ಮೊಟ್ಟೆಗಳನ್ನು ಆಹಾರ ಧಾನ್ಯದ ಜೊತೆ ನೀಡಲಾಗುತ್ತಿದೆ. ಆದಿವಾಸಿಗಳ ಸಲಹೆ ಪಡೆದು ತುಪ್ಪದ ಬದಲು ಮೊಟ್ಟೆ ಕೊಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ವೇಳೆ ಗಣೇಶ್ ಕಾರ್ಣಿಕ್ ಮಧ್ಯ ಪ್ರವೇಶಿಸಿ, ಆದಿವಾಸಿಗಳಿಗೆ ಏನೆಲ್ಲಾ ಕೊಡುತ್ತೀರಿ ಎಂದು ಸದಸ್ಯೆ ಮೋಟಮ್ಮ ಪ್ರಶ್ನೆ ಕೇಳಿಲ್ಲ. ನೀಡುತ್ತಿರುವ ಆಹಾರಧಾನ್ಯ ಸಮರ್ಪಕವಾಗಿದೆಯೇ ಇಲ್ಲವೇ ಎನ್ನುವುದಾಗಿದೆ. ಅದಕ್ಕಷ್ಟೇ ಉತ್ತರ ಕೊಡಿ ಎಂದು ಹೇಳಿದರು. ಸಚಿವ ಆಂಜನೇಯ, ಈಗಾಗಲೇ ಎಲ್ಲಾ ಆದಿವಾಸಿಗಳಿಗೂ ಆಹಾರ ನೀಡುತ್ತಿದ್ದು, ಕೈಬಿಟ್ಟಿರುವವರನ್ನು ಗುರುತಿಸಿ ಆಹಾರ ನೀ‌ಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಗಿರಿಜನರಿಗೂ ಆಹಾರ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡಿನಂಚಿನಲ್ಲಿ ವಾಸಿಸುತ್ತಿರುವ ಗಿರಿಜನ ಕುಟುಂಬದವರಿಗೆ ಮಳೆಗಾಲದಲ್ಲಿ ಪೌಷ್ಠಿಕ ಆಹಾರವನ್ನು ವಿತರಿಸಲಾಗುತ್ತಿದ್ದು, ಈ ಸೌಲಭ್ಯದಿಂದ ವಂಚಿತರಾಗಿರುವ ಇತರ ಗಿರಿಜನ ಕುಟುಂಬದವರನ್ನು ಸೇರ್ಪಡೆಗೊಳಿಸಲಾಗುವುದು ಎಂದು ಸಚಿವ ಹೆಚ್. ಆಂಜನೇಯ ಭರವಸೆ ನೀಡಿದರು.

ಪ್ರಶ್ನೋತ್ತರ ಅವಧಿಯಲ್ಲಿ ಆಡಳಿತ ಪಕ್ಷದ ಸದಸ್ಯೆ ಮೋಟಮ್ಮ ಅವರು ಪೌಷ್ಠಿಕ ಆಹಾರ ವಿತರಣೆಯಲ್ಲಿ ಗೌಡಲು ಮತ್ತು ಹಸನರು ಕುಟುಂಬದವರಿಗೆ ವಿತರಿಸಲಾಗುತ್ತಿದೆ. ಆದರೆ, ಮಲೆಕುಡಿಯ ಮತ್ತು ಮೇಧಾಸ್ ಪಂಗಡಗಳನ್ನು ಕೈಬಿಡಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಸದಸ್ಯರ ಆತಂಕಕ್ಕೆ ಸ್ಪಂದಿಸಿದ ಸಚಿವರು ಆದಷ್ಟು ಬೇಗ ವರದಿ ತರಿಸಿಕೊಂಡು ಆ ಪಂಗಡದವರಿಗೂ ಪೌಷ್ಠಿಕ ಆಹಾರವನ್ನು ವಿತರಿಸಲಾಗುವುದು ಎಂದು ಹೇಳಿದರು. ಅರಣ್ಯದಂಚಿನಲ್ಲಿ ವಾಸಿಸುತ್ತಿರುವ ಪರಿಶಿಷ್ಠ ಪಂಗಡದ ವಾಸಿಗಳಿಗೆ ಮಳೆಗಾಲದಲ್ಲಿ ಜೀವನೋಪಾಯಕ್ಕೆ ಕೂಲಿ ಸಿಗುವುದಿಲ್ಲ. ಹಾಗಾಗಿ, ಸರ್ಕಾರ ಜೂನ್‌ನಿಂದ ಡಿಸೆಂಬರ್‌ವರೆಗೆ ಪೌಷ್ಠಿಕ ಆಹಾರವನ್ನು ಸಾರ್ವಜನಿಕ ಪಡಿತರ ವಿತರಣೆಯಲ್ಲಿ ಒದಗಿಸುತ್ತಿದೆ ಎಂದು ತಿಳಿಸಿದರು.

ಪ್ರಸಕ್ತ ಗೌಡಲು ಮತ್ತು ಅಸಲರು ಕುಟುಂಬಗಳಿಗೆ ಪೌಷ್ಠಿಕ ಆಹಾರ ನೀಡಲು 7 ಕೋಟಿ 75 ಲಕ್ಷ ರೂ.ಗಳನ್ನು ನಿಗಧಿ ಮಾಡಲಾಗಿದೆ. ಈಗಾಗಲೇ 3 ಕೋಟಿ 50 ಲಕ್ಷ ಬಿಡುಗಡೆ ಮಾಡಲಾಗಿದೆ. 4673 ಕುಟುಂಬಗಳು ಈ ಸೌಲಭ್ಯವನ್ನು ಪಡೆಯುತ್ತಿದೆ ಎಂದು ಮಾಹಿತಿ ನೀಡಿದರು.

ಆಡಳಿತ ಪಕ್ಷದ ಸದಸ್ಯ ಉಗ್ರಪ್ಪ ಅವರು ರಾಜ್ಯದಲ್ಲಿ 606 ಹಾಡಿಗಳಿವೆ. ಎಲ್ಲರಿಗೂ ಪೌಷ್ಠಿಕ ಆಹಾರ ನೀಡಬೇಕು. ಈಗಾಗಲೇ ನೀಡಲಾಗುತ್ತಿರುವ ನಂದಿನಿ ತುಪ್ಪದ ಬದಲು ಮೊಟ್ಟೆ ನೀಡಬೇಕು ಎಂದು ಸಚಿವರನ್ನು ಒತ್ತಾಯಿಸಿದರು. ತುಪ್ಪದ ಬದಲು ಮೊಟ್ಟೆ ನೀಡುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.

 

Leave a Comment