ಆದಿಚುಂಚನಗಿರಿ ಮಠದಲ್ಲಿ ಅಮಿತ್ ಶಾಗೆ ಭವ್ಯ ಸ್ವಾಗತ ; ದಿ ಸ್ಟೋರಿ ಆಫ್ ಎ ಗುರು ಪುಸ್ತಕ ಅನಾವರಣ

ನಾಗಮಂಗಲ, ಆ. 13- ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆದಿ ಚುಂಚನಗಿರಿ ಮಠಕ್ಕೆ ಆಗಮಿಸುತ್ತಿದ್ದಂತೆ ಭವ್ಯಸ್ವಾಗತ ನೀಡಲಾಯಿತು.
ಇಂದು ಬೆಳಿಗ್ಗೆ ಮಠದ ಪ್ರವೇಶದ್ವಾರದಲ್ಲಿ ಅಮಿತ್ ಶಾ ಅವರನ್ನು ಸಂಪ್ರದಾಯದಂತೆ ಮಂಗಳವಾದ್ಯ, ವೀರಗಾಸೆ ನೃತ್ಯ, ಕಂಸಾಳೆ ಸೇರಿದಂತೆ ವಿವಿಧ ಕಲಾಪ್ರಕಾರಗಳ ಭವ್ಯವಾಗಿ ಸ್ವಾಗತಿಸಲಾಯಿತು. ಮಠದ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಆಡಳಿತಾಧಿಕಾರಿ ರಾಮಚಂದ ಉಪಸ್ಥಿತರಿದ್ದು, ಆದರದಿಂದ ಬರಮಾಡಿಕೊಂಡರು.
ಮಠದ ಆವರಣದಲ್ಲಿ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳತ್ತ ಕೈಬೀಸಿ ಅಮಿತ್ ಶಾ ಹರ್ಷ ವ್ಯಕ್ತಪಡಿಸಿದರು. ನಂತರ ಮಠದ ಅದಿ ದೇವತೆ ಕಾಲಭೈರೇಶ್ವರ ಸ್ವಾಮಿ ಹಾಗೂ ಇನ್ನಿತ್ತರ ದೇವತೆಗಳ ದರ್ಶನ ಪಡೆದರು. ಹಿರಿಯ ಶ್ರೀಗಳಾದ ದಿ. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಗದ್ದುಗೆಗೆ ಭೇಟಿ ನೀಡಿ ಪುಷ್ಪಾರ್ಚನೆ ಮಾಡಿ, 10 ನಿಮಿಷ ಮೌನವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಸಂಪ್ರದಾಯದಂತೆ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಶಾಲು ಹೊದಿಸಿ ಫಲತಾಂಬೂಲ ನೀಡಿ ಗೌರವಿಸಿದರು. ನಂತರ ಶ್ರೀಗಳ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡರು.
ಅಮಿತ್ ಶಾ ಅವರು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರೊಂದಿಗೆ ಕೆಲಕಾಲ ಚರ್ಚೆ ನಡೆಸಿದರು. ಅಮಿತ್ ಶಾ ಅವರು ಇದೇ ಪ್ರಥಮ ಬಾರಿಗೆ ಮಠಕ್ಕೆ ಭೇಟಿ ನೀಡುತ್ತಿರುವುದು ಹಲವರಿಗೆ ಕುತೂಹಲ ಕೆರಳಿಸಿದೆ. ಅಮಿತ್ ಶಾ ಅವರೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಕೇಂದ್ರ ಸಚಿವ ಅನಂತ್ ಕುಮಾರ್, ಶೋಭಾ ಕರಂದ್ಲಾಜೆ, ಆರ್.ಅಶೋಕ್ ಸಾಥ್ ನೀಡಿದರು.
ಮಠದ ಆವರಣದಲ್ಲಿ ಬೃಹತ್ ಬ್ಯಾನರ್‍ಗಳನ್ನು ಹಾಕಲಾಗಿತ್ತು. ಶ್ರೀ ಬಾಲಗಂಗಾಧರ ನಾಥ ಸ್ವಾಮೀಜಿ, ಶ್ರೀ ನಿರ್ಮಲಾನಂದನಾಥಸ್ವಾಮೀಜಿ ಭಾವಚಿತ್ರಗಳು ಎಲ್ಲೆಡೆ ರಾರಾಜಿಸುತ್ತಿದ್ದವು.
ಮಠದ ಆವರಣದಲ್ಲಿ ನಿರ್ಮಿಸಲಾದ ವೇದಿಕೆಯ ಸಮಾರಂಭದಲ್ಲಿ ದಿ ಸ್ಟೋರಿ ಆಫ್ ಎ ಗುರು ಪುಸ್ತಕವನ್ನು ಅಮಿತ್ ಶಾ ಬಿಡುಗಡೆಗೊಳಿಸಿದರು. ಈ ಪುಸ್ತಕದಲ್ಲಿ ಕಾಲಭೈರೇಶ್ವರ, ಡಾ. ಬಾಲಗಂಗಾಧರನಾಥ ಸ್ವಾಮೀಜಿ ಹಾಗೂ ಶ್ರೀ ಮಠ ಕುರಿತ ಚರಿತ್ರೆ ಒಳಗೊಂಡಿದೆ. ಈ ಪುಸ್ತಕವನ್ನು ವಿಶ್ರಾಂತ ಕುಲಪತಿ ಸುದಾಮಯಿ ರಘುನಾಥನ್ ಬರೆದಿದ್ದಾರೆ. ಶ್ರೀ ಮಠದಲ್ಲಿ ಅಮಿತ್ ಶಾ ಅವರು ಪ್ರಸಾದ ಸ್ವೀಕರಿಸಿ ನಂತರ ವೈದ್ಯಕೀಯ ಹಾಗೂ ತಾಂತ್ರಿಕ ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಭಾಷಣ ಮಾಡಿದರು.
@12bc = ಬಿಗಿ ಬಂದೂಬಸ್ತ್:
ಅಮಿತ್ ಶಾ ಮಠಕ್ಕೆ ಆಗಮಿಸುವ ಹಿನ್ನಲೆಯಲ್ಲಿ ಮಠದ ಸುತ್ತಮುತ್ತ ಪೊಲೀಸ್ ಬಿಗಿ ಬಂದೂಬಸ್ತ್ ಮಾಡಲಾಗಿತ್ತು. ಮಠಕ್ಕೆ ಬರುವ ಭಕ್ತಧಿಗಳಿಗೆ ಯಾವುದೇ ತೊಂದರೆ ಆಗದಂತೆ ಭದ್ರತಾ ವ್ಯವಸ್ಥೆ ಕಲ್ಪಿಸಿದ್ದು, ಹಾಸನ ಮತ್ತು ಮಂಡ್ಯ ಎಸಿ ತಂಡಗಳಿಂದ ತಪಾಸಣೆಗೆ ಒಳಪಡಿಸಿ ಪ್ರವೇಶಕ್ಕೆ ಅವಕಾಶ ನೀಡಲಾಗಿತ್ತು. ಭದ್ರತೆಗಾಗಿ 2 ಕೆಎಸ್‍ಆರ್‍ಪಿ, 5 ಡಿಎಆರ್ ಹಾಗೂ 1,200 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

Leave a Comment