ಆತ್ಮ ಯೋಜನೆಯಡಿ ಕೌಶಲ್ಯ ತರಬೇತಿ

ಮುಂಡಗೋಡ,ಅ.18- ಆತ್ಮಾ ಯೋಜನೆಯಡಿಯಲ್ಲಿ ಅಂತರಾಷ್ಟ್ರೀಯ ಆಹಾರ ದಿನದ ನಿಮಿತ್ತ ರೈತ ಮಹಿಳಾ ದಿನಾಚರಣೆ ಅಂಗವಾಗಿ ಆಹಾರ ಭದ್ರತಾ ಗುಂಪಿನ ಸದಸ್ಯರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮವು ಮುಂಡಗೋಡದ ನಿವೃತ್ತ ಸರ್ಕಾರಿ ನೌಕರರ ಭವನದಲ್ಲಿ ನಡೆಯಿತು.
ಈ ಕಾರ್ಯಕ್ರಮವನ್ನು ತಾ.ಪಂ.ಅಧ್ಯಕ್ಷೆ ದಾಕ್ಷಾಯಣಿ ಸುರಗೀಮಠ ಉದ್ಘಾಟಿಸಿ ಮಾತನಾಡುತ್ತಾ, ಆತ್ಮಾ ಯೋಜನೆಯಡಿಯಲ್ಲಿ ರಚಿಸಿದ ಮಹಿಳಾ ಗುಂಪಿನ ಸದಸ್ಯರು ಕೌಶಲ್ಯಾಭಿವೃದ್ಧಿ ಇಲಾಖೆ ಮುಖಾಂತರ ತಾಂತ್ರಿಕ ಮಾಹಿತಿ ತರಬೇತಿ ಪಡೆದು ಸ್ವಾವಲಂಬಿಯಾಗಿ ಇಲಾಖೆಯ ಯೋಜನೆಯ ಲಾಭಗಳನ್ನು ಪಡೆದುಕೊಳ್ಳಲು ಸಲಹೆ ನೀಡಿದರು. ಆತ್ಮಾ ಮಹಿಳಾ ಗುಂಪುಗಳಿಗೆ ಬೀಜಧನದ ಪ್ರೋತ್ಸಾಹಧನದ ಚೆಕ್‍ನ್ನು ವಿತರಿಸಲಾಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ವಿನುತಾ ಯು ಮುಕ್ತಾಮಠ ಸಮುದಾಯ ವಿಜ್ಞಾನ ಮಹಾ ವಿದ್ಯಾಲಯ ಕೃ.ವಿ.ವಿ. ಧಾರವಾಡದ ಡಾ.ವಿನುತಾ ಮುಕ್ತಾಮಠ ಆಗಮಿಸಿದ್ದರು.  ಪ್ರಭಾರ ಸಿಡಿಪಿಒ ದೀಪಾ ಬೆಂಗೇರ ಮಾತನಾಡಿ,  ಇಲಾಖೆಯ ಯೋಜನೆಗಳ ಬಗ್ಗೆ ಹಾಗೂ ರೈತ ಮಹಿಳೆಯರಿಗೆ ಸಿಗುವ ಲಾಭಗಳ ಬಗ್ಗೆ ಹಾಗೂ ರೈತ ಮಹಿಳೆಯರು ಸತ್ವ ಭರಿತ ಜೀವಸತ್ವದ ಸಮತೋಲನದ ಆಹಾರ ಪದಾರ್ಥಗಳನ್ನು ಉಪಯೋಗಿಸುವುದರ ಕುರಿತು ಸಮಗ್ರವಾಗಿ ಮಾಹಿತಿ ನೀಡಿದರು.
ಕೌಶಲ್ಯಾಭಿವೃದ್ಧಿ ಇಲಾಖೆಯ ಸಮುದಾಯ ಸಂಘಟನೆಯ ಅಧಿಕಾರಿ ಎಸ್.ವಾಯ್.ಗೊಣೇಪ್ಪನವರ್ ಮಾತನಾಡಿ,  ಇಲಾಖೆಯ ಯೋಜನೆಗಳು ಹಾಗೂ ರೈತ ಮಹಿಳೆಯರಿಗೆ ದೊರಕುವ ಹಲವಾರು ಕೈಕಸಬುಗಳು ಮತ್ತು ಉಪಕಸುಬುಗಳ ಬಗ್ಗೆ ಹಾಗೂ ಉತ್ಪಾದನೆ ಮಾಡಿದ ವಸ್ತುಗಳಿಗೆ ಮಾರುಕಟ್ಟೆ ಕುರಿತು ಸಮಗ್ರ ಮಾಹಿತಿ ನೀಡಿದರು.
ಆತ್ಮಾಯೋಜನೆಯ ತಾಲೂಕು ತಾಂತ್ರಿಕ ವ್ಯವಸ್ಥಾಪಕರಾದ ಕೋಪಣ್ಣ ಭಜಂತ್ರಿ ಸ್ವಾಗತಿಸಿ ನಂತರ ವಂದಿಸಿದರು.

Leave a Comment