ಆತ್ಮಹತ್ಯೆ ಯಾವುದಕ್ಕೂ ಪರಿಹಾರವಲ್ಲ : ಹೆಚ್.ಡಿ.ಕೆ

ಮಂಡ್ಯ, ಜೂ 18- ಮಂಡ್ಯ ಜಿಲ್ಲೆಯ ಸಂತೇಬಾಚಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಸುಮಾರು 213 ಕೋಟಿ ರೂ. ವೆಚ್ಚದಲ್ಲಿ 45 ರಿಂದ 50 ಕೆರೆಗಳಲ್ಲಿ ನೀರು ತುಂಬಿಸುವ ಯೋಜನೆಯನ್ನು ಸದ್ಯದಲ್ಲಿಯೇ ಪ್ರಾರಂಭಿಸಲಾಗುತ್ತಿದೆ. ಆದರೆ ಇದಕ್ಕಾಗಿ ಆತುರಪಟ್ಟು ರೈತ ಸುರೇಶ್ ಆತ್ಮಹತ್ಯೆ ಮಾಡಿಕೊಂಡಿರುವುದು ಸರಿಯಲ್ಲ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿಷಾದ ವ್ಯಕ್ತಪಡಿಸಿದ್ದಾರೆ.

ಇಲ್ಲಿನ ಆಘಲಯ ಗ್ರಾಮದ ಮೃತ ರೈತ ಸುರೇಶ್ ಅವರ ಕುಟಂಬಸ್ಥರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯ ಸೇರಿದಂತೆ ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆ ಕೈಕೊಟ್ಟ ಪರಿಣಾಮ ಬರ ತಲೆದೋರಿದೆ. ಅಧಿಕಾರಿಗಳನ್ನು ಜನರ ಹತ್ತಿರಕ್ಕೆ ತರುವ ಉದ್ದೇಶದಿಂದ ಗ್ರಾಮವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆ ಮೂಲಕ ಜನರ ಬಳಿಗೆ ಹೋಗಿ ಅವರಲ್ಲಿ ಧೈರ್ಯ ತುಂಬುವ ಕೆಲಸ ಮಾಡಲಾಗುತ್ತಿದೆ. ಗ್ರಾಮ ವಾಸ್ತವ್ಯದ ಅನುಕೂಲಗಳೇನು ಎಂಬುದು ತಮಗೆ ಚೆನ್ನಾಗಿ ಗೊತ್ತಿದೆ ಎಂದರು. ರಾಜ್ಯದಲ್ಲಿ ತಲೆದೋರಿರುವ ಬರ ಸಂಬಂಧ ಈಗಾಗಲೇ ಜಿಲ್ಲಾಧಿಕಾರಿಗಳ ಸಭೆ ಕರೆದು ಅವರಿಂದ ಮಾಹಿತಿ ಪಡೆದಿದ್ದೇನೆ. ಯಡಿಯೂರಪ್ಪ ಅವರು ಕೊಪ್ಪಳ, ಬಾಗಲಕೋಟೆ, ಯಾದಗಿರಿ ಜಿಲ್ಲೆಗಳಿಗೆ ಭೇಟಿಕೊಟ್ಟ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಕೆಲಸಗಳನ್ನು ಪ್ರಶಂಸಿದ್ದಾರೆ. ಸರ್ಕಾರವನ್ನು ಹೊರಗಡೆ ಟೀಕಿಸುತ್ತೇವೆ. ಇದಕ್ಕಾಗಿ ನೀವು ಬೇಸರಿಕೊಳ್ಳಬೇಡಿ ಎಂದು ಅಧಿಕಾರಿಗಳಿಗೆ ಹೇಳಿದ್ದಾರೆ. ಹೀಗಾಗಿ ನಾಟಕವಾಡುತ್ತಿರುವುದು ಬಿಜೆಪಿ ನಾಯಕರೇ ಹೊರತು ಸರ್ಕಾರವಲ್ಲ ಎಂದು ಕುಟುಕಿದರು.
ಯಾವುದೇ ಗಿಮಿಕ್‍ಗಾಗಿ ಗ್ರಾಮವಾಸ್ತವ್ಯ ಮಾಡುತ್ತಿಲ್ಲ. ಗ್ರಾಮವಾಸ್ತವ್ಯ ಮೂಲಕ ಹಳ್ಳಿಯ ಜನರಿಗೆ ಹತ್ತಿರವಾಗಲು ಪ್ರಯತ್ನಮಾಡುತ್ತಿದ್ದೇನೆ. ನಿಜವಾಗಲೂ ರಾಜಕೀಯವಾಗಿ ನಾಟಕವಾಡುತ್ತಿರುವುದು ಬಿಜೆಪಿ ನಾಯಕರು ಮಾತ್ರ. ಪ್ರತಿದಿನ ನಾನು ಎಷ್ಟು ಬಡಜನರನ್ನು ಭೇಟಿ ಮಾಡುತ್ತೇನೆ ಎಂದು ಬಿಜೆಪಿ ನಾಯಕರು ಬಂದು ನೋಡಬೇಕು ಎಂದು ಕುಮಾರಸ್ವಾಮಿ ಸವಾಲು ಹಾಕಿದರು.
ಸುರೇಶ್ ಅವರ ವಿಡಿಯೋ ನೋಡಿ ನನ್ನ ಮನಸಿಗೆ ಬಹಳ ದುಃಖವಾಗಿದೆ. ಬಡವರ ಸಮಸ್ಯೆಗಳನ್ನು ಬಗೆಹರಿಸಬೇಕೆಂಬ ಪ್ರಾಮಾಣಿಕ ಕಾಳಜಿ ಹೊಂದಿರುವ ವ್ಯಕ್ತಿ ತಾವಾಗಿದ್ದು, ನಾಡಿನ ರೈತರು ದಯವಿಟ್ಟು ಆತ್ಮಹತ್ಯೆ ಮಾಡಿಕೊಳ್ಳಬಾರದು. ಆತ್ಮಹತ್ಯೆ ಒಂದೇ ಅಂತಿಮವಲ್ಲ. ಬದುಕುವ ಛಲ ಮುಖ್ಯ. ರಾಜ್ಯದಲ್ಲಿ ಆದಷ್ಟು ಕೆರೆ ತುಂಬುವ ಕೆಲಸಗಳಿಗೆ ಚಾಲನೆ ನೀಡಲಾಗಿದೆ. ಜೀವನದಲ್ಲಿ ಬರುವ ಕಷ್ಟಗಳನ್ನು ಎದುರಿಸಲು ಆತ್ಮ ಸರ್ಕಾರದ ಯೋಜನೆಗಳನ್ನು ಬಳಸಿಕೊಂಡು ಕೃಷಿಗೆ ಮುಂದಾಗಬೇಕು ಎಂದು ಮನವಿ ಮಾಡಿದರು.
ದೇಶಕ್ಕೆ ಸ್ವಾತಂತ್ರ ಬಂದು 70 ವರ್ಷಗಳಾಗಿವೆ. ಇನ್ನೂ ರಾಜ್ಯದಲ್ಲಿ ಕೆಲವೆಡೆ ಸಮಸ್ಯೆಗಳಿವೆ. 70 ವರ್ಷ ರಾಜ್ಯವನ್ನು ಆಳಿದ್ದು ಯಾರು ? 70 ವರ್ಷ ನಾನಾಗಲೀ ನನ್ನ ಕುಟುಂಬವಾಗಲೀ ರಾಜ್ಯದಲ್ಲಿ ಆಳ್ವಿಕೆ ನಡೆಸಿಲ್ಲ. ದೇವೇಗೌಡರು 60 ವರ್ಷದ ರಾಜಕೀಯ ಜೀವನದಲ್ಲಿ 18 ತಿಂಗಳು ರಾಜ್ಯದ ಮುಖ್ಯಮಂತ್ರಿಯಾಗಿ 10 ತಿಂಗಳು ಪ್ರಧಾನಿಯಾಗಿದ್ದರು. ನೀರಾವರಿ ಸಚಿವರಾಗಿದ್ದಾಗ ಅವರನ್ನು ಕೆಲಸ ಮಾಡಲು ಬಿಡಲಿಲ್ಲ. ನಾನು ಹಿಂದೆ 20 ತಿಂಗಳು ಮುಖ್ಯಮಂತ್ರಿಯಾಗಿದ್ದೆ. ಈಗ ಒಂದು ವರ್ಷದಿಂದ ಮುಖ್ಯಮಂತ್ರಿಯಾಗಿದ್ದೇನೆ. 70 ವರ್ಷಗಳಿಂದ ಇರುವ ಸಮಸ್ಯೆಗಳಿಗೆ ನಾನಾಗಲೀ ದೇವೇಗೌಡರ ಕುಟುಂಬವಾಗಲೀ ಕಾರಣವಲ್ಲ. ನಮ್ಮ ಬಗ್ಗೆ ಅಸೂಯೆ ಬೇಡ. ನಾವಿರುವುದು ರೈತರಿಗಾಗಿ. ನಮ್ಮನ್ನು ದುಡಿಸಿಕೊಳ್ಳಿ. ನಾವಿರುವುದೇ ನಾಡಿಗಾಗಿ ರೈತರಿಗಾಗಿ ನಮ್ಮನ್ನು ಉಪಯೋಗಿಸಿಕೊಳ್ಳಿ ಎಂದು ಕುಮಾರಸ್ವಾಮಿ ತಿಳಿಸಿದರು.

Leave a Comment