ಆತ್ಮಹತ್ಯೆಯಂತಹ ಕೆಲಸಕ್ಕೆ ಕೈ ಹಾಕಬೇಡಿ-ರೈತರಿಗೆ ಬಿಸಿಪಿ ಮನವಿ

ಧಾರವಾಡ,ಏ 6- ರಾಜ್ಯದಲ್ಲಿ ಕೊರೊನಾ ಲಾಕ್ ಡೌನ್ ನಿಂದಾಗಿ ರೈತರ ಸ್ಥಿತಿ ಚಿಂತಾಜನಕವಾಗಿದ್ದು, ಯಾವುದೇ ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ರೈತರಿಗೆ ಮನವಿ ಮಾಡಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ರೈತನ ಸ್ಥಿತಿ ಚಿಂತಾಜನಕವಾಗಿದೆ. ರೈತರು ಆತ್ಮಹತ್ಯೆಯಂತಹ  ಕೆಲಸಕ್ಕೆ ಕೈ ಹಾಕಬೇಡಿ ಎಂದು ವಿನಂತಿ ಮಾಡುತ್ತೇನೆ. ಮನುಷ್ಯನಿಗೆ ಕಷ್ಟ ಬರದೆ ಮರಕ್ಕೆ ಬರುವುದಿಲ್ಲ. ಸದ್ಯ ದೇಶಾದ್ಯಂತ ಯಾರೂ ನಿರೀಕ್ಷೆ ಮಾಡದಂತಹ ಪರಿಸ್ಥಿತಿ ಬಂದೋದಗಿದೆ. ಆದ್ದರಿಂದ ರೈತರು ಧೈರ್ಯವಾಗಿರಬೇಕು. ನಿಮ್ಮ ಜೊತೆ ಸರಕಾರವಿದೆ. ರಾಜ್ಯದ ರೈತರಿಗೆ ಬಹುದೊಡ್ಡ ಹೊಡೆತ ಬಿದ್ದಿದ್ದು, ರೈತರಿಗೆ ತೊಂದರೆಯಾಗದಂತೆ ಮುಖ್ಯಮಂತ್ರಿಗಳು ಕ್ರಮ ಕೈಗೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡು ಸಾಧನೆ ಮಾಡುವಂತಹದು ಏನೋ ಇಲ್ಲ. ಮುಂದೆ ಒಳ್ಳೆಯ ದಿನಗಳು ಬರುತ್ತವೆ ಎಂದು ರೈತರಿಗೆ ಆತ್ಮವಿಶ್ವಾಸದ ಸಂದೇಶಗಳನ್ನು ತಿಳಿಸಿದರು.
ರಾಜ್ಯದಲ್ಲಿ ರೈತರು ಬೆಳೆದ ಹೂವಿಗೆ ಬೇಡಿಕೆ ಕಡಿಮೆಯಾಗಿದೆ. ಹೂವು ತೆಗೆದುಕೊಳ್ಳುವವರು ಮುಂದೆ ಬಂದರೆ, ಹೂವು ಮಾರುವವರು ಸಹ ಮುಂದೆ ಬರುತ್ತಾರೆ. ಆಗ ರೈತರು ಹೂವು ಕೊಯ್ಯುತ್ತಾರೆ ಎಂದರು.
ಸದ್ಯ ರೈತರ ಮತ್ತು ಜನರಿಗೆ ತೊಂದರೆಯಾಗದಂತೆ ಕೆಲ ಲಾಕ್ ಡೌನ್ ನಿಯಮಗಳಲ್ಲಿ ಸಡಿಲಿಕೆ ಮಾಡಲಾಗುತ್ತಿದೆ. ಹಿಗಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಹೋಗಬೇಕು. ಇದರಿಂದ ದುರುಪಯೋಗ ಆಗಬಾರದು ಎಂದರು.
ಎಲ್ಲ ರಾಜ್ಯದ ಗಡಿಗಳನ್ನು ಮುಕ್ತ ಮಾಡಿದ್ದೇವೆ. ತರಕಾರಿ ಸಾಗಾಟಕ್ಕೆ ಈಗ ನಿರ್ಬಂಧವಿಲ್ಲ. ಮುಂಗಾರು ಬಿತ್ತನೆ ಬೀಜಕ್ಕೆ ಯಾವುದೇ ಸಮಸ್ಯೆಯಿಲ್ಲ. ಅಗತ್ಯವಿರುವ ಗೊಬ್ಬರ, ಔಷಧಿ ಹಾಗೂ ಕೃಷಿ ಉಪಕರಣಗಳ ಅಂಗಡಿ ಆರಂಭ ಆಗಿವೆ. ರೈತ ಸಂಪರ್ಕ ಕೇಂದ್ರಗಳನ್ನು ತೆರೆದಿದ್ದೇವೆ. ರೈತರ ಟ್ರ್ಯಾಕ್ಟರ್ ರಿಪೇರಿಗೆ ಕೆಲ ಗ್ಯಾರೇಜ್ ಗಳ ಆರಂಭಕ್ಕೂ ಅನುವು ಮಾಡಿಕೊಡಲಾಗಿದೆ. ಇಂದಿನಿಂದ ಅವಶ್ಯಕತೆಗೆ ತಕ್ಕಂತೆ ಗ್ಯಾರೇಜ್ ಆರಂಭ ಮಾಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಕೊರೊನಾ ವಿರುದ್ಧ ಹೋರಾಡುತ್ತಿರುವ ಅಧಿಕಾರಿಗಳಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಚಿವ ಬಿ.ಸಿ.ಪಾಟೀಲ ಹೇಳಿದರು.

Leave a Comment