ಆಡಿಯೋ ವಿವಾದ ಸಿಎಂಗೆ ರಾಜಣ್ಣ ಟಾಂಗ್

(ನಮ್ಮ ಪ್ರತಿನಿಧಿಯಿಂದ)
ತುಮಕೂರು, ಫೆ. ೧೨- ರಾಜ್ಯ ರಾಜಕಾರಣದಲ್ಲಿ ಇದೀಗ ತಲ್ಲಣ ಮೂಡಿಸಿರುವ ಆಡಿಯೋ ವಿಚಾರದಲ್ಲಿ ಇಬ್ಬರು ಕಳ್ಳರೇ.. ಒಬ್ಬ ದೊಡ್ಡಕಳ್ಳ, ಮತ್ತೊಬ್ಬ ಸಣ್ಣಕಳ್ಳ ಎಂದು ಮಾಜಿ ಶಾಸಕ ಕೆ.ಎನ್. ರಾಜಣ್ಣ ಹೇಳುವ ಮೂಲಕ ಪರೋಕ್ಷವಾಗಿ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಟಾಂಗ್ ನೀಡಿದ್ದಾರೆ.
ಒಬ್ಬರದು ಆಡಿಯೋ, ಮತ್ತೊಬ್ಬರದು ವಿಡಿಯೋ ವಿಚಾರ. ಇಬ್ಬರೂ ಸಹ ಹಣದ ಆಮಿಷವೊಡ್ಡಿದ್ದಾರೆ. ಇದರಲ್ಲಿ ಯಾರು ಮೇಲು, ಯಾರು ಕೀಳು ಎಂಬುದೇನಿಲ್ಲ ಎಂದು ಹೇಳಿದರು.
ಸಿರಾ ತಾಲ್ಲೂಕು ಬುಕ್ಕಾಪಟ್ಟಣದಲ್ಲಿ ನಡೆದ ಬೆಳೆ ಸಾಲ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತನ್ನ ಸರ್ಕಾರಕ್ಕೆ ಬೆಂಬಲ ನೀಡು ಎಂದು ಇವರು ಆಮೀಷವೊಡ್ಡಿದ್ದಾರೆ. ಅದೇ ರೀತಿ ಸರ್ಕಾರ ಬೀಳಿಸುವಂತೆ ಅವರೂ ಶಾಸಕರುಗಳಿಗೆ ಆಮೀಷ ನೀಡಿದ್ದಾರೆ. ಇಂದು ರಾಜಕಾರಣಿಗಳೆಂದರೆ ಅಸಹ್ಯ ಹುಟ್ಟಿಸುವಂತಾಗಿದೆ. ಈ ರೀತಿಯ ವರ್ತನೆ ಇಬ್ಬರಿಗೂ ಶೋಭೆ ತರುವುದಿಲ್ಲ ಎಂದರು.
ಈ ಇಬ್ಬರೂ ಆರೋಪ-ಪ್ರತ್ಯಾರೋಪ ಮಾಡುವ ಬದಲು ತಮ್ಮ ಸಾಚಾತನದ ಬಗ್ಗೆ ಅರಿಯಲಿ. ವಿನಾ ಕಾರಣ ಈ ರೀತಿಯ ಆರೋಪ-ಪ್ರತ್ಯಾರೋಪಗಳಲ್ಲಿ ಕಾಲ ಹರಣ ಮಾಡುವುದನ್ನು ಮೊದಲು ಬಿಡಲಿ ಎಂದು ಹೇಳಿದರು.

Leave a Comment