ಆಡಿಯೋ ಪ್ರಕರu; ರಾಷ್ಟ್ರಪತಿ ದೂರು ನೀಡಲು ಕೈ ನಿರ್ಧಾರ

ಬೆಂಗಳೂರು, ಫೆ. ೧೨-ಅಪರೇಷನ್ ಕಮಲ ಹೆಸರಿನಲ್ಲಿ ಶಾಸಕರಿಗೆ ಆಮಿಷವೊಡ್ಡಲು ನಡೆಸಿದ ಸಂಭಾಷಣೆಯ ಆಡಿಯೋ ಬಹಿರಂಗವಾಗಿರುವುದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಕೈ ನಾಯಕರು ಮುಂದಾಗಿದ್ದಾರೆ. ಈ ಪ್ರಕರಣವನ್ನು ರಾಷ್ಟ್ರಪತಿ ಅಂಗಳಕ್ಕೆ ಕೊಂಡೊಯ್ಯಲು ಕಾಂಗ್ರೆಸ್ ನಿರ್ಧರಿಸಿದೆ.

ನಾಳೆ ಸಂಸತ್ ಅಧಿವೇಶನ ಅಂತ್ಯಗೊಳ್ಳುತ್ತಿದ್ದು, ಹೈಕಮಾಂಡ್ ಒಪ್ಪಿಗೆಗೆ ಕಾಯುತ್ತಿದ್ದು, ರಾಹುಲ್ ಗಾಂಧಿಯಿಂದ ಹಸಿರು ನಿಶಾನೆ ಸಿಕ್ಕ ಬಳಿಕ ಆಡಿಯೋ ಪ್ರಕರಣದಲ್ಲಿ ಮಧ್ಯಪ್ರವೇಶಿಸುವಂತೆ ರಾಮನಾಥ್ ಕೋವಿಂದ್  ಅವರಿಗೆ ಮನವಿ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮುಂಬರುವ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿಗೆ ರಾಷ್ಟ್ರಮಟ್ಟದಲ್ಲಿ ಮತ್ತಷ್ಟು  ಹಾನಿ ಮಾಡಲು ಕೈ ನಾಯಕರು ತೀರ್ಮಾನಿಸಿದ್ದಾರೆ. ಆಪರೇಷನ್ ಕಮಲದ ಹೆಸರಿನಲ್ಲಿ ಶಾಸಕರಿಗೆ ಗಾಳ ಹಾಕಲು ಮುಂದಾಗಿರುವ ವಿಚಾರ ಬಿಜೆಪಿಗೆ ಮುಜುಗರ ಉಂಟುಮಾಡಿದೆ.

ಈಗಾಗಲೇ ರಫೆಲ್ ಯುದ್ಧ ವಿಮಾನ ಖರೀದಿ ಪ್ರಕರಣವನ್ನು ಮುಂದಿಟ್ಟುಕೊಂಡು ರಾಹುಲ್ ಗಾಂಧಿ ನರೇಂದ್ರ ಮೋದಿ ವಿರುದ್ಧ ಸಮರ ಸಾರಿದ್ದಾರೆ. ಈಗ ಆಡಿಯೋ ಪ್ರಕರಣವನ್ನು ಪ್ರಮುಖ ಅಸ್ತ್ರವನ್ನಾಗಿ ಬಳಸಿಕೊಂಡು ಬಿಜೆಪಿಯ ನಾಗಲೋಟಕ್ಕೆ ಅಂಕುಶ ಹಾಕಲು ಕಾಂಗ್ರೆಸ್ ತಂತ್ರ ರೂಪಿಸಿದೆ ಎಂದು ಮೂಲಗಳು ತಿಳಿಸಿವೆ.

ಆಡಿಯೋ ಪ್ರಕರಣ ಲೋಕಸಭೆಯಲ್ಲಿ ನಿನ್ನೆ ಕಾವೇರಿದ ಚರ್ಚೆಗೆ ಕಾರಣವಾಗಿತ್ತು. ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಬಿಜೆಪಿಯನ್ನು ತೀವ್ರವಾಗಿ ತರಾಟೆಗೆತೆಗೆದುಕೊಂಡಿದ್ದರು.

Leave a Comment