ಆಟಕ್ಕೆ ಉಂಟು.. ಲೆಕ್ಕಕ್ಕಿಲ್ಲದಂತಾದ ಬಾಡಿಗೆ ನಿಯಂತ್ರಣ ಕಚೇರಿ

ಬೆಂಗಳೂರು, ಜ. ೧೧- ಎರಡು ದಶಕಗಳ ಮಾತು ರೆಂಟ್ ಕಂಟ್ರೋಲ್ ಅಂದರೆ ಸಾಕು ಮನೆ ಮಾಲೀಕರು, ವಾಣಿಜ್ಯ ಮಳಿಗೆಗಳ ಮಾಲೀಕರು ಬೆಚ್ಚಿ ಬೀಳುವಂತಹ ಪರಿಸ್ಥಿತಿ ಇತ್ತು. ಆದರೆ, ಈಗ ರೆಂಟ್ ಕಂಟ್ರೋಲ್ ಕಚೇರಿಗಳು ಸಂಪೂರ್ಣವಾಗಿ ನಿಷ್ಕ್ರಿಯವಾಗಿದ್ದು, ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ.
1961ರ ರೆಂಟ್ ಕಂಟ್ರೋಲ್ ಕಾಯ್ದೆ ಬಡವರ ಆರ್ಥಿಕ, ಬಲಹೀನರ, ಶೋಷಿತರ ಪರವಾಗಿತ್ತು. ನಗರ ಹಾಗೂ ಪಟ್ಟಣಗಳಲ್ಲಿ ಮನೆ ಬಾಡಿಗೆ ಪ‌ಡೆದು ವಾಸಿಸುತ್ತಿದ್ದವರಿಗೆ ಈ ಕಾಯ್ದೆ ವರದಾನವಾಗಿತ್ತು. ಮನೆ ಮಾಲೀಕರು ಕಿರುಕುಳ ಕೊಟ್ಟರೆ ಸಾಕು ರೆಂಟ್ ಕಂಟ್ರೋಲ್‌ಗೆ ದೂರು ನೀಡಿದ್ದರೆ ಸಾಕಾಗಿತ್ತು ಸಮಸ್ಯೆ ತಾನಾಗಿಯೇ ಇತ್ಯರ್ಥವಾಗುತ್ತಿತ್ತು.
1995ಕ್ಕಿಂತ ಮುಂಚೆ ಬಾಡಿಗೆ ನೀಡುವ ಯಾವುದೇ ರೀತಿಯ ಕಟ್ಟಡ ಹಾಗೂ ಜಮೀನುಗಳು ಸಂಪೂರ್ಣವಾಗಿ ರೆಂಟ್ ಕಂಟ್ರೋಲ್ ಕಾಯ್ದೆ ವ್ಯಾಪ್ತಿಗೆ ಬರುತ್ತಿದ್ದವು. ದಬ್ಬಾಳಿಕೆ ಮಾಡುವ ಮಾಲೀಕರಿಗೆ ಅಂಕುಶ ಹಾಕುವ ಸಲುವಾಗಿಯೇ 1961ರಲ್ಲಿ ರೆಂಟ್ ಕಂಟ್ರೋಲ್ ಕಾಯ್ದೆ ಜಾರಿಗೆ ಬಂದಿತ್ತು.
ಭಾರತದಲ್ಲಿ ಹಣ ಇದ್ದವರಿಗೆ ಮಣೆ ಹಾಕುವುದು ಎಂಬ ಮಾತಿನಂತೆ ಸರ್ಕಾರವು ಶ್ರೀಮಂತ ಮನೆ ಮಾಲೀಕರ ಕಪಿಮುಷ್ಠಿಗೆ ಸಿಲುಕಿತು. ರೆಂಟ್ ಕಂಟ್ರೋಲ್ ಕಾಯ್ದೆಯಲ್ಲೇ ತಿದ್ದುಪಡಿ ತರುವಲ್ಲಿ ಯಶಸ್ವಿಯೂ ಆಯಿತು. 1995ರಲ್ಲಿ ಬಾಡಿಗೆ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ಮಾಡಲಾಗುವುದು ಎಂದು ನಿರ್ಧರಿಸಲಾಯಿತು.
1995 ರಿಂದ 2000ವರೆಗೆ ಅಂದರೆ 5 ವರ್ಷಗಳ ಕಾಲ ರೆಂಟ್ ಕಂಟ್ರೋಲ್ ಕಚೇರಿಗಳು ಸಂಪೂರ್ಣ ಸ್ತಬ್ಧಗೊಂಡಿದ್ದವು. ಆರ್.ಎಲ್ ಜಾಲಪ್ಪ ಅವರು ಕಂದಾಯ ಸಚಿವರಾಗಿದ್ದಾಗ 1999-2000ನೇ ಇಸವಿಯಲ್ಲಿ ತಿದ್ದುಪಡಿಗೊಂಡ ರೆಂಟ್ ಕಂಟ್ರೋಲ್ ಕಾಯ್ದೆ ಜಾರಿಗೆ ಬಂತು. ಅಲ್ಲಿಂದೀಚೆಗೆ ರೆಂಟ್ ಕಂಟ್ರೋಲ್ ಆಕ್ಟ್ ಎಂಬುವುದು ಕೇವಲ ರೆಂಟ್ ಆಕ್ಟ್ ಎಂದಾಯಿತು. ಹೆಚ್ಚುಕಡಿಮೆ ಈ ಕಾಯ್ದೆ ಹಲ್ಲುಕಿತ್ತ ಹಾವಿನಂತಾಯಿತು. ರೆಂಟ್ ಕಂಟ್ರೋಲ್‌ನಲ್ಲಿದ್ದ ಅಧಿಕಾರವನ್ನು ಮೊಟಕುಗೊಳಿಸಿ ಇಲಾಖೆಯನ್ನು ಬೇಕಾಬಿಟ್ಟಿ ಇಡಲಾಗಿದೆ.
2600 ರೂ.ಗಿಂತ ಕಡಿಮೆ ಬಾಡಿಗೆ ಪಡೆಯುವವರು ಮತ್ತು 15×15 ಚದರ ಅಡಿ ಕೆಳಗೆ ಒಳಗಿನ ಭೂಮಿಯಲ್ಲಿನ ಕಟ್ಟಡಗಳು, ಜಮೀನುಗಳು ಮಾತ್ರ ಈ ಕಾಯ್ದೆ ವ್ಯಾಪ್ತಿಗೆ ಬರಲಿವೆ. ಹೆಚ್ಚಿನ ಆದಾಯ ಬರುವ ಸ್ವತ್ತುಗಳು ಇದರ ವ್ಯಾಪ್ತಿಗೆ ಬರುವುದಿಲ್ಲ ಎಂದು ಶ್ರೀಮಂತರನ್ನು ಕಾನೂನಾತ್ಮಕವಾಗಿ ತಪ್ಪಿಸಿಕೊಳ್ಳುವಂತೆ ಮಾಡಲಾಗಿದೆ.
ಬಾಡಿಗೆ ನಿಯಂತ್ರಣಾ ಕಚೇರಿಗಳು ಸಂಪೂರ್ಣ ಸತ್ತೇ ಹೋಗಿವೆ. ಈಗ ಬೆಂಗಳೂರಿನಲ್ಲಿ 2600 ರೂ.ಗೆ ಇಂದು ರೂಂ ಸಹ ಬಾಡಿಗೆಗೆ ಸಿಗಲ್ಲ. ರೆಂಟ್ ಕಂಟ್ರೋಲ್ ಕಚೇರಿ ಸಿಬ್ಬಂದಿಗಳಿಗೆ ಕೆಲಸವೇ ಇಲ್ಲ. ವಾರದಲ್ಲಿ ಒಂದು ದಿನ ಸಹಾಯಕ ಆಯುಕ್ತರು ಕೋರ್ಟ್ ನಡೆಸಿ ಪ್ರಕರಣಗಳನ್ನು ಇತ್ಯರ್ಥಗೊಳಿಸುತ್ತಿದ್ದರು. ಈಗ 2,600 ರೂ.ಗಳಿಗೆ ಮೇಲ್ಪಟ್ಟ ಬಾಡಿಗೆ ಹಾಗೂ 15×15 ಚದರ ಅಡಿಗಳಿಗಿಂತ ಹೆಚ್ಚಿನ ಜಾಗಗಳ ವಿವಾದಗಳನ್ನು ಸಿವಿಲ್ ಕೋರ್ಟ್‌ಗಳಲ್ಲಿ ಬಗೆಹರಿಸಿಕೊಳ್ಳಬೇಕಿದೆ.
ಈ ಮೊದಲು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಬಾಡಿಗೆ ನಿಯಂತ್ರಣ ಕಚೇರಿಗಳಿದ್ದವು. ಬೆಂಗಳೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಪೂರ್ವ-ಪಶ್ಚಿಮ, ಉತ್ತರ-ದಕ್ಷಿಣ ಎಂಬಂತೆ ನಾಲ್ಕು ಬಾಡಿಗೆ ನಿಯಂತ್ರಣ ವಲಯ ಕಚೇರಿಗಳಿದ್ದವು. ಆಯಾಯ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಬಾಡಿಗೆ ನಿಯಂತ್ರಣ ಕಚೇರಿಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದರು. ನಾಲ್ಕು ವಲಯ ಕಚೇರಿಗಳಲ್ಲಿ ಓರ್ವ ಸಹಾಯಕ ಆಯುಕ್ತರು, ಒಬ್ಬ ಮ್ಯಾನೇಜರ್, 5 ರೆವಿನ್ಯೂ ಇನ್ಸ್‌ಪೆಕ್ಟರ್‌ಗಳು, ಒಬ್ಬ ಪ್ರಥಮ ದರ್ಜೆ ಗುಮಾಸ್ತ, ಇಬ್ಬರು ದ್ವಿತೀಯ ದರ್ಜೆ ಗುಮಾಸ್ತರು, ಒಬ್ಬ ಬೆರಳಚ್ಚು ತಜ್ಞರು, 5 ಜನ ಡಿ ಗ್ರೂಪ್ ಸಿಬ್ಬಂದಿಗಳು, ಓರ್ವ ಚಾಲಕ ಕಾರ್ಯನಿರ್ವಹಿಸುತ್ತಿದ್ದಾರೆ.
ಈಗ ವಲಯವೊಂದರಲ್ಲಿ ಕೇವಲ ಮೂಱ್ನಾಲ್ಕು ಮಂದಿ ಸಿಬ್ಬಂದಿಗಳಿದ್ದು, ಕೆಲಸವಿಲ್ಲದೆ ನೋಣ ಒಡೆಯುತ್ತಿದ್ದಾರೆ. ಒಂದೊಂದು ವಲಯಕ್ಕೂ ಒಬ್ಬರು ಅಸಿಸ್ಟೆಂಟ್ ಕಮಿಷನರ್ ಇದ್ದರೆ, ಈಗ ಅದನ್ನೂ ಕಡಿತಗೊಳಿಸಿ ಎರಡು ವಲಯಕ್ಕೊಬ್ಬರಂತೆ ನಿಯೋಜಿಸಲಾಗಿದೆ.

Leave a Comment