ಆಗ ಉಪಾಧ್ಯಕ್ಷ, ಈಗ ಸಂಸದ

ಬಳ್ಳಾರಿ, ಜು.15: ಅಂದು ಉಪಾಧ್ಯಕ್ಷರಾಗಿ ಕುಳಿತ ವೇದಿಕೆಯಲ್ಲಿಯೇ ಇಂದು ಲೋಕಸಭಾ ಸದಸ್ಯರಾಗಿ ವೈ.ದೇವೇಂದ್ರಪ್ಪ ಅವರು ಇಲ್ಲಿನ ಜಿಲ್ಲಾ ಪಂಚಾಯ್ತಿಯ ಸಾಮಾನ್ಯ ಸಭೆ ಕಾರ್ಯ ಕಲಾಪಗಳಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಈ ಹಿಂದೆ 1995-96ರಲ್ಲಿ ಜೆಡಿಎಸ್ ಪಕ್ಷದಿಂದ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿ ಬಳ್ಳಾರಿ ಜಿಲ್ಲಾ ಪಂಚಾಯ್ತಿಯಲ್ಲಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ವೈ.ದೇವೇಂದ್ರಪ್ಪ ಅವರು ಎರಡು ದಶಕಗಳ ನಂತರ ಬಿಜೆಪಿಯಿಂದ ಬಳ್ಳಾರಿ ಲೋಕಸಭಾ ಸಂಸದರಾಗಿ ಆಯ್ಕೆಗೊಂಡು ಈ ಹಿಂದಿನಂತೆ ತಮ್ಮ ಜವಾರಿ ಶೈಲಿಯಲ್ಲಿಯೇ ಸದಸ್ಯರ ಕುಂದುಕೊರತೆ, ಕಾಮಗಾರಿಗಳ ಅನುಷ್ಠಾನದ ಬಗ್ಗೆ ಕೇಳಿ ಅವುಗಳನ್ನು ಕೈಗೊಳ್ಳುವ ಬಗ್ಗೆ ಸಮಾಧಾನ ಪಡಿಸಿದರು.

ಪತಿ-ಪತ್ನಿ
ಜಿಲ್ಲಾ ಪಂಚಾಯ್ತಿಯಲ್ಲಿ ಸಂಸದರಾಗಿ ಪಾಲ್ಗೊಂಡಿದ್ದು ಅಲ್ಲದೆ ಸಭೆಗೆ ತಮ್ಮ ಪತ್ನಿ ಕಾಂಗ್ರೆಸ್ ಪಕ್ಷದಿಂದ ಹರಪನಹಳ್ಳಿ ತಾಲೂಕಿನ ಅರಸಿಕೆರೆ ಕ್ಷೇತ್ರದಿಂದ ಆಯ್ಕೆಯಾಗಿರುವ ಸುಶೀಲಮ್ಮ ಜೊತೆ ಸಭೆಯಲ್ಲಿ ಇದ್ದುದು ಸಹ ಎಲ್ಲರ ಗಮನ ಸೆಳೆಯಿತು.

ಮನೆಯಲ್ಲೇ ಕೇಳಿ
ಶಿಕ್ಷಣ ಇಲಾಖೆಯಿಂದ ಅಭಿವೃದ್ಧಿ ಕೈಗೊಳ್ಳಲು ಹರಪನಹಳ್ಳಿ ತಾಲೂಕಿನ 7 ಜನ ಸದಸ್ಯರಿಗೆ ತಲಾ ಒಂದು ಲಕ್ಷ ರೂ ಮಾತ್ರ ಅನುದಾನ ನೀಡಿದೆ. ಇದರಿಂದ ಏನೂ ಆಗದೆಂದು ಸದಸ್ಯೆ ಜಯಶೀಲ ಅವರು ಕೇಳಿದಾಗ ಜಿ.ಪಂ.ನ ಸಿಇಓ ನಿತೀಶ್ ಅವರು ಸಂಸದರು ತಮ್ಮ ಅನುದಾನದಡಿ ಒಂದಿಷ್ಟು ನೀಡಿದರೆ ಅದನ್ನು ಸೇರಿಸಿ ಕಾಮಗಾರಿ ಕೈಗೊಳ್ಳಿ ಎಂದರು.

ಇದೇ ಸಂದರ್ಭದಲ್ಲಿ ದೇವೇಂದ್ರಪ್ಪ ಅವರ ಪತ್ನಿ ಸುಶೀಲಮ್ಮ ಸಹ ನಮಗೂ ಅನುದಾನ ಸಾಲದು ಹೆಚ್ಚಿಸಿ ಎಂದು ಕೇಳಿದಾಗ ಕೆಲಸದಸ್ಯರು ಇಲ್ಲೇನು ಕೇಳುತ್ತೀರಿ. ಮನೆಯಲ್ಲೇ ಶ್ಯಾಂಕ್ಷನ್ ಮಾಡಿಸಿಕೊಳ್ಳಿ ಎಂದು ಎಲ್ಲರೂ ನಗುವಂತೆ ಮಾಡಿದರು.

Leave a Comment