ಆಕಸ್ಮಿಕ ಮಳೆ : ನಗರದ ಜನತೆ ತತ್ತರ

ರಾಯಚೂರು.ಅ.10- ನಗರದಲ್ಲಿ ಏಕಾಏಕಿ ಮಳೆ ಸುರಿದ ಪರಿಣಾಮ ನಗರದ ಜನರು ತತ್ತರಿಸಿದ ಘಟನೆ ಇಂದು ನಡೆಯಿತು.
ಮಳೆ ಸುರಿದ ಹಿನ್ನಲೆ ವಾಹನ ಸವಾರರು ಹಾಗೂ ಪಾದಚಾರಿಗಳು ಮಳೆಯಿಂದ ತಪ್ಪಿಸಿಕೊಳ್ಳಲು ಪರದಾಡಿದ ಸನ್ನಿವೇಶ ಕಂಡುಬಂದಿತು. ಸತತವಾಗಿ 1 ಗಂಟೆಗೂ ಅಧಿಕ ಸುರಿದ ಮಳೆಯಿಂದ ನಗರದ ಟಿಪ್ಪುಸುಲ್ತಾನ ವೃತ್ತ, ಬಸವೇಶ್ವರ ವೃತ್ತ, ಚಂದ್ರಮೌಳೇಶ್ವರ ವೃತ್ತ, ಗಾಂಧಿ ವೃತ್ತ ಹಾಗೂ ಸ್ಟೇಷನ್ ರಸ್ತೆಯಲ್ಲಿ ವಾಹನ ಸವಾರರು ನಿಲ್ಲಿಸಿದ ವಾಹನಗಳನ್ನು ಹಿಂತೆಗೆದುಕೊಳ್ಳಲು ತುಂಬಾ ತೊಂದರೆಯನ್ನು ಅನುಭವಿಸಿದರು.
ರಸ್ತೆಗಳು ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿರುವ ಗುಂಡಿಗಳು ನೀರಿನಿಂದ ಜಲಾವೃತಗೊಂಡು ಕೆರೆಗಳಾಗಿ ಮಾರ್ಪಟ್ಟಿರುವ ದೃಶ್ಯಗಳು ಅಲ್ಲಲ್ಲಿ ಕಂಡುಬಂದವು. ರಸ್ತೆ ಬದಿಯಲ್ಲಿ ನೀರು ನಿಂತ ಪರಿಣಾಮ ಪಾದಚಾರಿಗಳ ಓಡಾಟಕ್ಕೆ ತೊಂದರೆಯಾಯಿತು. ರಸ್ತೆ ಬದಿಯಲ್ಲಿ ನಿಂತ ನೀರಲ್ಲಿ ಸಣ್ಣಪುಟ್ಟ ಮಕ್ಕಳು ಆಟವಾಡುವ ಮೂಲಕ ಸಂತೋಷ ಪಟ್ಟರು. ನಗರದ ಕೆಲವೊಂದು ಇಕ್ಕಾಟದ ಬಡಾವಣೆಯಲ್ಲಿ ಏಕಾಏಕಿ ಮಳೆ ಸುರಿದ ಹಿನ್ನಲೆ ಚರಂಡಿಗಳಿಗೆ ನೀರು ಸರಾಗವಾಗಿ ಹರಿದು ಹೋಗದ ಹಿನ್ನಲೆ ರಸ್ತೆ ಮೇಲೆ ನೀರು ನಿಂತವು. ಸಾರ್ವಜನಿಕರು ನೀರು ಸರಾಗವಾಗಿ ಹರಿದು ಹೋಗುವಂತೆ ನಗರಸಭೆಯು ಅಧಿಕಾರಿಗಳು ಮುಂಜಾಗ್ರತವಾಗಿ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
ವಿವಿಧ ತಾಲೂಕಿನಿಂದ ನಗರಕ್ಕೆ ಆಗಮಿಸಿದ ಜನರಿಗೆ ತಮ್ಮ ದಿನನಿತ್ಯದ ಕೆಲಸಗಳನ್ನು ಪೂರ್ಣಗೊಳಿಸುವುದಕ್ಕೆ ಮಳೆಯು ಆಡ್ಡಿಯಾಯಿತು. ಬಸ್ ನಿಲ್ದಾಣ, ಮಾರುಕಟ್ಟೆ ಹಾಗೂ ಆಸ್ಪತ್ರೆಗೆ ಹೋಗುವ ರೋಗಿಗಳಿಗೆ ಏಕಾಏಕಿ ಮಳೆ ಸುರಿದಯಿಂದ ಸರಿಯಾದ ಸಮಯಕ್ಕೆ ತಲುಪಲು ಹಿನ್ನಡೆಯಾಯಿತು.

Leave a Comment