ಆಂಜನೇಯಸ್ವಾಮಿ ಜೋಡಿರಥೋತ್ಸವ ರದ್ದು

ಮರಿಯಮ್ಮನಹಳ್ಳಿ, ಏ.02: ಮಾರಕ ರೋಗ ಕೊರೊನಾ ಭೀತಿಯ ಹಿನ್ನಲೆಯಲ್ಲಿ ದೇಶವೇ ಲಾಕ್‍ಡೌನ್ ಆದ್ದರಿಂದ ಮರಿಯಮ್ಮನಹಳ್ಳಿಯಲ್ಲಿ ಇಂದು ನಡೆಯಬೇಕಿದ್ದ ಐತಿಹಾಸಿಕ ಶ್ರೀ ಲಕ್ಷ್ಮಿನಾರಾಯಣ ಸ್ವಾಮಿ ಹಾಗೂ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಜೋಡಿ ರಥೋತ್ಸವವು ರದ್ದಾಗಿದ್ದು, ದೇವಸ್ಥಾನಗಳಿಗೆ ಪಟ್ಟಣದ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ.

ಕೊರೋನಾ ರೋಗದ ಸೋಂಕು ಪರಸ್ಪರ ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಕಾರಣ ಇಡೀ ದೇಶವೇ ಲಾಕ್‍ಡೌನ್ ಆಗಿದ್ದು, ಇಂದು ಶ್ರೀ ರಾಮನವಮಿ ಪ್ರಯುಕ್ತ ನಡೆಯಬೇಕಿದ್ದ ಜೋಡಿ ರಥೋತ್ಸವವನ್ನು ಸರ್ಕಾರ ಹಾಗೂ ಜಿಲ್ಲಾಧಿಕಾರಿಗಳ ಆದೇಶದಂತೆ ರದ್ದುಗೊಳಿಸಲಾಗಿದೆ. ಅಲ್ಲದೇ ಕಳೆದ ಎಂಟು ದಿನಗಳಿಂದ ನಡೆಯಬೇಕಿದ್ದ ದೇವತಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಇಂದು ಪಟ್ಟಣದ ದೇವಸ್ಥಾನ ಹಾಗೂ ರಥಗಳ ಸುತ್ತ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದು, ದೇವಸ್ಥಾನಕ್ಕೆ ಬರುವ ಎಲ್ಲಾ ಭಕ್ತರನ್ನು ವಾಪಾಸ್ ಕಳಿಸಿ ಮನೆಯಲ್ಲಿಯೇ ದೇವರನ್ನು ಆರಾಧಿಸುವಂತೆ ಸೂಚಿಸುತ್ತಿದ್ದಾರೆ.

ಇಂದು ಶ್ರೀ ರಾಮ ನವಮಿ ಪ್ರಯುಕ್ತ ಬೆಳಿಗ್ಗೆಯಿಂದಲೇ ಭಕ್ತಾಧಿಗಳು ದೇವಸ್ಥಾನಕ್ಕೆ ದೇವರ ದರ್ಶನಕ್ಕೆ ಬರುತ್ತಿದ್ದು, ಹೊರಗಿನಿಂದಲೇ ನಮಸ್ಕರಿಸಲು ಅವಕಾಶ ಕೊಡುವಂತೆ ಕೋರಿ ಮನವಿ ಮಾಡಿದರು. ಆದರೆ ಜನ ಜಂಗುಳಿ ಹೆಚ್ಚಾಗಿ ರೋಗದ ಹರುಡುವ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಭಕ್ತರ ಮನವಿಯನ್ನು ಪುರಸ್ಕರಿಸದೇ ಪೊಲೀಸರು ಅವರ ಮನವೊಲಿಸಿ ಮನೆಯಲ್ಲಿಯೇ ಆರಾಧಿಸುವಂತೆ ವಾಪಸ್ ಕಳಿಸಿದರು. ಅಲ್ಲದೇ ಯಾರೂ ದೇವಸ್ಥಾನಕ್ಕೆ ಹೋಗದಂತೆ ಮುಖ್ಯ ರಸ್ತೆಯಲ್ಲಿಯೇ ವಾಹನ ನಿಲ್ಲಿಸಿ ಮೊಕ್ಕಾಂ ಹೂಡಿದ್ದಾರೆ.

ಈ ಬಗ್ಗೆ ಪತ್ರಿಕೆಗೆ ಪ್ರತಿಕ್ರಿಯಿಸಿದ ಪಿಎಸ್‍ಐ ಎಂ. ಶಿವಕುಮಾರ್ ಕೊರೋನಾ ರೋಗದ ಹರಡದಂತೆ ಸರ್ಕಾರ ಹಾಗೂ ಮಾನ್ಯ ಜಿಲ್ಲಾಧಿಕರಿಗಳ ಆದೇಶದಂತೆ ನಾವುಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಗ್ರಾಮಸ್ಥರು ಕೂಡ ಮನೆಯಿಂದ ಹೊರಬರದೇ ಸುರಕ್ಷಿತವಾಗಿ ಮನೆಯಲ್ಲಿಯೇ ಇದ್ದು ಸಹಕರಿವಂತೆ ಮನವಿ ಮಾಡಿದರು.

Leave a Comment