ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭ ಕೈಬಿಡಲು ಆಗ್ರಹ

ಬೆಂಗಳೂರು, ಜ. ೧೧- ಬರುವ ಶೈಕ್ಷಣಿಕ ವರ್ಷದಿಂದ ಸಾವಿರ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸುವ ನಿರ್ಧಾರವನ್ನು ಸರ್ಕಾರ ಕೈಬಿಡದಿದ್ದರೆ ಗೋಕಾಕ್ ಮಾದರಿ ಹೋರಾಟ ಅನಿವಾರ್ಯ ಎಂದು ಕನ್ನಡ ಚಳುವಳಿ ಕೇಂದ್ರ ಸಮಿತಿ ಎಚ್ಚರಿಸಿದೆ.
ಕನ್ನಡ, ಕನ್ನಡಿಗ, ಕರ್ನಾಟಕ ಇನ್ನು ಸಂಪೂರ್ಣವಾಗಿ ರೂಪುಗೊಂಡಿಲ್ಲ. ಈ ಹಂತದಲ್ಲಿ ಕನ್ನಡ ಮಾಧ್ಯಮದ ಮೂಲಕ ಕನ್ನಡ ಭಾಷೆಗೆ ಆದ್ಯತೆ ನೀಡಬೇಕಾದ ಸರ್ಕಾರ ಸಾವಿರ ಇಂಗ್ಲೀಷ್ ಮಾಧ್ಯಮ ಶಾಲೆಗಳನ್ನು ಆರಂಭಿಸಲು ಮುಂದಾಗಿರುವುದು ಸ್ವತಃ ಸರ್ಕಾರವೇ ಕನ್ನಡಕ್ಕೆ ಮಾರಕವಾದಂತಿದೆ ಎಂದು ಸಮಿತಿ ಅಧ್ಯಕ್ಷ ಗುರುದೇವ್ ನಾರಾಯಣ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸ್ವಾತಂತ್ರ್ಯ ಪೂರ್ವ ಆಯಾ ರಾಜ್ಯಗಳ ಭಾಷೆಯಲ್ಲಿಯೇ ಶಿಕ್ಷಣ ನೀಡಲಾಗುತ್ತಿತ್ತು. ಮಹಾತ್ಮ ಗಾಂಧೀ, ಸ್ವಾಮಿ ವಿವೇಕಾನಂದರು ಸಹ ಮಾತೃ ಭಾಷೆಯಲ್ಲಿ ಶಿಕ್ಷಣ ನೀಡಬೇಕು ಎಂದು ಒತ್ತಾಯಿಸಿದರು.
ಆದರೆ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸಾವಿರ ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯಲು ಹೊರಟಿದೆ ಎಂದ ಅವರು, ಮುಂದುವರೆದ ರಾಷ್ಟ್ರಗಳಲ್ಲಿ ಆಯಾ ಮಾತೃ ಭಾಷೆಗಳಲ್ಲಿಯೇ ಉನ್ನತ ಮಟ್ಟದ ಶಿಕ್ಷಣ ನೀಡುತ್ತಿರುವುದು ನಮ್ಮ ರಾಜ್ಯ ಸರ್ಕಾರಕ್ಕೆ ಮಾದರಿಯಾಗಬೇಕು ಎಂದರು.
@12bc = ಬೇಡಿಕೆಗಳು
ಹಲವು ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಕನ್ನಡಿಗರಿಗೆ ಉದ್ಯೋಗಾವಕಾಶ ಮತ್ತು ಭದ್ರತೆಗಾಗಿ ಡಾ. ಸರೋಜಿನಿ ಮಹಿಷಿ ವರದಿ ಜಾರಿ ಮಾಡಬೇಕು. 1 ರಿಂದ 10ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಮಾತ್ರ ಸರ್ಕಾರಿ ಉದ್ಯೋಗ ನೀಡುವ ಕುರಿತು ನಿಯಮ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂಬಂಧ ಸರ್ಕಾರ ತನ್ನ ನಿರ್ಧಾರ ಬದಲಿಸದಿದ್ದರೆ ಕನ್ನಡ ಚಳುವಳಿ ಹೋರಾಟಗಾರರು, ಸಾಹಿತಿಗಳು, ಪತ್ರಕರ್ತರನ್ನೊಳಗೊಂಡಂತೆ ಗೋಕಾಕ್ ಮಾದರಿ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.

Leave a Comment