ಆಂಗ್ಲಭಾಷೆ ವ್ಯಾಮೋಹದಿಂದ ಕನ್ನಡ ಭಾಷೆ ಅಸ್ಥಿತ್ವಕ್ಕೆ ಧಕ್ಕೆ

ಕೆ.ಆರ್.ಪೇಟೆ. ಮೇ.6- ಕನ್ನಡಭಾಷೆಯ ಬಗ್ಗೆ ಕನ್ನಡಿಗರಿಗೆ ಇರುವ ಆತ್ಮಾಬಿಮಾನ ಹಾಗೂ ಈ ನಾಡಿನ ನಾಡು-ನುಡಿ ನೆಲ-ಜಲ ಮತ್ತು ಭಾಷೆಯ ಉಳಿವಿಗಾಗಿ ಹೋರಾಟ ಮಾಡಿ ಕನ್ನಡಿಗರಲ್ಲಿ ಕನ್ನಡ ಭಾಷೆಯ ಬಗ್ಗೆ ಅಭಿಮಾನ ಮೂಡುವಂತೆ ಮಾಡುಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಮಾಜಿ ಅಧ್ಯಕ್ಷ ಡಾ.ಶ್ರೀನಿವಾಸಶೆಟ್ಟಿ ಹೇಳಿದರು.
ಪಟ್ಟಣದ ಸರ್ಕಾರಿ ದಕ್ಷಿಣ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ 105ನೇ ಸಂಸ್ಮರಣೋತ್ಸವವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದರು
ಪ್ರಸ್ತುತ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳು ನಮ್ಮ ಮುಂದಿನ ತಲೆಮಾರಿಗೆ ತಿಳಿಸಿಕೊಟ್ಟು ಅರಿವಿನ ಜಾಗೃತಿಯನ್ನು ಮೂಡಿಸಲು ಕನ್ನಡ ಸಾಹಿತ್ಯ ಪರಿಷತ್ತು ದಾರಿ ದೀಪವಾಗಿದೆ. ಕನ್ನಡ ಭಾಷೆಯ ಹಿರಿಮೆಗರಿಮೆ, ಸಾಹಿತು, ನಾಡುನುಡಿಯ ಬಗ್ಗೆ ನಮ್ಮಲ್ಲಿನ ಅಭಿಮಾನವು ಕಡಿಮೆಯಾಗುತ್ತಿರುವುದು ಮತ್ತು ನಮ್ಮಲ್ಲಿ ಹೆಚ್ಚಾಗುತ್ತಿರುವ ಆಂಗ್ಲಭಾಷೆಯ ವ್ಯಾಮೋಹವು ಕನ್ನಡ ಭಾಷೆಯ ಅಸ್ಥಿತ್ವಕ್ಕೆ ಧಕ್ಕೆ ತಂದಿದೆ. ಗ್ರಾಮೀಣ ಪ್ರದೇಶದಲ್ಲಿ ಕನ್ನಡ ಮಾಧ್ಯಮ ಶಾಲೆಗಳು ಶಾಶ್ವತವಾಗಿ ಬಾಗಿಲು ಮುಚ್ಚಲು ದಿನಗಳನ್ನು ಎಣಿಸುತ್ತಿವೆ. ಆದ್ದರಿಂದ ಕನ್ನಡಿಗರಾದ ನಾವು ಕನ್ನಡ ಭಾಷೆಯ ಬಗ್ಗೆ ನಿರಭಿಮಾನಿಗಳಾಗದೇ ಕನ್ನಡ ಭಾಷೆಯ ಬಗ್ಗೆ ಅಭಿಮಾನವನ್ನು ಬೆಳೆಸಿಕೊಂಡು ನಮ್ಮ ಮಕ್ಕಳನ್ನು ಕನ್ನಡ ಮಾದ್ಯಮ ಶಾಲೆಗೆ ಕಡ್ಡಾಯವಾಗಿ ಸೇರಿಸುವ ಇಚ್ಛಾಶಕ್ತಿಯನ್ನು ಪ್ರದರ್ಶನ ಮಾಡುತ್ತಾ ಕನ್ನಡ ಮಾಧ್ಯಮ ಶಾಲೆಗಳು ಬಾಗಿಲು ಮುಚ್ಚದಂತೆ ಎಚ್ಚರ ವಹಿಸಬೇಕು ಎಂದು ಮನವಿ ಮಾಡಿದ ಡಾ.ಶ್ರೀನಿವಾಸಶೆಟ್ಟಿ, ಕನ್ನಡ ನಾಡಿನಲ್ಲಿ ಕನ್ನಡವು ಅಗ್ರಮಾನ್ಯ ಭಾಷೆಯಾಗಿ ಆಡಳಿತ ಭಾಷೆಯಾಗಬೇಕು. ಸರ್ಕಾರದ ಎಲ್ಲಾ ವ್ಯವಹಾರಗಳು ಕನ್ನಡದಲ್ಲಿಯೇ ನಡೆಯಬೇಕು ತಿಳಿಸಿದರು.
ಕನ್ನಡ ಅಧ್ಯಾಪಕ ಚಾ.ಶಿ.ಜಯಕುಮಾರ್ ಮಾತನಾಡಿ ಕನ್ನಡ ಭಾಷೆ ಹಾಗೂ ಕನ್ನಡ ಭಾಷಿಕರ ಮೇಲೆ ಅನ್ಯ ಭಾಷೆಗಳು ನಿರಂತರವಾಗಿ ದಬ್ಬಾಳಿಕೆ ನಡೆಸುತ್ತಿವೆ. ಗಡಿನಾಡ ಕನ್ನಡಿಗರ ಸ್ಥಿತಿಗತಿಗಳು ಚಿಂತಾಜನಕವಾಗಿವೆ. ಕನ್ನಡ ಭಾಷೆಯನ್ನು ಮಾತನಾಡುವವರನ್ನು ಕೀಳಾಗಿ ಕಾಣುತ್ತಾ, ಕನ್ನಡಿಗರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಸುತ್ತಿದ್ದಾರೆ. ಕರ್ನಾಟಕದ ಅವಿಭಾಜ್ಯ ಅಂಗವಾಗಿರುವ ಬೆಳಗಾವಿಯನ್ನು ಮರಾಠಿಗರು ಆಕ್ರಮಿಸಿಕೊಂಡು ತಮ್ಮ ವಶಕ್ಕೆ ತೆಗೆದುಕೊಳ್ಳಲು ಸಂಚನ್ನು ರೂಪಿಸಿದ್ದಾರೆ.. ಕನ್ನಡಕ್ಕೆ ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿಯ ಗೌರವವನ್ನು ತಂದುಕೊಟ್ಟ ಕವಿಗಳು ಹಾಗೂ ಸಾಹಿತಿಗಳ ಬಗ್ಗೆ ನಮ್ಮ ಮಕ್ಕಳಿಗೆ ತಿಳಿಸಿಕೊಡಬೇಕು. ಕನ್ನಡ ಭಾಷೆಯು ಸೂರ್ಯಚಂದ್ರರಿರುವವರೆಗೂ ಶಾಶ್ವತವಾಗಿ ಉಳಿಯುವಂತೆ ಕನ್ನಡದ ಬಗ್ಗೆ ಅಭಿಮಾನ ಮತ್ತು ಕಿಚ್ಚನ್ನು ಬೆಳೆಸಿಕೊಂಡು ಸ್ವಾಭಿಮಾನಿಗಳಾಗಿ ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವ ಕೆಲಸವನ್ನು ಮಾಡಬೇಕು ಎಂದು ಜಯಕುಮಾರ್ ಕರೆ ನೀಡಿದರು.
ಕಸಾಪ ತಾಲೂಕು ಘಟಕದ ಅಧ್ಯಕ್ಷ ಪೂರ್ಣಚಂದ್ರತೇಜಸ್ವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಇತ್ತೀಚೆಗೆ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 125ಕ್ಕೆ 125 ಅಂಕಗಳನ್ನು ಪಡೆದು ಸಾಧನೆ ಮಾಡಿರುವ ಐವತ್ತಕ್ಕೂ ಹೆಚ್ಚು ಮಕ್ಕಳನ್ನು ಸನ್ಮಾನಿಸಿ ಗೌರವಿಸುವ ಕೆಲಸವನ್ನು ಮಾಡಲಾಗುವುದು. ವಿದ್ಯಾರ್ಥಿಗಳು ಕನ್ನಡ ಪುಸ್ತಕಗಳು ಹಾಗೂ ಕಾದಂಬರಿಗಳನ್ನು ಓದುವ ಹವ್ಯಾಸವನ್ನು ಜೀವನದಲ್ಲಿ ಅಳವಡಿಸಕೊಂಡು ತಮ್ಮ ವ್ಯಕ್ತಿತ್ವವನ್ನು ವಿಕಾಸಗೊಳಿಸಿಕೊಂಡು ಬದಲಾವಣೆಯ ದಿಕ್ಕಿನತ್ತ ಹೆಜ್ಜೆ ಹಾಕಬೇಕು, ಎಂದು ಕರೆ ನೀಡಿದರು.
ತಾಲೂಕು ಶಿಕ್ಷಣ ಇಲಾಖಾ ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಯೋಗೇಶ್, ನಿರ್ದೇಶಕರಾದ ಸಿಂದಘಟ್ಟ ನಾಗೇಶ್, ಶೀಳನೆರೆ ಶಿವಕುಮಾರ್, ಕಸಾಪ ಕೋಶಾಧ್ಯಕ್ಷ ನಾಡಭೋಗನಹಳ್ಳಿ ಚಂದ್ರಪ್ಪ, ಗೌರವಾಧ್ಯಕ್ಷ ಕೃಷ್ಣಾನಾಯಕ, ಕಸಾಪ ನಗರ ಘಟಕದ ಅಧ್ಯಕ್ಷ ಪಿಕೆಜಿ ಮಹೇಶ್, ಕಸಬಾ ಹೋಬಳಿ ಘಟಕದ ಅಧ್ಯಕ್ಷ ವಸಂತಕುಮಾರ್, ಕಸಾಪ ತಾಲೂಕು ಘಟಕದ ಮಾಜಿಅಧ್ಯಕ್ಷ ಡಾ.ಕೆ.ಆರ್.ನೀಲಕಂಠ, ಪ್ರಧಾನ ಕಾರ್ಯದರ್ಶಿ ಕೆ.ಪಿ.ಬೋರೇಗೌಡ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Leave a Comment