ಅ. 2 ರಿಂದ ಪ್ಲಾಸ್ಟಿಕ್ ಬಳಕೆ ಬೇಡ – ಪ್ರಧಾನಿ ಮೋದಿ ಕರೆ

ಮಥುರಾ (ಉತ್ತರ ಪ್ರದೇಶ), ಸೆ. ೧೧- ರಾಷ್ಟ್ರಪಿತ ಮಹಾತ್ಮ ಗಾಂಧಿಯವರ 150ನೇ ಜನ್ಮದಿನವಾದ ಅಕ್ಟೋಬರ್ 2 ರಿಂದ ದೇಶದ ಜನ ಒಂದು ಸಾರಿ ಬಳಸುವ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ನಿಲ್ಲಿಸುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಕರೆ ನೀಡಿದ್ದಾರೆ. ಮಥುರಾದಲ್ಲಿಂದು ಅವರು ಅನೇಕ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಯೋಜನೆಗಳನ್ನು ಆರಂಭಿಸಿ ಮಾತನಾಡುತ್ತಿದ್ದರು.

ಅ. 2 ರಿಂದ ನಮ್ಮ ಮನೆ, ಕಚೇರಿ ಮತ್ತು ಕೆಲಸ ಮಾಡುವ ಸ್ಥಳಗಳಿಂದ ಒಮ್ಮೆ ಬಳಸಿ ಬಿಸಾಡುವ (ಸಿಂಗಲ್ ಯೂಸ್) ಪ್ಲಾಸ್ಟಿಕ್ ವಸ್ತುಗಳ ಬಳಕೆ ನಿಲ್ಲಿಸಿ ಎಂದು ಮನವಿ ಮಾಡಿದ ಮೋದಿ, ಈ ಅಭಿಯಾನದಲ್ಲಿ ಕೈ ಜೋಡಿಸುವಂತೆ ಸ್ವಯಂ ಸೇವಾ ಸಂಸ್ಥೆಗಳು, ನಾಗರಿಕ ಸಮಾಜ, ವ್ಯಕ್ತಿಗಳು, ಮತ್ತಿತರರನ್ನು ಕೋರಿದರು.

ಇದಕ್ಕೆ ಮುನ್ನ ಪ್ರಧಾನಿಯವರು 2019ರ ಸ್ವಚ್ಛತೆಯೇ ಸೇವೆ ಕಾರ್ಯಕ್ರಮ, ರಾಷ್ಟ್ರೀಯ ಪ್ರಾಣಿ ರೋಗ ನಿಯಂತ್ರಣಾ ಕಾರ್ಯಕ್ರಮ ಮತ್ತು ರಾಷ್ಟ್ರೀಯ ಕೃತಕ ಗರ್ಭಧಾರಣೆ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.

ಅವರು ಉತ್ತರ ಪ್ರದೇಶ ಸರ್ಕಾರದ ಜಾನುವಾರು, ಪ್ರವಾಸ ಮತ್ತು ರಸ್ತೆ ನಿರ್ಮಾಣಗಳಿಗೆ ಸಂಬಂಧಿಸಿದ 16 ಕಾರ್ಯಕ್ರಮಗಳನ್ನೂ ಆರಂಭಿಸಿದರು. ಪರಿಸರ ರಕ್ಷಣೆಗೆ ಒತ್ತುನೀಡಿ ಮಾತನಾಡಿದ ಪ್ರಧಾನಿ, ಭಾರತ ಒಂದು ಮಾದರಿಯಾಗಬೇಕಿದೆ. ಭಾರತ ಯಾವಾಗಲೂ ಶ್ರೀಕೃಷ್ಣನಲ್ಲಿ ಸ್ಫೂರ್ತಿಯನ್ನು ಕಂಡುಕೊಂಡಿದೆ. ಕೃಷ್ಣನ ಪರಿಸರ ಪ್ರೀತಿಯನ್ನುಳಿದು ಅವನನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದರು.

ಸ್ವಚ್ಛ ಭಾರತ ಇರಬಹುದು, ಜೈ ಜೀವನ್ ಅಭಿಯಾನ ಅಥವಾ ಕೃಷಿ ಮತ್ತು ಜಾನುವಾರು ಕ್ಷೇತ್ರಕ್ಕೆ ಪ್ರೋತ್ಸಾಹವಿರಬಹುದು. ಪ್ರಬಲ ನವಭಾರತವಾಗಿ ನಾವು ಬೆಳೆಯುತ್ತಿದ್ದೇವೆ. ಪ್ರಕೃತಿ ಮತ್ತು ಆರ್ಥಿಕ ಬೆಳವಣಿಗೆ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುತ್ತಿದ್ದೇವೆ ಎಂದವರು ಹೇಳಿದರು.

Leave a Comment