ಅ.೧೦-೧೯: ಮಂಗಳೂರು ದಸರಾ

ಮಂಗಳೂರು, ಸೆ.೧೧- ನಗರದ ಕುದ್ರೋಳಿ ಗೋಕರ್ಣನಾಥ ದೇವಾಲಯದಿಂದ ಪ್ರತಿವರ್ಷ ನಡೆಯುವ ವೈಭವದ ಮಂಗಳೂರು ದಸರಾ ಈ ಬಾರಿ ಅ.೧೦ರಿಂದ ೧೯ರವರೆಗೆ ನಡೆಯಲಿದೆ. ಉದ್ಘಾಟನೆಗೆ ಗೃಹ ಸಚಿವ ಡಾ. ಪರಮೇಶ್ವರ್ ಆಗಮಿಸುವ ನಿರೀಕ್ಷೆಯಿದೆ ಎಂದು ಕ್ಷೇತ್ರದ ನವೀಕರಣ ರೂವಾರಿ, ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅ. ೧೦ರಂದು ದೇವಾಲಯದಲ್ಲಿ ನವದುರ್ಗೆಯರು ಮತ್ತು ಶಾರದಾ ಮಾತೆ ಪ್ರತಿಷ್ಠಾಪನೆಯ ಮೂಲಕ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಲಾಗುವುದು. ಅ.೧೯ರಂದು ವೈಭವದ ದಸರಾ ಮೆರವಣಿಗೆ ನಡೆಯಲಿದೆ. ತನ್ನ ಪುತ್ರ ಸಂತೋಷ್ ಪೂಜಾರಿ ಪ್ರತಿವರ್ಷ ಮಂಗಳೂರು ದಸರಾಕ್ಕೆ ೧೦ ಲಕ್ಷ ರೂ. ನೀಡುತ್ತಾ ಬಂದಿದ್ದು, ಈ ವರ್ಷ ಕೂಡ ಅಷ್ಟೇ ಮೊತ್ತವನ್ನು ನೀಡಲಿದ್ದಾರೆ. ಕಿರಿಯ ಪುತ್ರ ದೀಪಕ್ ಪೂಜಾರಿ ಅವರೂ ೩ ಲಕ್ಷ ರೂ. ನೀಡುತ್ತಾರೆ. ದಾನಿಗಳಿಂದ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ ಎಂದು ಪೂಜಾರಿ ತಿಳಿಸಿದರು. ಕುದ್ರೋಳಿ ಕ್ಷೇತ್ರ ಯಾವುದೇ ಜಾತಿ, ಧರ್ಮಗಳಿಗೆ ಸೀಮಿತವಾದ ದೇವಾಲಯವಲ್ಲ. ಮುಸ್ಲಿಮರು, ಕ್ರಿಶ್ಚಿಯನ್ನರು, ಜೈನ ಧರ್ಮೀಯರೂ ಇಲ್ಲಿಗೆ ಬಂದು ಪ್ರಾರ್ಥನೆ ಸಲ್ಲಿಸುತ್ತಾರೆ. ದಸರಾ ಆಚರಣೆಗೆ ಸರಕಾರದಿಂದ ಒಂದು ಪೈಸೆ ಅನುದಾನ ಹಿಂದೆಯೂ ಕೇಳಿಲ್ಲ. ಮುಂದೆಯೂ ಕೇಳುವುದಿಲ್ಲ. ಸರಕಾರದ ನೆರವಿಲ್ಲದೆ ಎಲ್ಲ ಕಾರ್ಯಕ್ರಮಗಳು ಸುಸೂತ್ರವಾಗಿ ನಡೆಯಲಿವೆ ಎಂದರು. ದಸರಾ ಮೆರವಣಿಗೆಯಲ್ಲಿ ಕಳೆದ ವರ್ಷ ೬೮ ಟ್ಯಾಬ್ಲೊಗಳು ಭಾಗವಹಿಸಿದ್ದವು. ಈ ಬಾರಿ ಅದಕ್ಕಿಂತ ಹೆಚ್ಚಿನ ಟ್ಯಾಬ್ಲೊಗಳನ್ನು ನಿರೀಕ್ಷಿಸಲಾಗಿದೆ. ಹಲವು ಸಂಘಟನೆಯವರು ಸಂಪರ್ಕಿಸಿದ್ದು, ಹೊಸ ಟ್ಯಾಬ್ಲೊ ಮಾಡುವ ಉತ್ಸಾಹ ತೋರಿಸಿದ್ದಾರೆ. ದೇಶದ ಸಂಸ್ಕೃತಿಯನ್ನು ಬಿಂಬಿಸುವ ಟ್ಯಾಬ್ಲೊಗಳಿಗೆ ಆದ್ಯತೆ ನೀಡಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಹರಿಕೃಷ್ಣ ಬಂಟ್ವಾಳ್, ದೇವಾಲಯದ ಪ್ರಮುಖರಾದ ಊರ್ಮಿಳಾ ರಮೇಶ್ ಕುಮಾರ್, ಎಚ್.ಎಸ್. ಸಾಯಿರಾಮ್, ದೇವೇಂದ್ರ ಪೂಜಾರಿ, ಪದ್ಮರಾಜ್, ಡಿ.ಡಿ. ಕಟ್ಟೆಮಾರ್, ಶೇಖರ ಪೂಜಾರಿ, ಚಿತ್ತರಂಜನ್ ಮತ್ತಿತರರು ಉಪಸ್ಥಿತರಿದ್ದರು.

Leave a Comment