ಅ.ರಾ. ಚಲನಚಿತ್ರೋತ್ಸವ 225 ಚಿತ್ರಗಳ ಪ್ರದರ್ಶನ

ಬೆಂಗಳೂರು, ಫೆ. 22- 12ನೇ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ ಫೆ. 26 ರಿಂದ ಮಾ. 4ರ ತನಕ ನಡೆಯಲಿದ್ದು, 60 ದೇಶಗಳ 225 ಚಿತ್ರಗಳು ವಿವಿಧ ವಿಭಾಗಗಳಲ್ಲಿ ಪ್ರದರ್ಶನ ಕಾಣಲಿವೆ.

ಫೆ. 26 ರಂದು ಸಂಜೆ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಚಿತ್ರೋತ್ಸವಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿದ್ಯುಕ್ತ ಚಾಲನೆ ನೀಡಲಿದ್ದು, ನಟ ಯಶ್, ಹಿರಿಯ ನಟಿ ಜಯಪ್ರದ, ಬಾಲಿವುಡ್ ನಿರ್ಮಾಪಕ ಬೋನಿಕಪೂರ್, ಹಿನ್ನೆಲೆ ಗಾಯಕ ಸೋನುನಿಗಮ್ ಪಾಲ್ಗೊಳ್ಳಲಿದ್ದಾರೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಸಿದ್ದರಾಮಪ್ಪ ಹಾಗೂ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್ ಪತ್ರಿಕಾಗೋಷ್ಠಿಯಲ್ಲಿಂದು ತಿಳಿಸಿದರು.
ಚಿತ್ರೋತ್ಸವದ ಉದ್ಘಾಟನಾ ಚಿತ್ರವಾಗಿ ಇರಾನಿ ಚಲನಚಿತ್ರ ಶಾಹಿದ್ ಅಹಮಾ ಡೇಲು ನಿರ್ದೇಶನದ ಸಿನಿಮಾ ಖಾರು ಪ್ರದರ್ಶನಗೊಳ್ಳಲಿದ್ದು, ಈ ಬಾರಿಯ ಚಿತ್ರೋತ್ಸವದ ಧ್ಯೇಯವನ್ನಾಗಿ “ಭಾರತೀಯ ಸಾಂಪ್ರದಾಯಿಕ ಸಂಗೀತ ಪರಂಪರೆ ಮತ್ತು ಸಿನಿಮಾ” ಧ್ಯೇಯವಾಗಿದೆ ಎಂದು ಹೇಳಿದರು.
ಸುನಿಲ್ ಪುರಾಣಿಕ್ ಮಾತನಾಡಿ, ಮುಕ್ತಾಯ ಸಮಾರಂಭ ಮಾರ್ಚ್ 4 ರಂದು ವಿಧಾನಸೌಧದಲ್ಲಿ ನಡೆಯಲಿದ್ದು, ಏಷ್ಯಾ, ಭಾರತೀಯ ಹಾಗೂ ಕನ್ನಡದ ಅತ್ಯುತ್ತಮ ಚಲನಚಿತ್ರಗಳಿಗೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮುಕ್ತಾಯದ ಚಲನಚಿತ್ರವಾಗಿ ಇಸ್ರೇಲ್‌ನ ಇವೆಗಿನಿ ರುಮಾನ್ ನಿರ್ದೇಶನದ ಗೋಲ್ಡನ್ ಚಾಯ್ಸಸ್ ಚಿತ್ರ ಪ್ರದರ್ಶನ ಕಾಣಲಿದೆ ಎಂದು ಹೇಳಿದರು.
ಫೆ. 27 ರಿಂದ ವರಾಯಲ್ ಮಾಲ್‌ನ 11 ಪರದೆಗಳು, ನವರಂಗ್ ಚಿತ್ರಮಂದಿರ, ಡಾ. ರಾಜ್ ಭವನ, ಸುಚಿತ್ರ ಫಿಲಂ ಸೊಸೈಟಿಗಳಲ್ಲಿ ಚಿತ್ರ ಪ್ರದರ್ಶನ ಕಾಣಲಿದೆ ಎಂದರು.
ಏಷ್ಯನ್ ಸ್ಪರ್ಧಾ ವಿಭಾಗ, ಭಾರತೀಯ ಚಿತ್ರಗಳ ವಿಭಾಗ, ಕನ್ನಡ ಸ್ಪರ್ಧಾ ವಿಭಾಗ, ಕನ್ನಡ ಜನಪ್ರಿಯ ಮನರಂಜನಾ ಚಿತ್ರ ವಿಭಾಗ, ಸಮಕಾಲೀನ ವಿಶ್ವ ಸಿನಿಮಾ, ಪುನರಾವಲೋಕನ ವಿಭಾಗ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಚಿತ್ರ ಪ್ರದರ್ಶನ ಕಾಣಲಿದೆ ಎಂದು ಹೇಳಿದರು.
ಬಹುಭಾಷಾ ನಟ ಅನಂತನಾಗ್ ಅವರ ಚಿತ್ರಗಳು, ಹೆಚ್ಚು ಪ್ರಚಾರ ಇಲ್ಲದ ಭಾಷೆಗಳ ಚಿತ್ರಗಳು, ವಿವಿಧ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡ ಚಿತ್ರಗಳು ಪಾಲ್ಗೊಳ್ಳಲಿವೆ. ಚಿತ್ರೋತ್ಸವದ ಧ್ಯೇಯ ಘೋಷವಾಕ್ಯದ ಹಿನ್ನೆಲೆಯಲ್ಲಿ ಸಂಗೀತಗಾರರ ಆತ್ಮಕಥೆ ಆಧಾರಿತ ಚಿತ್ರಗಳು, ಸಂಗೀತ ಪ್ರಧಾನ ಚಿತ್ರಗಳು ಪ್ರದರ್ಶನ ಕಾಣಲಿವೆ ಎಂದರು.
ಇದರ ಜತೆಗೆ ಆತ್ಮಚರಿತ್ರೆ ಆಧರಿಸಿದ ಚಿತ್ರಗಳು ಪ್ರದರ್ಶನದ ಜತೆಗೆ ಎಸ್.ಎಲ್. ಭೈರಪ್ಪ, ಡಾ. ಚಂದ್ರಶೇಖರ ಕಂಬಾರ, ಡಾ. ರಾಜೀವ್ ತಾರನಾಥ್, ಲಲಿತಾರಾವ್ ಹಾಗೂ ಛಾಯಾಗ್ರಾಹಕ ವಿ.ಕೆ. ಮೂರ್ತಿಯವರ ಸಾಕ್ಷ್ಯಚಿತ್ರಗಳು ಪ್ರದರ್ಶನ ಕಾಣಲಿವೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಇಲಾಖೆಯ ಜಂಟಿ ನಿರ್ದೇಶಕ ಎಚ್.ವಿ. ದಿನೇಶ್, ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕ ವಿದ್ಯಾಶಂಕರ್, ಅಕಾಡೆಮಿಯ ರಿಜಿಸ್ಟ್ರಾರ್ ಹಿಮಂತರಾಜು ಉಪಸ್ಥಿತರಿದ್ದರು.

* ಫೆ. 26 ರಿಂದ ಮಾ. 4ರ ವರೆಗೆ ಚಿತ್ರೋತ್ಸವ
* 60 ದೇಶಗಳ 225 ಚಿತ್ರಗಳ ಪ್ರದರ್ಶನ
* ವರಾಯಲ್ ಮಾಲ್‌ನ 11 ಪರದೆಗಳು, ನವರಂಗ ಚಿತ್ರಮಂದಿರ, ಸುಚಿತ್ರಾ ಹಾಗೂ ಕಲಾವಿದರ ಸಂಘದಲ್ಲಿ ಚಿತ್ರಗಳ ಪ್ರದರ್ಶನ
* ಸಾರ್ವಜನಿಕರಿಗೆ 800 ರೂ. ನೋಂದಣಿ ಶುಲ್ಕ, ಚಿತ್ರರಂಗದ ಮಂದಿ ಹಾಗೂ ವಿದ್ಯಾರ್ಥಿಗಳಿಗೆ 400 ರೂ. ನಿಗದಿ

Leave a Comment