ಅಸ್ಪೃಶ್ಯತೆ ನಿವಾರಣೆಗೆ ಹೋರಾಡಿದ ಅಂಬೇಡ್ಕರ್

ತುಮಕೂರು, ಡಿ. ೭- ಸಾಮಾಜಿಕ ಸಮಾನತೆ, ಅಸ್ಪೃಶ್ಯತೆ ನಿವಾರಣೆಗಾಗಿ ಹೋರಾಡಿದ ಮಹಾನ್ ಭಾರತೀಯ ನಾಯಕರಲ್ಲೊಬ್ಬರು ಡಾ. ಬಿ.ಆರ್. ಅಂಬೇಡ್ಕರ್ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್. ರಾಮಕೃಷ್ಣ ಹೇಳಿದರು.

ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಏರ್ಪಡಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್‍ರವರ 62ನೇ ಮಹಾ ಪರಿನಿರ್ವಾಣ ದಿನ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಭಾರತದ ಸಂವಿಧಾನವನ್ನು ರಚಿಸಿದ ಇವರನ್ನು “ಸಂವಿಧಾನ ಶಿಲ್ಪಿ” ಎಂದು ಕರೆಯುತ್ತಾರೆ. ಇವರು ಹೆಚ್ಚಿನ ವಿದ್ಯಾಭ್ಯಾಸ ಬ್ರಿಟನ್‌ನಲ್ಲಿ ಮಾಡಿದ್ದರು. ಇವರು ಭಾರತ ದೇಶಕ್ಕೆ ಕೊಟ್ಟಂತಹ ಕೊಡುಗೆ ಅಪಾರವಾದದ್ದು ಎಂದರು.

ಅಂಬೇಡ್ಕರ್ ಹರಿಜನ ಗಿರಿಜನರಿಗೆ ಸಂವಿಧಾನದಲ್ಲಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಂತಹ ಮಹಾನ್ ನಾಯಕರಾಗಿದ್ದಾರೆ. ಆದ್ದರಿಂದ ಯುವಕರು ಮುಂದಿನ ದಿನಗಳಲ್ಲಿ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಮುಂದಿನ ಪೀಳಿಗಿಗೆ ಅವರ ಸಾಧನೆಗಳನ್ನು ತಿಳಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದರು.

ಜಿಲ್ಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್‍ರವರ ಕೈ ಬಲಪಡಿಸಬೇಕು. ಮುಂದಿನ ದಿನಗಳಲ್ಲಿ ದಲಿತರು ಮುಖ್ಯಮಂತ್ರಿಗಳಾಗುವವರೆಗೆ ಎಲ್ಲರೂ ಹೋರಾಟ ಮಾಡಬೇಕು. ಜಿಲ್ಲೆಯ 11 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಬೇಕು ಎಂದು ಕರೆ ನೀಡಿದರು.

ಮಾಜಿ ಟೂಡಾ ಅಧ್ಯಕ್ಷ ರೆಡ್ಡಿ ಚಿನ್ನಯಲ್ಲಪ್ಪ ಮಾತನಾಡಿ, ಡಾ. ಅಂಬೇಡ್ಕರ್‍ರವರು ಪ್ರಾಥಮಿಕ ಶಿಕ್ಷಣವನ್ನು ಹಲವಾರು ನೋವು ಮತ್ತು ಅವಮಾನಗಳಿಂದ ಮುಗಿಸಿ ಮಾಧ್ಯಮಿಕ ಶಿಕ್ಷಣವನ್ನು ಬಾಂಬೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಗಿಸಿದರು. ಅಂಬೇಡ್ಕರ್ ಚುಚ್ಚು ಮಾತುಗಳಿಂದ ಶೋಷಣೆಗೆ ಒಳಗಾದ ಮಹಾನ್ ನಾಯಕರು. ಅವಮಾನಗಳಿಂದ ಶೋಷಣೆಗೆ ಒಳಗಾದ ಇವರು ಭಾರತದ ಸಂವಿಧಾನ ಬರೆದು ಇಡೀ ರಾಷ್ಟ್ರಕ್ಕೆ ಮಾದರಿಯಾಗಿದ್ದಾರೆಂದರು.

ಹಿರಿಯ ಮುಖಂಡ ರೇವಣಸಿದ್ದಪ್ಪ ಮಾತನಾಡಿ, ಡಾ. ಅಂಬೇಡ್ಕರ್‍ರವರಂತಹ ಮಾನವತಾವಾದಿ ಈ ಭಾರತ ದೇಶದಲ್ಲಿ ಹುಟ್ಟದೇ ಹೋಗಿದ್ದರೆ ಇದನ್ನು ನೆನಪಿಸಿಕೊಳ್ಳಲು ಸಾಧ್ಯವೆ, ಅಂಬೇಡ್ಕರ್‍ರವರು ಈ ದೇಶದಲ್ಲಿ ಮೀಸಲಾತಿ ತರದೆ ಹೋಗಿದ್ದರೆ ದಲಿತರಿಗೆ ದೊಡ್ಡ ರೀತಿಯಲ್ಲಿ ಅನ್ಯಾಯ ಆಗುತ್ತಿತ್ತು. ದಲಿತರನ್ನು ಮನುಷ್ಯರಂತೆ ನೋಡಿಕೊಳ್ಳಿ ಎಂದು ಹೇಳಿದ್ದರು. ಜಾತಿ ಭೇದ ಇಲ್ಲದೆ ಎಲ್ಲರನ್ನೂ ಸಮಾನವಾಗಿ ಕಾಣಬೇಕು. ಜಾತಿ ಭೇದದ ವಿರುದ್ಧ ಹೋರಾಟ ಮಾಡಿ ಎಂದಿದ್ದರು. ಹರಿಜನರಂತೆ ನಾವೆಲ್ಲರೂ ಬಾಳೋಣ. ಏಕೆಂದರೆ ಎಲ್ಲರೂ ಹರಿಜನ-ಗಿರಿಜನ ಕಾಲೋನಿಗಳಿಗೆ ಹೋಗಿ ಅವರಲ್ಲಿ ಬೇರೆಯಿರಿ ಎಂದರು.

ಎಸ್ಟಿ ಘಟಕದ ಜಿಲ್ಲಾಧ್ಯಕ್ಷ ಟಿ.ಬಿ. ಮಲ್ಲೇಶ್ ಮಾತನಾಡಿ, ಡಾ. ಅಂಬೇಡ್ಕರ್‍ರವರಂತಹ 62ನೇ ಪರಿನಿರ್ವಾಣ ದಿನವನ್ನು ನಾವೆಲ್ಲರೂ ತುಂಬಾ ದುಃಖದಿಂದ ಆಚರಣೆ ಮಾಡುತ್ತಿದ್ದೇವೆ. ಇವರಂತಹ ಮಹಾನ್ ನಾಯಕರು ಹುಟ್ಟಬೇಕು ಎಂದರು.

ಕಾರ್ಯಕ್ರಮದಲ್ಲಿ ವಕ್ಫ್‌ಬೋರ್ಡ್ ಅಧ್ಯಕ್ಷ ಎಕ್ಬಾಲ್ ಅಹಮ್ಮದ್, ನರಸೀಯಪ್ಪ, ಲಿಂಗರಾಜು, ವಕೀಲರಾದ ಹರಿಕುಮಾರ್, ರೇವಣ್ಣಸಿದ್ದಪ್ಪ, ಪುಟ್ಟಬೋರಯ್ಯ, ಪುರುಷೋತ್ತಮರಾವ್, ಕೆಂಪಣ್ಣ, ಜಯಮೂರ್ತಿ, ಶಿವಾಜಿ, ವಿರೂಪಾಕ್ಷ, ರಾಜೇಶ್ ದೊಡ್ಮನೆ, ದಿವಾಕರ್ ನಾಯ್ಡು ಮತ್ತಿತರರು ಉಪಸ್ಥಿತರಿದ್ದರು.

Leave a Comment