ಅಸೌಖ್ಯದಿಂದ ವಿಚಾರಣಾಧೀನ ಕೈದಿ ಸಾವು

ಮಂಗಳೂರು, ಜು. ೧೭- ನಗರದ ಜಿಲ್ಲಾ ಕಾರಾಗೃಹದಲ್ಲಿದ್ದ ವಿಚಾರಣಾಧೀನ ಕೈದಿಯೊಬ್ಬ ಅಸೌಖ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನಿನ್ನೆ ನಡೆದಿದೆ.

ಮೂಲತಃ ಕಾಸರಗೋಡಿನವನಾಗಿದ್ದು, ಮಂಗಳೂರಿನಲ್ಲಿ ನೆಲೆಸಿದ್ದ ಉದಯಕುಮಾರ್ ರೈ (೨೫) ಮೃತಪಟ್ಟ ಯುವಕ.

ಗಾಂಜಾ ಪ್ರಕರಣದಲ್ಲಿ ಉರ್ವಾ ಪೊಲೀಸರಿಂದ ಬಂಧಿತನಾಗಿದ್ದ ಈತ ಹಲವು ಸಮಯಗಳಿಂದ ಖಿನ್ನತೆಗೊಳಗಾಗಿದ್ದ. ಇದರಿಂದಗಾಗಿ ಸಹಕೈದಿಗಳ ಕೆಲವೊಮ್ಮೆ ವಿನಾಕಾರಣ ವಾಗ್ವಾದ ಕೂಡ ಮಾಡುತ್ತಿದ್ದ ಎನ್ನಲಾಗಿದೆ. ನಿನ್ನೆ ಆತನ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಜೈಲು ಸಿಬ್ಬಂದಿ ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಆತ ಮೃತಪಟ್ಟಿದ್ದಾನೆ.

ಖಿನ್ನತೆಯ ಸಮಸ್ಯೆಯಿಂದ ಬಳಲುತ್ತಿದ್ದ ಆರೋಪಿ ಉದಯ ಕುಮಾರ್ ಗೆ ಹಲವು ಬಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಒದಗಿಸಲಾಗಿತ್ತು. ಸುಮಾರು ೧೦ ದಿನಗಳ ಹಿಂದೆ ಈತನ ಮೇಲೆ ಸಹಕೈದಿಗಳು ಯಾವುದೋ ಕಾರಣದಿಂದ ಹಲ್ಲೆ ಮಾಡಿದ್ದರು ಎನ್ನಲಾಗಿದೆ.

ಇದರಿಂದ ಆತ ಗಂಭೀರವಾಗಿ ಗಾಯಗೊಂಡಿದ್ದ. ನಿನ್ನೆ ಉದಯಕುಮಾರ್ ಆರೋಗ್ಯದಲ್ಲಿ ಏರುಪೇರು ಕಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಆತ ಮೃತಪಟ್ಟಿದ್ದಾನೆ. ಆತನ ಸಾವಿಗೆ ನೈಜ ಕಾರಣವೇನೆಂದು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ. ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment