ಅಸಹನೆ, ಅಸೂಯೆ ತ್ಯಜಿಸಿ ಯಶಸ್ವಿ ಉದ್ಯಮಿಗಳಾಗಿ ಮಹಿಳೆಯರಿಗೆ ರತ್ನಪ್ರಭ ಮನವಿ

(ನಮ್ಮ ಪ್ರತಿನಿಧಿಯಿಂದ)
ಬೆಂಗಳೂರು, ಆ. ೨೩- ಮಹಿಳೆಯರು ಉದ್ಯಮ ಸ್ಥಾಪಿಸಿ ಪ್ರಗತಿ ಹೊಂದಲು ಸಾಕಷ್ಟು ಅವಕಾಶಗಳಿವೆ. ಆ ಅವಕಾಶಗಳನ್ನು ಮಹಿಳೆಯರು ಬಳಸಿಕೊಂಡು ಉದ್ಯಮಶೀಲರಾಗಬಹುದು ಎಂದು ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಹೇಳಿದರು.
ಮಹಿಳಾ ಉದ್ಯಮಿಗಳ ಸಂಘಟನೆ, ಇ-ಮರ್ಜ್ ನಗರದಲ್ಲಿಂದು ಆಯೋಜಿಸಿದ್ದ ಮಹಿಳಾ ಉದ್ಯಮಿಗಳ ಸಂಪರ್ಕ, ಜಾಲಬಂಧಗಳ ನಿವಾರಣೆ ಹಾಗೂ ಹೊರಬರುವಿಕೆ ಕುರಿತ ಅಂತಾರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ತಮ್ಮೊಳಗಿನ ಅಸಹನೆ, ಅಸೂಯೆ ಎಲ್ಲವನ್ನು ಬಿಟ್ಟು ಎಲ್ಲರ ಜತೆ ಒಟ್ಟಾಗಿ, ಒಂದಾದರೆ ಯಶಸ್ವಿ ಉದ್ಯಮಿಯಾಗಿ ಬೆಳೆಯಲು ಸಾಕಷ್ಟು ಅವಕಾಶಗಳಿವೆ ಎಂದರು.
ಉದ್ಯಮಿಶೀಲ ಮಹಿಳೆ ತನ್ನದೇ ಆದ ನೇರ ಗೆರೆಯನ್ನು ನಿರ್ಮಿಸಿಕೊಂಡು ಎಲ್ಲ ಕಟ್ಟುಪಾಡುಗಳಿಂದ ಹೊರ ಬಂದು ಯಶಸ್ವಿ ಉದ್ಯಮಿಯಾಗಿ ಬೆಳೆಯಬಹುದಾಗಿದೆ. ಅದಕ್ಕೆ ಸಾಕಷ್ಟು ಅವಕಾಶಗಳು ಜಗತ್ತಿನಲ್ಲಿ ಇವೆ ಎಂದರು.
ಮಹಿಳೆಯರನ್ನು ಹಲವು ಕಟ್ಟುಪಾಡುಗಳಿಗೆ ನಿರ್ಬಂಧಿಸದೆ ಪೋಷಕರು ಅವರನ್ನು ಗಂಡು ಮಕ್ಕಳಂತೆ ಭಾವಿಸಿ ಬೆಳೆಸಿದರೆ ಮಹಿಳೆಯರು ಪ್ರಗತಿ ಹೊಂದಲು ಸಾಧ್ಯವಾಗುತ್ತದೆ ಎಂದರು.
ಹೆಣ್ಣು ಮಕ್ಕಳು ಮಾತ್ರ ಹಬ್ಬ ಮಾಡಬೇಕು, ಉಪವಾಸ ಮಾಡಬೇಕು ಎಂಬ ಕಟ್ಟುಪಾಡುಗಳಿಗೆ ಅವರುಗಳನ್ನು ಬಂಧಿಯನ್ನಾಗಿಸದೆ ಅವರಿಗೆ ಇಷ್ಟ ಇದ್ದರೆ ಎಲ್ಲವನ್ನು ಮಾಡಿಕೊಳ್ಳಲು ಬಿಡಬೇಕು. ಒತ್ತಡ ಹೇರುವ ಕೆಲಸ ಆಗಬಾರದು ಎಂದರು.
ಮಹಿಳೆಯರು ಉತ್ತಮವಾಗಿ ಕೆಲಸ ಮಾಡುತ್ತಾರೆ ಎಂಬುದಕ್ಕೆ ಕೊಡಗಿನ ಜಿಲ್ಲಾಧಿಕಾರಿ ಶ್ರೀವಿದ್ಯಾರವರನ್ನು ಉದಾಹರಿಸಬಹುದು. ಪ್ರವಾಹ ಸಂದರ್ಭದಲ್ಲಿ ಅವರು ದಿಟ್ಟವಾಗಿ ನಿಂತು ದಕ್ಷತೆಯಿಂದ ಕೆಲಸ ಮಾಡಿ ಹಲವರ ಪ್ರಾಣ ಕಾಪಾಡಿದ್ದಾರೆ. ಅವರಿಗೆ ಪ್ರಶಂಸೆಯ ಸುರಿಮಳೆಯೇ ಆಗುತ್ತಿದೆ. ಒಂದು ವರ್ಷದ ಹಿಂದೆ ಕೊಡಗಿಗೆ ಮಹಿಳಾ ಜಿಲ್ಲಾಧಿಕಾರಿಯನ್ನು ನೇಮಕ ಮಾಡಲು ಸರ್ಕಾರದಲ್ಲಿ ಕೆಲವರು ಹಿಂದೇಟು ಹಾಕಿದ್ದರು. ಆದರೆ ತಾವು ಮಹಿಳಾ ಅಧಿಕಾರಿಯ ಪರ ನಿಂತು ಕೊಡಗಿಗೆ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಲು ಕಾರಣವಾಗಿದ್ದೆ. ಈಗ ಆ ಮಹಿಳಾ ಜಿಲ್ಲಾಧಿಕಾರಿಯಾಗಿ ಪುರುಷರನ್ನು ಮೀರಿಸುವಂತೆ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಇಂಟೆಲ್‌ನ ಭಾರತದ ಮುಖ್ಯಸ್ಥೆ ನಿವೃತ್ತಿರಾಯ್, ಆಸ್ಟ್ರೇಲಿಯಾದ ವಿಕ್ಟೋರಿಯಾ ಸರ್ಕಾರದ ವ್ಯಾಪಾರ ಮತ್ತು ಹೂಡಿಕೆ ಆಯುಕ್ತೆ ನಿಷಲ್‌ವಾಡೆ, ರಾಜ್ಯ ಸರ್ಕಾರದ ಉದ್ಯೋಗ ಮಿತ್ರ ಆಯುಕ್ತ ದರ್ಪಣ್ ಜೈನ್, ಖಾಸಿಯಾದ ಅಧ್ಯಕ್ಷ ಬಸವರಾಜು ಎಸ್. ಜವಳಿ, ಈ-ಮರ್ಜ್ ಅಧ್ಯಕ್ಷೆ ರಾಜಲಕ್ಷ್ಮಿ, ಸಂಸ್ಥಾಪಕ ಅಧ್ಯಕ್ಷೆ ಉಮಾರೆಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Comment