ಅಸಹಜ ಧಾರವಾಹಿಗಳಿಂದ ಸಮಾಜದ ಮೇಲೆ ದುಷ್ಪರಿಣಾಮ

ಹುಳಿಯಾರು, ಆ. ೧೪- ಇಂದು ಮಾಧ್ಯಮ ಕ್ಷೇತ್ರದಲ್ಲಿ ಧಾರಾವಾಹಿಗಳು ಏನನ್ನು ತೋರಿಸಬಾರದೋ ಅದನ್ನು ಬಿಚ್ಚಿಡುತ್ತಿರುವುದು ಬೇಸರದ ಸಂಗತಿಯಾಗಿದ್ದು, ಇದರಿಂದ ಸಮಾಜ ಎತ್ತ ಸಾಗುತ್ತಿದೆ ಎಂದು ತಿಳಿಯದಾಗಿದೆ. ಟಿವಿ ಪ್ರಬಲ ಮಾಧ್ಯಮವಾಗಿದ್ದು, ಅಸಹಜತೆಯಿಂದ ಕೂಡಿರುವ ಸಾಂಸಾರಿಕ ಕಥೆಯ ಧಾರವಾಹಿಗಳು ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತಿರುವುದು ಆತಂಕಕಾರಿ ವಿಷಯವಾಗಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ ಜೆ. ಲೋಕೇಶ್‌ ದುಗುಡ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಕೋಡಿಪಾಳ್ಯದ ಧ್ಯಾನನಗರಿಯ ಸಾಂಸ್ಕೃತಿಕ ಸದನದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಪಟ್ಟಣದ ಶ್ರೀಮಾತಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿರುವ ಮೂರು ದಿನಗಳ ಹವ್ಯಾಸಿ ನಾಟಕೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪೌರಾಣಿಕ ನಾಟಕಗಳಿಗೂ ಹಾಗೂ ಹವ್ಯಾಸ ನಾಟಕಗಳಿಗೂ ಅಂತರವಿದ್ದು ಪೌರಾಣಿಕ ನಾಟಕ ಅದ್ಭುತವಾಗಿರುತ್ತದೆ. ಕೋಪ, ಪ್ರೀತಿ ಎಲ್ಲವನ್ನೂ ವೈಭವೀಕರಿಸಿದರೆ ಹವ್ಯಾಸಿ ರಂಗಭೂಮಿ ಅದನ್ನು  ಸಂಶೋಧನಾ ದೃಷ್ಟಿಯಿಂದ ನೋಡುವ ಮೂಲಕ ಸಮಾಜದ ಕನ್ನಡಿಯಾಗುತ್ತದೆ. ವೃತ್ತಿರಂಗಭೂಮಿಯ ಒಂದೊಂದು ಪಾತ್ರದಲ್ಲೂ ನಿಮ್ಮನ್ನೇ ನೀವು ಕಂಡುಕೊಳ್ಳಬಹುದು ಎಂದರು.

ರಂಗಭೂಮಿಗೆ ಕಿರುತೆರೆ ಮಾಧ್ಯಮದಿಂದ ಹಿನ್ನಡೆಯಾಗುತ್ತಿದ್ದು, ಧಾರಾವಾಹಿಗಳು ಜನರ ಮನಸ್ಸನ್ನು ಆಕ್ರಮಿಸಿಕೊಳ್ಳುತ್ತಿದೆ. ಆದರೆ ಬಿತ್ತರವಾಗುತ್ತಿರುವ ಬಹುತೇಕ ಧಾರಾವಾಹಿಗಳಲ್ಲಿ ದ್ವೇಷ, ಮತ್ಸರ, ಕುಟುಂಬ ಕಲಹವೇ ರಾರಾಜಿಸುತ್ತಿದ್ದು, ಇಂತಹ ಧಾರಾವಾಹಿಯನ್ನು ಮಹಿಳೆಯರು ತಲ್ಲೀನರಾಗಿ ನೋಡುತ್ತಿರುವುದರಿಂದ ಅವರ ಮನಸ್ಸಿನ ಮೇಲೆ ಸಾಕಷ್ಟು ದುಷ್ಪರಿಣಾಮ ಉಂಟಾಗುತ್ತಿದೆ. ಯಾವುದೇ ಕಾರಣಕ್ಕೂ ನಿಮ್ಮ ಮಕ್ಕಳ ಹಿತದೃಷ್ಟಿಯಿಂದಾಗಿ ಹೆಣ್ಣು ಮಕ್ಕಳು ಏನನ್ನು ತ್ಯಾಗ ಮಾಡುತ್ತಿದ್ದರೂ ಪರವಾಗಿಲ್ಲ. ನಿಮ್ಮ ಮಕ್ಕಳ ಹಿತದೃಷ್ಟಿಯಿಂದ ಸಂಜೆ 6 ಗಂಟೆಯಿಂದ 9ರ ವರೆಗಿನ ಧಾರವಾಹಿಯ ಚಾನೆಲ್ ಬಂದ್ ಮಾಡಿ. ಸಾಕಷ್ಟು ಅಸಹಜತೆ, ಅಸ್ವಾಭಾವಿಕತೆಯಿಂದ ಕೂಡಿರುವ ಧಾರಾವಾಹಿಗಳಲ್ಲಿ ಯಾವುದು ಸರಿ ಯಾವುದು ತಪ್ಪು ಎಂದು ನಿಮ್ಮ ಅರಿವಿಗೆ ಬಂದು ನಿಮ್ಮ ದೃಷ್ಟಿಯಿಂದ ಸರಿ ಇದೆ ಎಂದು ಅನ್ನಿಸಿದರೂ ಸಹ ಅದೇ ಧಾರಾವಾಹಿ ನಿಮ್ಮ ಪಕ್ಕದಲ್ಲೇ ಕುಳಿತಿರುವ ಮಕ್ಕಳ ಮೇಲೆ ಎಷ್ಟರಮಟ್ಟಿಗಿನ ದುಷ್ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ನೀವ್ಯಾರೂ ಆಲೋಚಿಸುತ್ತಿಲ್ಲ. ಅಸಹಜ ಪಾತ್ರಗಳು ಸಹಜ ಅನ್ನಿಸುವ ಮೂಲಕ ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತದೆ. ಮಕ್ಕಳಿಗೆ ಬುದ್ಧಿವಿಕಸನಕ್ಕೆ ಅನುಕೂಲವಾಗುವಂತಹ ಧಾರಾವಾಹಿಗಳನ್ನು ತೋರಿಸಿ ಎಂದರು.

ಕರ್ನಾಟಕ ನಾಟಕ ಅಕಾಡೆಮಿ ಕನ್ನಡ ರಂಗಭೂಮಿಯ ಒಂದು ಪ್ರಾತಿನಿಧಿಕ ಸಂಸ್ಥೆಯಾಗಿದ್ದು, ಸಂಸ್ಥೆ ಮಾಡಲು ಕೂಡ ಕಷ್ಟವೆನಿಸುವ ಒಂದು ಅದ್ಭುತವಾದ ರಂಗಮಂದಿರವನ್ನು ಕರ್ನಾಟಕದ ಒಂದು ಮೂಲೆಯ ಹಳ್ಳಿ ಭಾಗದಲ್ಲಿ ನಿರ್ಮಿಸುವ ಮೂಲಕ ಇಲ್ಲಿನ ಕಲಾಭಿಮಾನಿಗಳನ್ನು ರಂಗಭೂಮಿಯತ್ತ ಸೆಳೆದು ಸಾಂಸ್ಕೃತಿಕ ಲೋಕದ ಸಂಪತ್ತನ್ನು ಇಲ್ಲಿನ ಜನರಿಗೆ ಉಣಬಡಿಸುತ್ತಿರುವ ಗಂಗಾಧರ್ ಅವರ ಕಾರ್ಯ ಶ್ಲಾಘನೀಯವಾಗಿದ್ದು, ಕನ್ನಡ ರಂಗಭೂಮಿಯ ಪರವಾಗಿ ಧನ್ಯವಾದ ಅರ್ಪಿಸುತ್ತೇನೆ ಎಂದರು.

ಚಿತ್ರನಟ ಹಾಗೂ ರಂಗಭೂಮಿ ಕಲಾವಿದ ಮಂಡ್ಯರಮೇಶ್ ಮಾತನಾಡಿ, ಅವಕಾಶಗಳಿಲ್ಲ ಎಂದು ಕೊರಗುವ ಬದಲು ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದರು. ಒಂದು ವರ್ಷದಲ್ಲಿ ಸಾಕಷ್ಟು ರಂಗಭೂಮಿ ಚಟುವಟಿಕೆಗಳನ್ನು ನಡೆಸುತ್ತಿರುವುದರಲ್ಲಿ ಪಟ್ಟಣದ ಸಾಂಸ್ಕೃತಿಕ ಸದನ ಕ್ರಿಯಾಶೀಲವಾಗಿರುವುದು ಶ್ಲಾಘನೀಯ. ಮಕ್ಕಳಿಗೆ ರಂಗಭೂಮಿ ಉಳಿಸುವ ನಿಟ್ಟಿನಲ್ಲಿ ವಾರಾಂತ್ಯ ನಿರಂತರವಾಗಿ ರಂಗಭೂಮಿ ಶಿಕ್ಷಣ ಕೊಡಿ. ಪೌರಾಣಿಕ, ಜಾನಪದ ನಾಟಕಗಳು ಉತ್ತುಂಗ ಸ್ಥಿತಿಯಲ್ಲಿದ್ದಾಗ ಗಾಡಿ ಕಟ್ಟಿಕೊಂಡು ಜನ ಬರುತ್ತಿದ್ದ ಸ್ಥಿತಿ ಮತ್ತೆ ಮರುಕಳಿಸುವಂತಾಗಲಿ ಎಂದರು.

ಬಿಎಂಎಸ್ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಕೃಷ್ಣಮೂರ್ತಿ ಬಿಳಿಗೆರೆ ಮಾತನಾಡಿ, ರಂಗಭೂಮಿ ಅದ್ಭುತವಾದ ಮಾಧ್ಯಮವಾಗಿದ್ದು, ಇದು ಕಲೆ ಹೇಗೋ ಹಾಗೆಯೇ ವಿಜ್ಞಾನ ಕೂಡ ಹೌದು. ರಂಗಭೂಮಿ ದುಡಿಯುವ ವರ್ಗದವರ ಜೀವಾಳವಾಗಿದ್ದು, ಸಾಂಸ್ಕೃತಿಕ ಕ್ಷೇತ್ರವನ್ನು ಪಟ್ಟು ಹಿಡಿದು ಉಳಿಸಿಕೊಳ್ಳಬೇಕಾಗಿದೆ. ರಂಗಭೂಮಿ ಕುರಿತು ಕಾರ್ಯಾಗಾರ ಹಮ್ಮಿಕೊಳ್ಳಬೇಕಾಗುತ್ತದೆ ಹಾಗೂ ಕಲಾಸಕ್ತರನ್ನು ತಲುಪಬೇಕಿದೆ ಎಂದರು.

ಪಟ್ಟಣದ ಸಾಂಸ್ಕೃತಿಕ ಸದನದಲ್ಲಿ ಅದ್ಭುತವಾದ ರಂಗವೇದಿಕೆ ಇದ್ದು, ಈ ಹಿನ್ನೆಲೆಯಲ್ಲಿ ರಾತ್ರಿಯೇ ಇಲ್ಲಿ ನಾಟಕ ಪ್ರದರ್ಶನ ಮಾಡುವ ಬದಲು ಮಧ್ಯಾಹ್ನದ ಸಮಯದಲ್ಲೂ ಪ್ರದರ್ಶನ ಮಾಡಬಹುದಾಗಿದೆ. ಪಟ್ಟಣದಲ್ಲಿ ಹತ್ತಾರು ಶಾಲಾಕಾಲೇಜುಗಳಿದ್ದು, ಸಹಸ್ರಾರು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಹೆಚ್ಚಿನ ಪ್ರೇಕ್ಷಕರನ್ನು ತಲುಪಬಹುದಾಗಿದೆ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಪಟ್ಟಣದ ಹಿರಿಯರಂಗ ಕಲಾವಿದ ಶ್ಯಾನುಭೋಗ್‌ರಾಜಣ್ಣ ಉದ್ಘಾಟನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾದ ಬಿ. ವಿಠ್ಠಲ್, ಬ್ಯಾಂಕ್ ಮರುಳಪ್ಪ, ಶ್ರೀಮಾತಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಗಂಗಾಧರ್, ರಂಗಚೇತನದ ಸಂಸ್ಥಾಪನಾ ಕಾರ್ಯದರ್ಶಿ ನಂಜುಂಡಸ್ವಾಮಿತೊಟ್ಟವಾಡಿ ಮತ್ತಿತರರು ಉಪಸ್ಥಿತರಿದ್ದರು.

Leave a Comment