ಅಷ್ಟಪಥದ ರಸ್ತೆಗೆ ಅನಿಷ್ಟ ನಿವಾರಣೆ

ಬೆಂಗಳೂರು, ಜ. ೧೬- ನಗರದ ಓಕಳಿಪುರಂ ಜಂಕ್ಷನ್‌ನಿಂದ ಫೌಂಟೇನ್ ವೃತ್ತದವರೆಗೆ (ಸಂಗೊಳ್ಳಿ ರಾಯಣ್ಣ) ಅಷ್ಟಪಥದ ಸಿಗ್ನಲ್ ಮುಕ್ತ ಕಾರಿಡಾರ್ ಕಾಮಗಾರಿ ನಿರೀಕ್ಷೆಗೂ ಮೀರಿ ವೇಗವನ್ನು ಪಡೆದುಕೊಂಡಿದೆ. ಆರು ತಿಂಗಳ ಅವಧಿಯಲ್ಲೇ ಶೇ. 50 ರಷ್ಟು ಕಾಮಗಾರಿ ಪೂರ್ಣಗೊಳಿಸಲಾಗಿದೆ.
ಕಳೆದ ವರ್ಷ ಜೂನ್ ತಿಂಗಳಲ್ಲಿ ಆರಂಭವಾದ ಎಂಟು ಪಥದ ಕಾಮಗಾರಿ ಈ ವರ್ಷದ ಡಿಸೆಂಬರ್ ಅಂತ್ಯಕ್ಕೆ ಪೂರ್ಣಗೊಳ್ಳಲಿದ್ದು, ಈ ಭಾಗದ ವಾಹನ ಸಂಚಾರ ದಟ್ಟಣೆ ಕೊನೆಗೊಳ್ಳಲಿದೆ.
ಅಷ್ಟಪಥದ ಕಾಮಗಾರಿ ಯೋಜನೆಗೆ ಹಲವಾರು ವಿಘ್ನಗಳು ಎದುರಾಗಿದ್ದವು. ರೈಲ್ವೆ ಇಲಾಖೆಗೆ ಸೇರಿದ 3.16 ಎಕರೆ ಜಾಗವನ್ನು ಕಾಮಗಾರಿ ಉದ್ದೇಶಕ್ಕಾಗಿ ಪಡೆದುಕೊಳ್ಳುವುದು ಸವಾಲಿನ ಕೆಲಸವೇ ಆಗಿತ್ತು. ಈಗ ಎಲ್ಲ ತೊಂದರೆಗಳು ನಿವಾರಣೆಗೊಂಡು ಕಾಮಗಾರಿ ಸಮರೋಪಾದಿಯಲ್ಲಿ ಆರಂಭಗೊಂಡಿದೆ.
ಈ ಯೋಜನೆಯ ಒಟ್ಟು ವೆಚ್ಚ 115.50 ಕೋಟಿ ರೂ. ಆಗಿದ್ದು, ರೈಲ್ವೆ ಇಲಾಖೆಗೆ ನೀಡಿದ್ದ ಜಾಗಕ್ಕೆ ಪರ್ಯಾಯವಾಗಿ ಬಿನ್ನಿಮಿಲ್‌ನ 3.16 ಎಕರೆ ಜಾಗವನ್ನು ಹಸ್ತಾಂತರ ಮಾಡಲಾಗಿದೆ.
ರೈಲ್ವೆ ಇಲಾಖೆಯು 8 ವಾಹನ, ಕೆಳಸೇತುವೆ ಹಾಗೂ 2 ಪಾದಚಾರಿ ಕೆಳಸೇತುವೆ ಮಾರ್ಗಗಳ ಕಾಮಗಾರಿಯನ್ನು ಆರಂಭಿಸಿದೆ. ಇದಕ್ಕಾಗಿ ಬಿಬಿಎಂಪಿಯು ಜಾಗದ ಮೌಲ್ಯ 150 ಕೋಟಿ ರೂ. ಹಾಗೂ ಕಾಮಗಾರಿಗಳ ವೆಚ್ಚಕ್ಕಾಗಿ 80 ಕೋಟಿ ರೂ. ಸೇರಿದಂತೆ ಒಟ್ಟು 235 ಕೋಟಿ ರೂ.ಗಳನ್ನು ರೈಲ್ವೆ ಇಲಾಖೆಗೆ ಪಾವತಿಸಿದೆ.
ಮಾರ್ಚ್ ತಿಂಗಳ ಅಂತ್ಯದೊಳಗೆ ರೈಲ್ವೆ ಇಲಾಖೆಯು ತನಗೆ ವಹಿಸಿರುವ 10 ರೈಲ್ವೆ ಕೆಳಸೇತುವೆಗಳ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. ನಂತರ ಬಿಬಿಎಂಪಿ ಮುಂದಿನ 8 ತಿಂಗಳ ಒಳಗೆ ಉಳಿದ ಕಾಮಗಾರಿಯನ್ನು ಪೂರ್ಣಗೊಳಿಸಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸುತ್ತಾರೆ.
ಈ ಯೋಜನೆಗೆ 2012 ಡಿಸೆಂಬರ್ 20 ರಂದು ಗುದ್ದಲಿ ಪೂಜೆ ನೆರವೇರಿಸಲಾಗಿತ್ತು. ಆದರೆ ರೈಲ್ವೆ ಇಲಾಖೆ ಅಸಹಕಾರದಿಂದಾಗಿ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು.
ಅಲ್ಲದೆ ಈ ಭಾಗದಲ್ಲಿ ಹಳೆಯದಾದ ಬೆಸ್ಕಾಂ, ಜಲಮಂಡಳಿ, ಬಿಎಸ್ಎನ್ಎಲ್ ಸಂಸ್ಥೆಗಳು ಅಳವ‌ಡಿಸಿದ್ದ ಪೈಪುಗಳು ಮತ್ತು ಕೇಬಲ್‌ಗಳನ್ನು ಸ್ಥಳಾಂತರಿಸುವುದು ಕಷ್ಟಸಾಧ್ಯವಾಗಿತ್ತು. ಇದೀಗ ಎಲ್ಲ ತೊಡಕುಗಳು ನಿವಾರಣೆಗೊಂಡಿದ್ದು ಕಾಮಗಾರಿ ಪ್ರಗತಿಯನ್ನು ಚುರುಕುಗೊಳಿಸಲಾಗಿದೆ.
ಸದಾ ವಾಹನ ಸಂಚಾರ ದಟ್ಟಣೆ ಇರುವ ಓಕಳೀಪುರಂ ಭಾಗದಲ್ಲಿ ಕಾಮಗಾರಿ ನಡೆಸುವುದು ಸುಲಭಸಾಧ್ಯವಲ್ಲ. ಪ್ರತಿ ಹಂತದ ಕಾಮಗಾರಿ ವೇಳೆ ಸಂಚಾರಿ ಪೊಲೀಸರ ಸಹಕಾರ ಪಡೆದೇ ಮಾಡಬೇಕು. ಒಂದು ವೇಳೆ ವಾಹನ ಸಂಚಾರವು ಪರ್ಯಾಯ ವ್ಯವಸ್ಥೆ ಮಾಡದಿದ್ದರೆ ಕಾಮಗಾರಿಗೂ ಅಡಚಣೆಯಾಗುತ್ತದೆ ಎನ್ನುತ್ತಾರೆ.
ಉದ್ದೇಶಿತ ಕಾರಿಡಾರ್ ಯೋಜನೆಯು ಪೂರ್ಣಗೊಂಡು ಸಾರ್ವಜನಿಕ ಬಳಕೆಗೆ ಬಂದಾಗ ರಾಜಾಜಿನಗರ, ವಿಜಯನಗರ, ಬಸವೇಶ್ವರನಗರ, ಮಲ್ಲೇಶ್ವರಂ, ಓಕಳೀಪುರಂ, ಶ್ರೀರಾಂಪುರ, ಸಿಟಿ ಬಸ್ ನಿಲ್ದಾಣ, ರೈಲು ನಿಲ್ದಾಣ, ಆನಂದರಾವ್ ವೃತ್ತದ ಭಾಗವು ಸೇರಿದಂತೆ ಹಲವು ಭಾಗಗಳಲ್ಲಿ ಸಂಚಾರ ದಟ್ಟಣೆಯ ತೀವ್ರತೆ ಕಡಿಮೆಯಾಗಲಿದೆ.

ಸಿಗ್ನಲ್ ಮುಕ್ತ ಅಷ್ಟಪಥ ಕಾರಿಡಾರ್
* ಓಕಳೀಪುರಂ ವೃತ್ತದಿಂದ ಫೌಂಟೇನ್ ವೃತ್ತದವರೆಗೆ 8 ಪಥದ ದ್ವಿಮುಖ ಸಂಚಾರ ರಸ್ತೆ ನಿರ್ಮಾಣ.
* ರಾಜಾಜಿನಗರದಿಂದ ಮಲ್ಲೇಶ್ವರಂ ಕಡೆಗೆ ತಡೆರಹಿತ ಸಂಚಾರಕ್ಕಾಗಿ ದ್ವಿಪಥದ ಏಕಮುಖ ಸಂಚಾರ.
* ರಾಜಾಜಿನಗರ ರೈಲ್ವೆ ನಿಲ್ದಾಣಕ್ಕೆ ಎರಡು ಪಥಗಳ ಏಕಮುಖ ಸಂಚಾರದ ಮೇಲು ಸೇತುವೆ.
* ಮಲ್ಲೇಶ್ವರಂ ಭಾಗದಿಂದ ರಾಜಾಜಿನಗರ ಭಾಗಕ್ಕೆ ಏಕಮುಖ ಎರಡು ಪಥಗಳ ಅಂಡರ್ ಪಾಸ್.
* ಮಲ್ಲೇಶ್ವರಂ ಕಡೆಯಿಂದ ರೈಲ್ವೆ ನಿಲ್ದಾಣದ ಕಡ‌ಗೆ ಎರಡು ಪಥಗಳ ಏಕಮುಖ ಮೇಲುಸೇತುವೆ.
* ರೈಲು ನಿಲ್ದಾಣದಿಂದ ರಾಜಾಜಿನಗರದ ಕಡೆಗೆ ಎರಡು ಪಥಗಳ ಏಕಮುಖ ರಸ್ತೆ.
* ರೈಲು ನಿಲ್ದಾಣದಿಂದ ಮಲ್ಲೇಶ್ವರ ಹಾಗೂ ಮೆಜೆಸ್ಟಿಕ್ ಕಡೆಗೆ ಮೂರು ಪಥಗಳ ಏಕಮುಖ ಮೇಲುಸೇತುವೆ.
* ಮೆಜೆಸ್ಟಿಕ್ ರೈಲ್ವೆ ನಿಲ್ದಾಣಕ್ಕೆ ಎರಡು ಪಥಗಳ ಏಕಮುಖ ರಸ್ತೆ.

Leave a Comment