ಅವ್ಯವಹಾರ ಖಂಡಿಸಿ ರೈತರ ಪ್ರತಿಭಟನೆ

ಕೆ.ಆರ್.ಪೇಟೆ, ಆ.1- ಕಳೆದ ನಾಲ್ಕು ವರ್ಷಗಳ ಹಿಂದೆ ವಿದ್ಯುತ್ ಅಕ್ರಮ-ಸಕ್ರಮ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದ ತಾಲೂಕಿನ ನೂರಾರು ರೈತರಿಗೆ ಸರ್ಕಾರದಿಂದ ಮಂಜೂರಾದ ಕೋಟ್ಯಾಂತರ ರೂ ಮೌಲ್ಯದ ವಿದ್ಯುತ್ ಟಿಸಿ, ವಿದ್ಯುತ್ ಕಂಬಗಳು, ತಂತಿಗಳು ಸೇರಿದಂತೆ ಇತರೆ ವಿದ್ಯುತ್ ಸಾಮಗ್ರಿಗಳು ಕಣ್ಮರೆಯಾಗಿವೆ ಇದರಲ್ಲಿ ಭಾರೀ ಅವ್ಯವಹಾರ ನಡೆಸಲಾಗಿದೆ ಹಾಗಾಗಿ ತಪ್ಪಿತಸ್ಥ ಚೆಸ್ಕಾಂ ಅಧಿಕಾರಿಗಳು ಮತ್ತು ಇಂಜಿನಿಯರುಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ತಾಲೂಕು ರೈತ ಸಂಘದ ಕಾರ್ಯಕರ್ತರು ಕಳೆದ ಎರಡನೇ ದಿನವೂ ಪ್ರತಿಭಟನೆ ನಡೆಸಿದರು.
ಪಟ್ಟಣದ ಹೊಸಹೊಳಲು ರಸ್ತೆಯಲ್ಲಿರುವ ಚೆಸ್ಕಾಂ ವಿಭಾಗೀಯ ಕಚೇರಿಯ ಮುಂದೆ ಧರಣಿ ನಡೆಸಿದ ತಾಲೂಕು ರೈತ ಸಂಘದ ನೂರಾರು ಕಾರ್ಯಕರ್ತರು ತಾಲೂಕಿನಲ್ಲಿ ನೂರಾರು ರೈತರು ಅಕ್ರಮ-ಸಕ್ರಮ ಯೋಜನೆಯಡಿಯಲ್ಲಿ ತಮ್ಮ ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕವನ್ನು ಪಡೆಯಲು ಚೆಸ್ಕಾಂ ಇಲಾಖೆಗೆ ಹಣ ಪಾವತಿಸಿ ನಾಲ್ಕಾರು ವರ್ಷಗಳೇ ಕಳೆದಿದೆ. ಆದರೂ ರೈತರಿಗೆ ನಿಮ್ಮ ಟಿಸಿ ಬಂದಿಲ್ಲ ಎಂದು ಸಬೂಬು ಹೇಳುತ್ತಿದ್ದಾರೆ. ಇದರಿಂದ ಸುಮಾರು 1ಕೋಟಿ ರೂಗಳಷ್ಟು ಅವ್ಯವಹಾರ ನಡೆಸುವ ಮೂಲಕ ರೈತರಿಗೆ ವಂಚಿಸಿದ್ದಾರೆ. ಸಿನಿಯಾರಿಟಿ ಪ್ರಕಾರ ರೈತರಿಗೆ ವಿದ್ಯುತ್ ಟಿಸಿ ನೀಡದೇ ಲಂಚ ನೀಡಿದವರಿಗೆ ಟಿಸಿಗಳನ್ನು ನೀಡುವ ಮೂಲಕ ನಿಜವಾದ ಫಲಾನುಭವಿಗಳಿಗೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸಿಕೊಡದೇ ರೈತರ ಜೀವನದೊಂದಿಗೆ ಚೆಲ್ಲಾಟವಾಡುತ್ತಿರುವ ಸೆಸ್ಕ್ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಕೂಡಲೇ ರೈತವಿರೋಧಿ ಅಧಿಕಾರಿಗಳನ್ನು ಯಾವುದೇ ಮುಲಾಜಿಲ್ಲದೇ ಮಟ್ಟ ಹಾಕಬೇಕು. ರೈತರ ಸಂಕಷ್ಠಗಳಿಗೆ ಅಧಿಕಾರಿಗಳು ಪ್ರಾಮಾಣಿಕವಾಗಿ ಸ್ಪಂದಿಸುವ ಮೂಲಕ ರೈತರ ನೆರವಿಗೆ ಈ ಕೂಡಲೇ ಧಾವಿಸಿ ಬರಬೇಕು. ಕಳೆದ ಐದಾರು ವರ್ಷಗಳಿಂದ ಹಣ ಪಾವತಿಸಿ ತಮ್ಮ ಕೊಳವೆ ಬಾವಿಗಳ ವಿದ್ಯುತ್ ಸಂಪರ್ಕಕ್ಕಾಗಿ ಕಾಯುತ್ತಿರುವ ರೈತರ ಪಂಪ್‍ಸೆಟ್‍ಗಳಿಗೆ ಮೊದಲ ಆಧ್ಯತೆಯಲ್ಲಿ ವಿದ್ಯುತ್ ಸಂಪರ್ಕ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.
ಹಿರಿಯ ರೈತ ಮುಖಂಡ ಮುದುಗೆರೆ ರಾಜೇಗೌಡ, ತಾಲೂಕು ರೈತ ಸಂಘದ ಅಧ್ಯಕ್ಷ ಮರುವನಹಳ್ಳಿ ಶಂಕರ್, ಕಾರ್ಯದರ್ಶಿ ನಾರಾಯಣಸ್ವಾಮಿ, ರೈತ ಮುಖಂಡರಾದ ಬೂಕನಕೆರೆ ನಾಗರಾಜು, ಎಲ್.ಬಿ.ಜಗದೀಶ್, ಮುದ್ದುಕುಮಾರ್, ಮಾಕವಳ್ಳಿ ರವಿ, ನೀತಿಮಂಗಲ ಮಹೇಶ್, ನಗರೂರು ಕುಮಾರ್, ಕರೋಟಿ ತಮ್ಮಯ್ಯ, ಅಗ್ರಹಾರಬಾಚಹಳ್ಳಿ ವೆಂಕಟೇಶ್, ಸೀಮೆಮಹೇಂದ್ರ, ಹಕ್ಕಿಮಂಚನಹಳ್ಳಿ ಹೊನ್ನೇಗೌಡ, ಕುಪ್ಪಹಳ್ಳಿ ಎಲ್.ಐ.ಸಿ ಸುಬ್ರಹ್ಮಣ್ಯ, ಎಂ.ಸಿ.ರಾಮೇಗೌಡ ಸೇರಿದಂತೆ ನೂರಾರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಸಭೆಯಲ್ಲಿ ಕೆ.ಆರ್.ಪೇಟೆ ವಿಭಾಗೀಯ ಕೇಂದ್ರದ ಕಾರ್ಯನಿರ್ವಾಹಕ ಇಂಜಿನಿಯರ್ ಹರೀಶ್‍ಕುಮಾರ್, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕೃಷ್ಣ, ಎಇಇ ಶಿವಾನಂದ್, ಕಿರಿಯ ಇಂಜಿನಿಯರ್‍ಗಳಾದ ಶಿವಶಂಕರಮೂರ್ತಿ, ಎಸ್.ಪಿ.ನಾರಾಯಣ್, ರವೀಂದ್ರ, ನಟರಾಜು, ಕೃಷ್ಣೇಗೌಡ, ಫಾಜಿಲ್ ಅಹಮದ್, ಭಾಸ್ಕರ್, ಮನುಕುಮಾರ್ ಸೇರಿದಂತೆ ಎಲ್ಲ ಕಿರಿಯ ಇಂಜಿನಿಯರ್‍ಗಳು ಸಭೆಯಲ್ಲಿ ಭಾಗವಹಿಸಿ ರೈತರ ಸಮಸ್ಯೆಗಳಿಗೆ ಸ್ಪಂಧಿಸುವ ಭರವಸೆ ನೀಡಿದರು.

Leave a Comment